'ಅಮರನ್' ನಿರ್ದೇಶಕನ ಹೊಸ ಚಿತ್ರದಲ್ಲಿ ಶ್ರೀಲೀಲಾಗೆ ಬಂಪರ್ ಆಫರ್; ಹೀರೊ ಯಾರು ಗೊತ್ತಾ?
ಕನ್ನಡ ನಟಿ ಶ್ರೀಲೀಲಾ ತೆಲುಗು, ತಮಿಳು ಮಾತ್ರವಲ್ಲದೇ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಮತ್ತೊಂದು ಬಹುನಿರೀಕ್ಷಿತ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಧನುಷ್ ನಟನೆಯ ಹೊಸ ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸುವುದು ಪಕ್ಕಾ ಆಗಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ರಾಜ್‌ಕುಮಾರ್ ಪೆರಿಯಸ್ವಾಮಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಅಮರನ್' ರೀತಿಯ ಬ್ಲಾಕ್‌ಬಸ್ಟರ್ ಚಿತ್ರವನ್ನು ಅವರು ಕಟ್ಟಿಕೊಟ್ಟಿದ್ದರು. ಹಾಗಾಗಿ ಹೊಸ ಸಿನಿಮಾ ಕುತೂಹಲ ಮೂಡಿಸಿದೆ.

ಇದು ಧನುಷ್ ನಟನೆಯ 55ನೇ ಸಿನಿಮಾ. ಹಾಗಾಗಿ ಸದ್ಯಕ್ಕೆ 'D55' ಎನ್ನುವ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೆಯುತ್ತಿದೆ. 'ಇಡ್ಲಿ ಕಡೆ' ಬಳಿಕ ಧನುಷ್ ನಟನೆಯ 'ತೇರೆ ಇಷ್ಕ್ ಮೇ' ಬಾಲಿವುಡ್ ಸಿನಿಮಾ ಬಿಡುಗಡೆ ಆಗಿತ್ತು. 'ಕಾರ' ಎಂಬ ಮತ್ತೊಂದು ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಆ ಬಳಿಕ ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ ಧನುಷ್ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮಲಯಾಳಂ ನಟ ಮಮ್ಮುಟ್ಟಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಸಾಯಿ ಅಭಯಂಕರ್ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಇದೊಂದು ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನಲಾಗ್ತಿದೆ. ಸಾಯಿ ಪಲ್ಲವಿ ಚಿತ್ರಕ್ಕೆ ನಾಯಕಿ ಆಗುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಶ್ರೀಲೀಲಾ ಆಗಮನದಿಂದ ಅದು ಸುಳ್ಳಾಗಿದೆ.
ಶ್ರೀಲೀಲಾ ಈಗಾಗಲೇ ಒಂದು ತಮಿಳು ಸಿನಿಮಾದಲ್ಲಿ ನಟಿಸಿ ಕಾಲಿವುಡ್ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ 'ಪರಾಶಕ್ತಿ' ಚಿತ್ರದಲ್ಲಿ ಒಳ್ಳೆ ಪಾತ್ರ ಸಿಕ್ಕಿತ್ತು. ಸುಧಾ ಕೊಂಗರ ಈ ಚಿತ್ರ ಕಟ್ಟಿಕೊಟ್ಟಿದ್ದರು. ಇನ್ನು ಬಾಲಿವುಡ್‌ನಲ್ಲಿ ಈಗಾಗಲೇ ಒಂದು ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಿದ್ದಾರೆ. ಮತ್ತಷ್ಟು ಅವಕಾಶಗಳು ಅರಸಿ ಬರ್ತಿವೆ.
ಶ್ರೀಲೀಲಾ ಇತ್ತೀಚೆಗೆ ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 'ಜ್ಯೂನಿಯರ್' ಬಳಿಕ ಯಾವುದೇ ಕನ್ನಡ ಸಿನಿಮಾ ಆಕೆ ಒಪ್ಪಿಕೊಂಡಿಲ್ಲ. ರಶ್ಮಿಕಾ ಬಳಿಕ ಬಾಲಿವುಡ್ ಅಂಗಳದಲ್ಲಿ ಕೂಡ ಮಿಂಚು ಹರಿಸಲು ಸಜ್ಜಾಗುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿ ಕೂಡ ನಾಯಕಿಯಾಗಿದ್ದಾರೆ.
ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ನಟಿಸಿದರೂ ಶ್ರೀಲೀಲಾಗೆ ದೊಡ್ಡ ಬ್ರೇಕ್ ಸಿಕ್ಕಿರಲಿಲ್ಲ. ಆದರೆ 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸಾಂಗ್ ಕ್ರೇಜ್ ಸೃಷ್ಟಿಸಿತ್ತು. ಆ ಸ್ಪೆಷಲ್ ಸಾಂಗ್ ಹಿಟ್ ಆಗಿ ಬಾಲಿವುಡ್ ಮಂದಿ ಕಣ್ಣಿಗೆ ಶ್ರೀಲೀಲಾ ಬಿದ್ದರು. ಈಗ ಹಿಂದಿ ಸಿನಿಮಾ ಅವಕಾಶಗಳು ಒಂದೊಂದಾಗಿ ಹುಡುಕಿ ಬರ್ತಿದೆ. ಇತ್ತ ತೆಲುಗು, ತಮಿಳಿನಲ್ಲಿ ಕೂಡ ಬ್ಯುಸಿಯಾಗುತ್ತಿದ್ದಾರೆ.
ಬೆಂಗಳೂರು ಬೆಡಗಿ ಶ್ರೀಲೀಲಾ ಬಾಲನಟಿಯಾಗಿ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಕನ್ನಡದ 'ಕಿಸ್' ಚಿತ್ರದಲ್ಲಿ ಮೊದಲ ಬಾರಿಗೆ ನಾಯಕಿಯಾಗಿ ಮಿಂಚಿದ್ದರು. ಬಳಿಕ 'ಭರಾಟೆ' ಚಿತ್ರದಲ್ಲಿ ಶ್ರೀಮುರಳಿಗೆ ನಾಯಕಿ ಆಗಿದ್ದರು. ನಂತರ 'ಪೆಳ್ಳಿ ಸಂದಡಿ' ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದರು. ಬಳಿಕ ದೊಡ್ಡ ದೊಡ್ಡ ತೆಲುಗು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಬಾಲಕೃಷ್ಣ, ಮಹೇಶ್ ಬಾಬು, ರವಿತೇಜ ರೀತಿಯ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡರು.


Click it and Unblock the Notifications











