ವಿಜಯ್ ಸೇತುಪತಿ ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಅವಘಡ: ಸ್ಟಂಟ್‌ಮ್ಯಾನ್ ಸುರೇಶ್ ಸಾವು
ಎರಡು ವರ್ಷದ ಹಿಂದೆ 'ಇಂಡಿಯನ್ -2' ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಕ್ರೇಜ್ ಉರುಳಿಬಿದ್ದು ಮೂವರು ಮೃತಪಟ್ಟಿದ್ದರು. ಇದೀಗ 'ವಿಡುದಲೈ' ಸಿನಿಮಾ ಶೂಟಿಂಗ್ ವೇಳೆ 20 ಅಡಿ ಎತ್ತರದಿಂದ ಕೆಳಗೆ ಬಿದ್ದು ಸ್ಟಂಟ್ ಮಾಸ್ಟರ್ ಸುರೇಶ್(54) ಎಂಬುವವರು ಕೊನೆಯುಸಿರೆಳೆದಿದ್ದಾರೆ.
ಸಾಹಸ ಸನ್ನಿವೇಶದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದೆ. ಚೆನ್ನೈ ಬಳಿಕ ಕೇಲಂಬಕ್ಕಂನಲ್ಲಿ ಸೆಟ್ ಹಾಕಿ 'ವಿಡುದಲೈ' ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿತ್ತು. ರೈಲು ಹಳಿ ಹಾಗೂ ರೈಲಿನ ಸೆಟ್ ಹಾಕಲಾಗಿತ್ತು. ರೈಲು ಅಪಘಾತ ಸಂಭವಿಸಿದಂತೆ ಸನ್ನಿವೇಶ ಕಟ್ಟಿಕೊಡಲಾಗಿತ್ತು. ಅಲ್ಲೇ ಆಕ್ಷನ್ ಸೀನ್ ಸೆರೆಹಿಡಿಯಲಾಗುತ್ತಿತ್ತು. ಚಿತ್ರೀಕರಣಕ್ಕಾಗಿ ಸ್ಟಂಟ್‌ಮ್ಯಾನ್ ಸುರೇಶ್ ಸೇರಿದಂತೆ ಕೆಲವರು ಕ್ರೇನ್‌ಗೆ ಹಗ್ಗ ಕಟ್ಟಿಕೊಂಡು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಈ ವೇಳೆ ಹಗ್ಗ ತುಂಡಾಗಿ ಸುರೇಶ್ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುರೇಶ್ ಅಸುನೀಗಿದ್ದಾರೆ.

ಸುರೇಶ್ ಅಗಲಿಕೆಗೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ವೆಟ್ರಿಮಾರನ್ ನಿರ್ದೇಶನದ 'ವಿಡುದಲೈ' ಚಿತ್ರದಲ್ಲಿ ಸೂರಿ ಹೀರೊ ಆಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ ಕೂಡ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಎಲ್‌ರೆಡ್ ಕುಮಾರ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ರಾಜಿವ್ ಮೆನನ್, ಚೇತನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಹಾಸ್ಯನಟನಾಗಿ ಮನೆಮಾತಾಗಿದ್ದ ಸೂರಿ ಈ ಚಿತ್ರದಲ್ಲಿ ಹೀರೊ ಆಗಿ ಬಣ್ಣ ಹಚ್ಚಿದ್ದಾರೆ. ಜಿಯಾ ಮೆನನ್ ಬರೆದ 'ತುನೈವನ್' ಸಣ್ಣ ಕಥೆ ಆಧರಿಸಿ 'ವಿಡುದಲೈ' ಸಿನಿಮಾ ಕಟ್ಟಿಕೊಡಲಾಗುತ್ತಿದೆ.
ಶೂಟಿಂಗ್ ವೇಳೆ ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರು ಇಂತಹ ದುರಂತಗಳು ಸಂಭವಿಸುತ್ತಲೇ ಇದೆ. ಕೆಲ ವರ್ಷಗಳ ಹಿಂದೆ ಕನ್ನಡದ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣದ ವೇಳೆ ಕೂಡ ಇಂಥದ್ದೆ ಘಟೆ ನಡೆದಿತ್ತು. ಸಹ ಕಲಾವಿದರಾದ ಅನಿಲ್ ಹಾಗೂ ಉದಯ್ ತಿಪ್ಪಗೊಂಡನ ಹಳ್ಳಿ ಕೆರೆಗೆ ಹಾರಿ ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು.


Click it and Unblock the Notifications