ಜನ್ಮದಲ್ಲಿ ಆತನ ಮುಖ ನೋಡಲ್ಲ: ಡಿವೋರ್ಸ್ ಆದ್ಮೇಲೆ ಫ್ರೆಂಡ್‌ಶಿಪ್ ಹೆಂಗೆ?: ಸೋನಿಯಾ ಅಗರ್‌ವಾಲ್
ತಮಿಳಿನ 'ಕಾದಲ್ ಕೊಂಡೇನ್' ಸಿನಿಮಾದಿಂದ ಗಮನ ಸೆಳೆದ ನಟಿ ಸೋನಿಯಾ ಅಗರಲ್‌ವಾಲ್. ತೆಲುಗು, ಕನ್ನಡ ಸಿನಿಮಾಗಳಲ್ಲೂ ಸೋನಿಯಾ ನಟಿಸಿದ್ದಾರೆ. ಚಂಡೀಗಢದ ಮೂಲಕ ಚೆಲುವೆ ದಕ್ಷಿಣದ ಸಿನಿಮಾಗಳಲ್ಲಿ ನಟಿಸಿ ಇಲ್ಲದೇ ಮದುವೆ ಆಗಿ ಸೆಟ್ಲ್ ಆಗಿಬಿಟ್ಟರು. ಧನುಷ್ ಸಹೋದರ ಸೆಲ್ವ ರಾಘವನ್ ಕೈ ಹಿಡಿದಿದ್ದ ನಟಿ ಬಳಿಕ ಡಿವೋರ್ಸ್ ಪಡೆದರು.
ಸೆಲ್ವ ರಾಘವನ್ ನಿರ್ದೇಶನದ 'ಕಾದಲ್ ಕೊಂಡೇನ್' ಹಾಗೂ '7ಜಿ ರೇನ್‌ಬೊ ಕಾಲೋನಿ' ಸಿನಮಾಗಳಲ್ಲಿ ಸೋನಿಯಾ ನಾಯಕಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರು ಪ್ರೀತಿಸಿ ಮದುವೆ ಆಗಿದ್ದರು. 2010ರಲ್ಲಿ ಸೋನಿಯಾಗಿ ಡಿವೋರ್ಸ್ ನೀಡಿದ ಸೆಲ್ವ ರಾಘವನ್ ಮರುವರ್ಷವೇ ಮತ್ತೊಂದು ಮದುವೆ ಆದರು. ಆದರೆ ಸೋನಿಯಾ ಮಾತ್ರ ಒಂಟಿಯಾಗಿಯೇ ಜೀವನ ಸಾಗಿಸುತ್ತಿದ್ದಾರೆ.

ಇತ್ತೀಚೆಗೆ ಸಂದರ್ಶವೊಂದರಲ್ಲಿ ಸೋನಿಯಾ ಅಗರಲ್‌ವಾಲ್ ತಮ್ಮ ಡಿವೋರ್ಸ್, ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. "ಸೆಲ್ವ ರಾಘವನ್ ಬಹಳ ಹಠವಾದಿ. ಆದರೆ ವೈಯಕ್ತಿಕ ಜೀವನದಲ್ಲಿ ಬಹಳ ಒಳ್ಳೆ ವ್ಯಕ್ತಿ. ಸದಾ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುತ್ತಾರೆ. ಸಿನಿಮಾ, ಬರವಣಿಗೆಯಲ್ಲಿ ಸದಾ ತಮ್ಮದೇ ಲೋಕದಲ್ಲಿ ಕಳೆದು ಹೋಗಿರುತ್ತಾರೆ. ಆದರೆ ಆತನ ಜೊತೆ ವೈವಾಹಿತ ಜೀವನದ ಬಗ್ಗೆ ಮತ್ತೆ ಮಾತನಾಡುವ ಪ್ರಮೇಯವೇ ಇಲ್ಲ" ಎಂದಿದ್ದಾರೆ.
"ನಾವಿಬ್ಬರು ಯಾಕೆ ದೂರಾಗಿದ್ದು ಎಂದು ನಮಗೆ ಮಾತ್ರ ಗೊತ್ತು. ಸದ್ಯ ಆತನ ಹಾದಿಯಲ್ಲಿ ಬಹಳ ಸಂತೋಷವಾಗಿ ಇದ್ದಾರೆ, ನಾನು ಕೂಡ ಸಂತೋಷವಾಗಿಯೇ ಇದ್ದೇನೆ. ಜೀವನದಲ್ಲಿ ಗಂಡ- ಹೆಂಡತಿಯಾಗಿ ಜೊತೆಯಾಗಿ ಇದ್ದವರು ಡಿವೋರ್ಸ್ ಪಡೆದು ದೂರಾದ ಮೇಲೆ ಮತ್ತೆ ಸ್ನೇಹಿತರಾಗಿ ಹೇಗೆ ಇರುತ್ತಾರೋ ನನಗೆ ಅರ್ಥವಾಗಲ್ಲ. ನನ್ನ ವಿಚಾರದಲ್ಲಿ ಅದು ಸಾಧ್ಯವೇ ಇಲ್ಲ ಎಂದಿದ್ದಾರೆ.
ಡಿವೋರ್ಸ್ ಬಳಿಕ ಮತ್ತೆ ಸೆಲ್ವ ರಾಘವನ್ ಜೊತೆ ಸ್ನೇಹ ಮುಂದುವರೆಸುವ ಕೆಲಸ ನಾನು ಮಾಡಲ್ಲ. ಆತ ನನ್ನ ಕಣ್ಣಿಗೆ ಮತ್ತೆ ಸ್ನೇಹಿತನಂತೆ ಕಾಣಿಸಲ್ಲ. ಪ್ರೀತಿ ಸತ್ತಮೇಲೆ ಸ್ನೇಹಿತನಂತೆ ಭಾವಿಸಲು ಸಾಧ್ಯವಿಲ್ಲ. ಜೀವನದಲ್ಲಿ ಮತ್ತೆ ಆತನ ಮುಖ ನೋಡಲ್ಲ. ಅಂತಹ ವ್ಯಕ್ತಿ ನನ್ನ ಜೀವನದಲ್ಲಿ ಇಲ್ಲದಂತೆಯೇ, ಎಂದು ಸೋನಿಯಾ ಅಗರ್‌ವಾಲ್ ಹೇಳಿದ್ದಾರೆ. ಮದುವೆ ನಂತರ ನನ್ನ ಸಿನಿ ಕರಿಯರ್ ಅಷ್ಟಾಗಿ ಚೆನ್ನಾಗಿರಲಿಲ್ಲ" ಎಂದು ಸೋನಿಯಾ ಹೇಳಿದ್ದಾರೆ.
ಮದುವೆ ಬಳಿಕ ಸಿನಿಮಾಗಳಲ್ಲಿ ನಟಿಸಬಾರದು ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ ಸೋನಿಯಾ ನೆನಪಿಸಿಕೊಂಡಿದ್ದಾರೆ. ಅದಕ್ಕೆ ಆ ಸಮಯದಲ್ಲಿ ಬ್ರೇಕ್ ತೆಗೆದುಕೊಂಡೆ. ಆದರೆ 2010ರಲ್ಲಿ ಡಿವೋರ್ಸ್ ಪಡೆದ ಬಳಿಕ ಸಿನಿಮಾಗಳಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದೆ" ಎಂದಿದ್ದಾರೆ. ಸದ್ಯ '7ಜಿ ರೇನ್‌ಬೊ ಕಾಲೋನಿ' ಸೀಕ್ವೆಲ್ ಮೂಲಕ ಸೋನಿಯಾ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
'7ಜಿ ರೇನ್‌ಬೊ ಕಾಲೋನಿ'-2 ಸಿನಿಮಾ ಬಗ್ಗೆ ಬಹಳ ಹಿಂದೆಯೇ ಚರ್ಚೆ ನಡೆದಿತ್ತು. ಸದ್ಯದ ಸಮಾಚಾರ ಏನಪ್ಪಾ ಅಂದ್ರೆ, ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಚಿತ್ರೀಕರಣ ಶುರುವಾಲಿದೆಯಂತೆ. ಚಿತ್ರದಲ್ಲಿ ಲವ್ ಟುಡೇ ಫೇಮ್ ನಟಿ ಇವಾನಾ ಹಾಗೂ ಅದಿತಿ ಶಂಕರ್ ನಾಯಕಿಯರಾಗಿ ನಟಿಸುತ್ತಾರೆ ಎನ್ನಲಾಗ್ತಿದೆ. ಮತ್ತೆ ರವಿಕೃಷ್ಣ ಹೀರೊ ಆಗಿ ನಟಿಸುವ ಸಾಧ್ಯತೆಯಿದೆ.
2004ರಲ್ಲಿ ತೆರೆಗೆ ಬಂದಿದ್ದ ರೊಮ್ಯಾಂಟಿಕ್ ಸಿನಿಮಾ '7ಜಿ ರೇನ್‌ಬೊ ಕಾಲೋನಿ' ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ಒಳ್ಳೆ ಹೆಸರು ತಂದುಕೊಟ್ಟಿತ್ತು. ತೆಲುಗಿಗೂ ಸಿನಿಮಾ ಡಬ್ ಆಗಿ ಸದ್ದು ಮಾಡಿತ್ತು. ಪ್ರೀಕ್ವೆಲ್ ನಿರ್ಮಿಸಿದ್ದ ಎ.ಎಂ ರತ್ನಂ ಸೀಕ್ವೆಲ್ ಸಿನಿಮಾಕ್ಕೂ ಬಂಡವಾಳ ಹೂಡುತ್ತಾರೆ ಎನ್ನಲಾಗ್ತಿದೆ. ಸೋನಿಯಾ ಅಗರ್‌ವಾಲ್ ಕೂಡ ಮುಖ್ಯವಾದ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಸೋನಿಯಾ ಕನ್ನಡದ 'ಚಂದು' ಹಾಗೂ 'ದಶರಥ' ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಚಂದು' ಚಿತ್ರದಲ್ಲಿ ಸೋನಿಯಾ ಮಿಂಚಿದ್ದ 'ಸೊಂಟದ ವಿಷ್ಯ ಬ್ಯಾಡವೋ ಶಿಷ್ಯ' ಸಾಂಗ್ ಸೂಪರ್ ಹಿಟ್ ಆಗಿತ್ತು. 'ರನ್ನ' ಚಿತ್ರದ ಸಾಂಗೊಂದರ ಸ್ಪೆಷಲ್ ಝಲಕ್‌ನಲ್ಲಿ ಸೋನಿಯಾ ಕಾಣಿಸಿಕೊಂಡಿದ್ದರು.


Click it and Unblock the Notifications











