ವಿಚ್ಛೇದನಕ್ಕೆ ಅಸಲಿ ಕಾರಣ ಹೇಳಿದ ಕೊಡಗಿನ ಕಿನ್ನರಿ, ಯುವನಾಯಕಿ ಮಾತಿಗೆ ಎಲ್ಲರು ತಬ್ಬಿಬ್ಬು..!
ಮದುವೆ ಮಕ್ಕಳಾಟಿಕೆ ಅಲ್ಲ. ಮದುವೆ ಎನ್ನುವುದು ಜೀವನದ ಅತೀ ಮಹತ್ವದ ಘಟ್ಟ. ಮದುವೆ ಎನ್ನುವುದು ಗಂಡು ಹೆಣ್ಣಿನ ಮಿಲನ ಅಷ್ಟೇ ಅಲ್ಲ. ಅದೊಂದು ಪವಿತ್ರ ಬಂಧನ. ಮದುವೆಯೆಂಬ ವ್ಯವಸ್ಥೆಯಿಂದ ಸಮಾಜದಲ್ಲಿ ಒಂದು ಶಿಸ್ತುಬದ್ಧ ಜೀವನವಿರುತ್ತದೆ. ನಮ್ಮದೇ ಆದ ಕೆಲವು ಕೌಟುಂಬಿಕ ಕರ್ತವ್ಯಗಳೆಲ್ಲವೂ ಸರಾಗವಾಗಿ ನಡೆಯಲು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆ ಅತಿ ಅಗತ್ಯ.
ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹಸೆಮಣೆ ಏರಿದಷ್ಟೇ ವೇಗವಾಗಿ ನ್ಯಾಯಾಲಯದ ಮೆಟ್ಟಿಲೇರುತ್ತಾರೆ. ಅದರಲ್ಲಿಯೂ ಬಣ್ಣದ ಲೋಕದಲ್ಲಿ ಅಂತೂ ಪ್ರೀತಿ ಅನ್ನುವ ಪದಕ್ಕೆ ಅರ್ಥ ಇಲ್ಲ. ಮದುವೆಯೆಂಬ ಪವಿತ್ರ ಬಂಧನಕ್ಕೆ ಬೆಲೆಯೂ ಇಲ್ಲ. ಇದಕ್ಕೆ ಕೈಗನ್ನಡಿ ಎನ್ನುವಂತೆ ಈ ವರ್ಷ ಅರ್ಧ ಡಜನ್ ತಾರೆಯರು ಮದುವೆಯ ಬಂಧನದಿಂದ ಮುಕ್ತರಾಗಿದ್ದಾರೆ. ಇನ್ನೊಂದು ಅರ್ಧ ಡಜನ್ ಸೆಲೆಬ್ರಿಟಿಗಳು ವಿಚ್ಛೇದನದ ಅರ್ಜಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿದ್ದಾರೆ.

ಹೀಗಿರುವಾಗ ವರ್ಷಾ ಬೊಳ್ಳಮ್ಮ ಎಂಬ ಸುಂದರಿ ವಿಚ್ಛೇದನಕ್ಕೆ ಮದುವೆಯೇ ಪ್ರಮುಖ ಕಾರಣ ಎಂದಿದ್ದಾರೆ. ಈ ಮೂಲಕ ಮದುವೆಯ ಅಸ್ಮಿತೆಯ ಪ್ರಶ್ನೆಯನ್ನೂ ಹುಟ್ಟು ಹಾಕಿದ್ದಾರೆ ವರ್ಷಾ ಬೊಳ್ಳಮ್ಮ.
ಹೌದು ವರ್ಷ ಬೊಳ್ಳಮ್ಮ.. ಬೆಸಿಕಲಿ ನಮ್ಮ ಕೊಡಗಿನ ಕಿನ್ನರಿ. ಹೇಳಿಕೊಳ್ಳಲು ಕನ್ನಡತಿಯಾದರೂ ಈ ಚೆಲುವೆ ಹೆಚ್ಚು ಮಿಂಚಿದ್ದು ಅಕ್ಕ-ಪಕ್ಕದ ರಾಜ್ಯಗಳಲ್ಲಿ. ಅದರಲ್ಲಿಯೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಈ ಬೆಡಗಿಗೆ ಸರಿಸಮಾನವಾದ ಬೇಡಿಕೆ ಇದೆ. ಇಳಯ ದಳಪತಿ ವಿಜಯ್, ಮಕ್ಕಳ ಸೆಲ್ವನ್ ವಿಜಯ್ ಸೇತುಪತಿ ಅವರ ಜೊತೆ ತೆರೆಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಇನ್ನೂ ಕನ್ನಡದಲ್ಲಿ ಮನೆ ನಂಬರ್ 13 ಎಂಬ ಸಿನಿಮಾವೊಂದು ಬಂದಿತ್ತಲ್ಲಾ..? ಆ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದು ಕೂಡ ಇವರೇ.

ಇಂಥಾ ವರ್ಷಾ ಬೊಳ್ಳಮ್ಮ ಅವರಿಗೆ ಇತ್ತೀಚೆಗೆ ದೀಪಿಕಾ ನಾರಾಯಣ್ ಭಾರದ್ವಾಜ್ ಎಂಬ ಅವರ ಅಭಿಮಾನಿಯೊಬ್ಬರು ವಿಚ್ಛೇದನದ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಈ ಪ್ರಶ್ನೆಗೆ ಮದುವೆಯೇ ವಿಚ್ಛೇದನಕ್ಕೆ ಪ್ರಮುಖ ಕಾರಣ ಎಂದಿದ್ದಾರೆ ವರ್ಷಾ ಬೊಳ್ಳಮ್ಮ.
ವರ್ಷಾ ಬೊಳ್ಳಮ್ಮ ಅವರ ಈ ಅಭಿಪ್ರಾಯ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೂ ಹುಟ್ಟುಹಾಕಿದೆ. ಕೆಲವರು ವರ್ಷಾ ಅವರ ಈ ಅಭಿಪ್ರಾಯಕ್ಕೆ ಅಪಸ್ವರ ತೆಗೆದಿದ್ದರೆ, ಇನ್ನೂ ಕೆಲವರು ವರ್ಷಾ ಅವರ ಈ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ವರ್ಷಾ ಹೇಳಿದಂತೆ ಮದುವೆಯಾಗದೇ ಸಿಂಗಲ್ ಆಗಿರುವುದೇ ಉತ್ತಮವೆನ್ನುತ್ತಿದ್ದಾರೆ. ಮತ್ತು ಕೆಲವರಿಗೆ ವರ್ಷಾ ಅವರ ಮದುವೆ ಚಿಂತೆ ಕಾಡಿದ ಪರಿಣಾಮ ನೀವೇನೂ ಜೀವಮಾನದಲ್ಲಿಯೇ ಮದ್ವೆಯಾಗಲ್ಲವಾ ಹಾಗಿದ್ದರೆ ಎಂಬ ಪ್ರಶ್ನೆಯನ್ನೂ ಕೂಡ ಕೇಳಿದ್ದಾರೆ. ಪ್ರೀತಿ-ಪ್ರೇಮದಲ್ಲಿ ನಿಮಗೆ ನಂಬಿಕೆ ಇಲ್ವಾ ಎಂಬ ಪ್ರಶ್ನೆಯನ್ನೂ ಮಾಡುತ್ತಿದ್ದಾರೆ.
ಉಳಿದಂತೆ ವರ್ಷಾ ಬೊಳ್ಳಮ್ಮ ಅವರ ಬಳಿ ಸದ್ಯಕ್ಕೆ ಹೆಚ್ಚೇನು ಅವಕಾಶ ಇಲ್ಲ. ಈ ವರ್ಷ ಇವರು ಅಭಿನಯಿಸಿರುವ ಕೇವಲ ಒಂದು ತೆಲುಗು ಸಿನಿಮಾ ಮಾತ್ರ ತೆರೆಗೆ ಬಂದಿದೆ. ಆ ಸಿನಿಮಾ ಕೂಡ ತೆರೆಗೆ ಬಂದಿದ್ದು ಹೋಗಿದ್ದು ಅನೇಕರಿಗೆ ಗೊತ್ತಾಗಲಿಲ್ಲ.


Click it and Unblock the Notifications











