ಗಂಗೆ ದಡದಲ್ಲಿ ಧ್ಯಾನ, ರಸ್ತೆ ಬದಿಯಲ್ಲಿಯೇ ಭೋಜನ ; ಹಿಮಾಲಯದ ತಪ್ಪಲಿನಲ್ಲಿ ನೆಮ್ಮದಿ ಹುಡಕಿಕೊಂಡ ಹೋದ ರಜನಿಕಾಂತ್...!
ರಜನಿಕಾಂತ್ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಅಭಿಮಾನಿಗಳ ಪಾಲಿನ ತಲೈವಾ. ಇಡೀ ವಿಶ್ವಕ್ಕೆ ಗೊತ್ತಿರುವ ಮಹಾನಾಯಕ. ಚೆನ್ನೈ-ಹೈದ್ರಾಬಾದ್- ಬೆಂಗಳೂರು ಸೇರಿದಂತೆ ಭಾರತದ ಮೆಟ್ರೋಪಾಲಿಟನ್ ಸಿಟಿಗಳಲ್ಲಿ ರಜನಿಕಾಂತ್ ಒಡೆತನದ ಆಸ್ತಿಗಳಿವೆ. ಇಡೀ ಜಗತ್ತಿನಲ್ಲಿ ರಜನಿಕಾಂತ್ ಅವರಿಗೆ ತಾವು ಹೊಂದಿರುವ ಅಗಣಿತ ಆಸ್ತಿಯ ಬಗ್ಗೆ ಸ್ವತಃ ಅವರಿಗೇ ಲೆಕ್ಕ ಗೊತ್ತಿದೆಯೋ ಇಲ್ಲವೋ? ಗೊತ್ತಿಲ್ಲ.
ಆದರೆ ಇಂಥ ರಜನಿಕಾಂತ್ ಮನಸ್ಸು ಮಾತ್ರ ಹುಟ್ಟೂರಿನ, ತಾನು ಓಡಾಡಿದ, ಕಷ್ಟದ ನಡುವೆಯೇ ನೆಮ್ಮದಿ ಕಂಡುಕೊಂಡಿದ್ದ ಜಾಗಗಳೆಡೆಗೇ ಜಾರುತ್ತಿರುತ್ತದೆ. ಇದರ ಜೊತೆಗೆ ರಜನಿ ಸೀದಾ ಹೋಗಿ ಅಡ್ಡಾಡಿಕೊಂಡುವ ಬರುವುದು ಹಿಮಾಲಯದ ಬೆಟ್ಟ ಗುಡ್ಡದ ನಡುವೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಸದ್ಯಕ್ಕೆ ರಜಿನಿಕಾಂತ್ ಮತ್ತೊಮ್ಮೆ ಹಿಮಾಲಯದತ್ತ ಮುಖ ಮಾಡಿದ್ದಾರೆ.

ಹೌದು, ತಾವು ನಟಿಸುವ ಸಿನಿಮಾ ಚಿತ್ರೀಕರಣ ಮುಗಿದು ಮತ್ತೊಂದು ಸಿನಿಮಾ ಆರಂಭವಾಗುವ ಮಧ್ಯದ ಗ್ಯಾಪ್ನಲ್ಲಿ ತಲೈವಾ ಹಿಮಾಲಯವನ್ನೊಮ್ಮೆ ಸುತ್ತು ಹಾಕಿಕೊಂಡು ಬರುತ್ತಾರೆ. ವರ್ಷಾನುವರ್ಷಗಳಿಂದ ಈ ಸಂಪ್ರದಾಯವನ್ನ ಪಾಲಿಸಿಕೊಂಡು ಬಂದಿರುವ ಸೂಪರ್ ಸ್ಟಾರ್ ರಜಿನಿ ಸದ್ಯ ''ಜೈಲರ್ 2'' ಚಿತ್ರದ ನಡುವೆ ರಿಷಿಕೇಶಕ್ಕೆ ತೆರಳಿದ್ದಾರೆ.
ಹಿಮಾಲಯದಲ್ಲಿ ಆಧ್ಯಾತ್ಮಿಕ ಪ್ರವಾಸಕ್ಕೆ ತೆರಳಿರುವ ರಜನಿಕಾಂತ್, ಗಂಗಾ ನದಿಯ ಬಳಿ ಧ್ಯಾನ ಮಾಡಿದ್ದಾರೆ. ಅಲ್ಲಿನ ಸ್ಥಳಿಯರ ಜೊತೆ ಬೆರೆತಿದ್ದಾರೆ. ರಿಷಿಕೇಶದ ಸ್ವಾಮಿ ದಯಾನಂದ ಆಶ್ರಮಕ್ಕೆ ಭೇಟಿ ನೀಡಿ, ಸ್ವಾಮಿ ದಯಾನಂದರ ಆಶೀರ್ವಾದ ಪಡೆದಿದ್ದಾರೆ. ಗಂಗಾ ಆರತಿಯಲ್ಲಿ ಕೂಡ ಭಾಗವಹಿಸಿದ್ದಾರೆ.
ತಮ್ಮ ಈ ಪ್ರವಾಸದ ಸಮಯದಲ್ಲಿ ಎಂದಿನಂತೆ ಬಿಳಿ ಬಟ್ಟೆಯಲ್ಲಿ, ರಸ್ತೆ ಬದಿಯಲ್ಲಿಯೇ ನಿಂತು ರಜನಿಕಾಂತ್ ಊಟ ಮಾಡಿದ್ದಾರೆ. ಕಲ್ಲಿನ ಮೇಲೆ ಪತ್ರೊಳಿಯನ್ನು ಇರಿಸಿ ಭೋಜನ ಸವೆದಿದ್ದಾರೆ.ಹಿಮಾಲಯದ ರಮಣೀಯ ಬೆಟ್ಟಗಳನ್ನು ಮತ್ತು ನಿಂತಿರುವ ಕಾರನ್ನು ಕೂಡ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೊದಲ್ಲಿ ಗಮನಿಸಬಹುದು.
ವರದಿಗಳ ಪ್ರಕಾರ ಸದ್ಯ ರಿಷಿಕೇಶದಲ್ಲಿ ವಾಸ್ತವ್ಯ ಹೂಡಿದ್ದ ರಜನಿಕಾಂತ್, ದ್ವಾರಹತ್‌ಗೆ ತೆರಳಿದ್ದಾರೆ. ಸದ್ಯ ರಜನಿಕಾಂತ್ ಅವರ ಈ ಆಧ್ಯಾತ್ಮಿಕ ಪ್ರವಾಸದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹಲವರ ಹೃದಯ ಗೆದ್ದಿದೆ. ಸೂಪರ್ ಸ್ಟಾರ್ ರಜನಿಯ ಸರಳತೆಯನ್ನು ಇವರ ಅಭಿಮಾನಿ ಬಳಗ ಮಾತ್ರವಲ್ಲದೇ ಸಾಮಾನ್ಯ ಪ್ರೇಕ್ಷಕರ ವರ್ಗ ಕೂಡ ಕೊಂಡಾಡುತ್ತಿದೆ.
ಸರಳತೆ-ವಿನಮ್ರತೆಗೆ ಮತ್ತೊಂದು ಹೆಸರೇ ರಜನಿಕಾಂತ್ ಎಂದು ಕೆಲವರು ವ್ಯಾಖ್ಯಾನಿಸಿದರೆ, ದೇವರ ಮೇಲೆ ರಜನಿಕಾಂತ್ ಅವರಿಗೆ ಇರುವ ನಂಬಿಕೆ.. ಆ ಇಳಿ ವಯಸ್ಸಿನಲ್ಲಿ ಕೂಡ ಬತ್ತದ ಉತ್ಸಾಹದ ಕುರಿತು ಕೂಡ ಹಲವರು ಚರ್ಚೆ ಮಾಡುತ್ತಿದ್ದಾರೆ. ರಜನಿಕಾಂತ್ ಅವರ ಈ ಆಧ್ಯಾತ್ಮಿಕ ಪ್ರವಾಸದಲ್ಲಿ ಅವರ ಸ್ನೇಹಿತರು ಜೊತೆಯಾಗಿದ್ದಾರೆ.
ಇನ್ನುಳಿದಂತೆ ''ಕೂಲಿ'' ಚಿತ್ರದಲ್ಲಿ ಅಬ್ಬರಿಸಿ ಅಭಿಮಾನಿಗಳ ಹೃದಯ ಗೆದ್ದ ರಜನಿಕಾಂತ್ ಸದ್ಯ ''ಜೈಲರ್ 2'' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಈ ಚಿತ್ರ ಎರಡು ವರ್ಷಗಳ ಹಿಂದೆ ತೆರೆಗೆ ಬಂದು ಬಾಕ್ಸಾಫೀಸ್ ಉಡೀಸ್ ಮಾಡಿದ್ದ ''ಜೈಲರ್'' ಚಿತ್ರದ ಮುಂದುವರೆದ ಭಾಗವಾದ ಹಿನ್ನೆಲೆ ಅಭಿಮಾನಿಗಳಿಗೆ ಅಪಾರವಾದ ನಿರೀಕ್ಷೆಗಳಿವೆ. ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮಾಜಿ ಡಾನ್ ನರಸಿಂಹನ ಅವತಾರದಲ್ಲಿ ಮತ್ತೆ ಪ್ರತ್ಯಕ್ಷವಾಗಲಿದ್ದಾರೆ. ಮ್ಯಾಥ್ಯೂ ಆಗಿ ಮೋಹನ್ ಲಾಲ್ ಅಬ್ಬರಿಸಲಿದ್ದಾರೆ. ಸನ್ ಪಿಕ್ಚರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಜೂನ್‌ನಲ್ಲಿ ಈ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇದಲ್ಲದೇ ಕಮಲ್ ಹಾಸನ್ ಜೊತೆ ಕೂಡ ರಜನಿಕಾಂತ್ ಚಿತ್ರ ಮಾಡಲಿದ್ದಾರೆ ಎನ್ನುವ ಸುದ್ದಿ ಇದೆ.


Click it and Unblock the Notifications











