ಆಸ್ಕರ್ ಅಂತಿಮ ಪಟ್ಟಿಯಿಂದ ಹೊರಬಿದ್ದ ಸೂರ್ಯ ನಟನೆಯ ಸೂರರೈ ಪೊಟ್ರು
93ನೇ ಸಾಲಿನ ಆಸ್ಕರ್ ರೇಸ್‌ನಿಂದ ತಮಿಳು ಚಿತ್ರ ಸೂರರೈ ಪೊಟ್ರು ಹೊರಬಿದ್ದಿದೆ. ಮಾರ್ಚ್ 15 ರಂದು ಆಸ್ಕರ್ ನಾಮಿನೇಷನ್ ಅಂತಿಮ ಪಟ್ಟಿ ಪ್ರಕಟವಾಗಿದ್ದು, ಈ ಪಟ್ಟಿಯಲ್ಲಿ ಸೂರರೈ ಪೊಟ್ರು ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.
ಆಸ್ಕರ್ ರೇಸ್‌ನಲ್ಲಿ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಟ, ನಟಿ, ಸಂಗೀತ, ನಿರ್ದೇಶನ, ಅತ್ಯುತ್ತಮ ಕತೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಸೂರರೈ ಪೊಟ್ರು ಸಿನಿಮಾ ಸ್ಪರ್ಧಿಸಿತ್ತು. ಆದರೆ, ಪ್ರಶಸ್ತಿ ಸುತ್ತಿನ ಅಂತಿಮ ಪಟ್ಟಿಯಲ್ಲಿ ಸೂರ್ಯ ಚಿತ್ರಕ್ಕೆ ಹಿನ್ನಡೆಯಾಗಿದೆ.
ಸೂರರೈ ಪೊಟ್ರು ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ತೆರೆಕಂಡಿತ್ತು. ಕೊರೊನಾ ವೈರಸ್ ಭೀತಿಯಿಂದ ಓಟಿಟಿಯಲ್ಲಿ ಸೂರ್ಯ ಸಿನಿಮಾ ಬಿಡುಗಡೆಯಾಗಿ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಸುಧಾ ಕೊಂಗಾರ ನಿರ್ದೇಶಿಸಿದ್ದ ಈ ಚಿತ್ರ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಕಥೆ ಹೊಂದಿತ್ತು. ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ಸೂರ್ಯ ನಟಿಸಿದ್ದರು. ಸೂರ್ಯ ಅವರ ಅಭಿನಯಕ್ಕೆ ಪ್ರೇಕ್ಷಕರಿಂದ ಪ್ರಶಂಸೆ ವ್ಯಕ್ತವಾಗಿತ್ತು.
ಸೂರ್ಯಗೆ ಜೋಡಿಯಾಗಿ ಪತ್ನಿಯ ಪಾತ್ರದಲ್ಲಿ ಅಪರ್ಣ ಬಾಲಮುರಳಿ ಅಭಿನಯಿಸಿದ್ದರು. 93ನೇ ಆಸ್ಕರ್‌ನಲ್ಲಿ ಸೂರರೈ ಪೊಟ್ರು ಚಿತ್ರಕ್ಕಾಗಲಿ ಅಥವಾ ಸೂರ್ಯ ಅವರ ನಟನೆಗಾಗಲಿ ಪ್ರಶಸ್ತಿ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಂತಿಮ ಹಂತದಲ್ಲಿ ನಿರಾಸೆ ಎದುರಾಗಿದೆ.
ನವೆಂಬರ್ 20, 2020ರಲ್ಲಿ ಸೂರರೈ ಪೊಟ್ರು ಸಿನಿಮಾ ಬಿಡುಗಡೆಯಾಗಿತ್ತು. 45 ಕೋಟಿ ಹಣ ನೀಡಿ ಅಮೇಜಾನ್ ಪ್ರೈಮ್ ಖರೀದಿ ಮಾಡಿತ್ತು.


Click it and Unblock the Notifications











