ಫ್ಲಾಪ್ ಆಯ್ತು ಶ್ರೀಲೀಲಾ ಸಿನಿಮಾ ; 8.39 ಕೋಟಿ ಬಾಕಿ ಹಣಕ್ಕಾಗಿ ನಿರ್ಮಾಪಕರ ವಿರುದ್ಧ ತಿರುಗಿಬಿದ್ದ ನಿರ್ದೇಶಕಿ
ವ್ಯಾಪಾರವಾಗುತ್ತಾ ಇಲ್ವಾ ? ತಮ್ಮ ಚಿತ್ರ ಚಿತ್ರಮಂದಿರಕ್ಕೆ ಬಂದ ಮೇಲೆ ಏನಾಗುತ್ತದೋ ಗೊತ್ತಿರೋದಿಲ್ಲ. ಆದರೂ ಕೋಟಿ ಕೋಟಿ ಹಣ ಸುರಿದು ಸಿನಿಮಾ ಮಾಡುವ ಅನೇಕ ನಿರ್ಮಾಪಕರು ಭಾರತೀಯ ಚಿತ್ರರಂಗದಲ್ಲಿದ್ದಾರೆ. ಇಡೀ ಬದುಕನ್ನೇ ಪಣಕ್ಕಿಟ್ಟು ಚಿತ್ರ ನಿರ್ಮಾಣ ಮಾಡುವ ಒಬ್ಬೊಬ್ಬ ನಿರ್ಮಾಪಕರಿಂದ ನೂರಾರು ಜನ ಕಾರ್ಮಿಕರ ಮನೆಯಲ್ಲಿ ಅನ್ನ ಬೇಯುತ್ತದೆ, ದೀಪ ಉರಿಯುತ್ತದೆ.
ನಿಜ. ದುಡ್ಡು ಕೈ ಸೇರುತ್ತದೆ ಅಂತಾ ಕನಸಿಟ್ಟುಕೊಂಡೇ, ಲಾಭದ ಆಸೆಯಲ್ಲಿಯೇ ಬಹುತೇಕ ಕಮರ್ಷಿಯಲ್ ಸಿನಿಮಾದ ನಿರ್ಮಾಪಕರು ಹಣ ಸುರಿಯುಯುತ್ತಾರೆ. ಅದಕ್ಕೆ ಪೂರಕವಾಗಿ ನಿರ್ದೇಶಕರು ತಮ್ಮ ಕಸುಬುದಾರಿಕೆಯ ಪ್ರದರ್ಶನವನ್ನು ಕೂಡ ಮಾಡುತ್ತಾರೆ. ಆದರೆ. ಎಲ್ಲರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಲಾಭ ಬಿಡಿ ಹಾಕಿದ ಬಂಡವಾಳ ಕೂಡ ಮರಳಿ ಬರುವುದಿಲ್ಲ. ಹೀಗಿರುವಾಗ ನಷ್ಟದ ಕೂಪಕ್ಕೆ ದೂಡಿದ ನಿರ್ದೇಶಕ ಅಥವಾ ನಿರ್ದೇಶಕಿ ಅದೇ ನಿರ್ಮಾಪಕರ ವಿರುದ್ದ ತಿರುಗಿ ಬಿದ್ದರೆ ಹೇಗಿರಬೇಡ..? ಸದ್ಯ ''ಪರಾಶಕ್ತಿ'' ವಿಚಾರದಲ್ಲಿಯೂ ಇದೇ ಆಗಿದೆ.

ಹೌದು, ''ಜನನಾಯಗನ್'' ಚಿತ್ರದಂತೆಯೇ ವಿಘ್ನಗಳನ್ನು ಎದುರಿಸಿ ಈ ವರ್ಷದ ಆರಂಭದಲ್ಲಿ ''ಪರಾಶಕ್ತಿ'' ಬಿಡುಗಡೆಯಾಗಿತ್ತು. ಮೊದಲ ದಿನ ಉತ್ತಮವಾದ ಓಪನಿಂಗ್ ಕೂಡ ಪಡೆದುಕೊಂಡಿತ್ತು.
ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಮೊದಲ ದಿನ ₹12.35 ಕೋಟಿಯನ್ನು ಚಿತ್ರ ಗಳಿಸಿತ್ತು. ಈ ಮೂಲಕ ''ಅಮರನ್'' ಚಿತ್ರದ ಗಳಿಕೆಯನ್ನು ಭಾರತದಲ್ಲಿ ಹಿಂದಿಕ್ಕುವಲ್ಲಿ ''ಪರಾಶಕ್ತಿ'' ಸೋತಿತ್ತು ಆದರೂ ಮೊದಲ ದಿನದ ಪ್ರದರ್ಶನ ಆಶಾದಾಯಕವಾಗಿತ್ತು.
ಆದರೆ, ಆ ನಂತರ ಬಾಕ್ಸಾಫೀಸ್‌ನಲ್ಲಿ ''ಪರಾಶಕ್ತಿ'' ಪರಾಭವಗೊಂಡಿತು. ''ಇಂಡಿಯನ್ ಎಕ್ಸ್‌ಪ್ರೆಸ್'' ಮತ್ತು ''ಟೈಮ್ಸ್ ಆಫ್ ಇಂಡಿಯಾ'' ವರದಿಯ ಪ್ರಕಾರ ಈ ಚಿತ್ರಕ್ಕೆ ನಿರ್ಮಾಣ ಸಂಸ್ಥೆ ''ಡಾನ್ ಪಿಕ್ಚರ್ಸ್'' ಹತ್ ಹತ್ತಿರ 150 ಕೋಟಿ ಸುರಿದಿತ್ತು. ಆದರೆ, ಚಿತ್ರ ಗಳಿಸಿದ್ದು ಕೇವಲ 85 ಕೋಟಿ ಮಾತ್ರ.
ಹೀಗಿರುವಾಗ ಇದೀಗ ''ಪರಾಶಕ್ತಿ'' ನಿರ್ಮಾಪಕರಿಗೆ ಚಿತ್ರದ ನಿರ್ದೇಶಕಿ ಸುಧಾ ಕೊಂಗರ ಶಾಕ್ ಕೊಟ್ಟಿದ್ದಾರೆ. ನಿರ್ಮಾಪಕರ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ನೀಡಬೇಕಾದ ಸಂಭಾವನೆ ಕೊಟ್ಟಿಲ್ಲ ಎಂದು ಕಾನೂನು ಸಮರ ಕೂಡ ಸಾರಿದ್ದಾರೆ.

ಹೌದು, ಅಸಲಿಗೆ ''ಪರಾಶಕ್ತಿ'' ಚಿತ್ರ ನಿರ್ದೇಶಿಸಲು, ನಿರ್ಮಾಣ ಸಂಸ್ಥೆಯಾದ ''ಡಾನ್ ಪಿಕ್ಚರ್ಸ್'' 15 ಕೋಟಿ ಸಂಭಾವನೆ ಕೊಡುವುದಾಗಿ ಸುಧಾ ಅವರಿಗೆ ಹೇಳಿತ್ತು. ಜಿಎಸ್‌ಟಿ ಎಲ್ಲವೂ ಸೇರಿ ಈ ಮೊತ್ತು ₹17.70 ಕೋಟಿಯಾಗಿತ್ತು. ಆದರೆ ಸುಧಾ ಅವರ ಕೈ ಸೇರಿದ್ದು ₹9.31 ಕೋಟಿ ಮಾತ್ರ.
ಈ ಹಿನ್ನೆಲೆ ಬಾಕಿ ಉಳಿಸಿಕೊಂಡ ಸಂಭಾವನೆ ಕೊಡುವಂತೆ ಸುಧಾ ಹಲವು ಬಾರಿ ನಿರ್ಮಾಣ ಸಂಸ್ಥೆಯಲ್ಲಿ ಮನವಿಯನ್ನು ಮಾಡಿಕೊಂಡಿದ್ದರು. ಆದರೆ. ಸೂಕ್ತವಾದ ಪ್ರತಿಕ್ರಿಯೆ ನಿರ್ಮಾಣ ಸಂಸ್ಥೆಯಿಂದ ಸಿಕ್ಕಿಲ್ಲ. ಹೀಗಾಗಿಯೇ ಕೆರಳಿರುವ ಸುಧಾ ಕೊಂಗರ ನ್ಯಾಯಾಲಯದಲ್ಲಿ ಸಮರ ಸಾರಿದ್ದಾರೆ.
ಚಿತ್ರದ ಎಲ್ಲ ಹಕ್ಕು ಮಾರಿದ ನಂತರವೂ ತಮಗೆ ನೀಡಬೇಕಾದ ಹಣ ನಿರ್ಮಾಪಕರು ನೀಡಿಲ್ಲ ಎಂದು ಹೇಳಿರುವ ಸುಧಾ, ಟಿವಿಯಲ್ಲಿ ಚಿತ್ರ ಪ್ರಸಾರಕ್ಕೆ ಅವಕಾಶ ನೀಡಬಾರದು ಎಂದು ಕೂಡ ವಾದ ಮಾಡಿದ್ದಾರೆ. ಸದ್ಯ ಸುಧಾ ಅವರ ಈ ವಾದಕ್ಕೆ ಮನ್ನಣೆ ಸಿಕ್ಕಿದ್ದು ನ್ಯಾಯಾಲಯ ಜುಲೈ 8ರವರೆಗೆ ''ಪರಾಶಕ್ತಿ''ಯ ಸ್ಯಾಟ್‌ಲೈಟ್ ಹಕ್ಕು ಮಾರುವಂತೆ ಇಲ್ಲ ಎಂದು ಆದೇಶ ನೀಡಿದೆ.
ಇದು ಮಾತ್ರವಲ್ಲ. ಇದೇ ಜುಲೈ 10ರಂದು ''ಇದಯಂ ಮುರಳಿ'' ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಈ ಚಿತ್ರ ಕೂಡ ಡಾನ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯದ್ದೇ. ಈ ಹಿನ್ನೆಲೆ ಜುಲೈ 10, 2026 ರಂದು ಬಿಡುಗಡೆಗೆ ಸಜ್ಜಾಗಿರುವ ''ಇದಯಂ ಮುರಳಿ'' ಚಿತ್ರದ ಪ್ರದರ್ಶನಕ್ಕೂ ಸಂಪೂರ್ಣ ತಡೆ ನೀಡಬೇಕು ಎಂದು ಸುಧಾ ಕೊಂಗರ ಒತ್ತಾಯಿಸಿದ್ದಾರೆ.
ಹಳೆಯ ಬಾಕಿ ಹಣವನ್ನು ತೀರಿಸದ ನಿರ್ಮಾಣ ಸಂಸ್ಥೆ, ಮತ್ತೊಂದು ಸ್ಟಾರ್ ನಟನ ಚಿತ್ರವನ್ನು ಅದ್ಧೂರಿಯಾಗಿ ಬಿಡುಗಡೆ ಮಾಡಲು ಹೇಗೆ ಸಾಧ್ಯ ಎಂದು ಸುಧಾ ಕೊಂಗರ ಪರ ಕಾನೂನು ತಂಡ ವಾದ ಮಂಡಿಸಿದ್ದು, ''ಇದಯಂ ಮುರಳಿ'' ಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂಬ ಸುಧಾ ಕೊಂಗರ ಅವರ ಮನವಿಗೆ ಸಂಬಂಧಿಸಿದಂತೆ ಜುಲೈ 7 ರೊಳಗೆ ಕೌಂಟರ್ ಅಫಿಡವಿಟ್ ಸಲ್ಲಿಸುವಂತೆ ಮದ್ರಾಸ್ ಹೈಕೋರ್ಟ್ ಡಾನ್ ಪಿಕ್ಚರ್ಸ್‌ಗೆ ಆದೇಶಿಸಿದೆ. ಜುಲೈ 8 ರಂದು ಈ ಮುಂದಿನ ವಿಚಾರಣೆ ನಡೆಯಲಿದೆ.
ಅಂದ್ಹಾಗೇ 60-70ರ ದಶಕಗಳಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ ಕಥೆ ಹೆಣೆಯಲಾಗಿದ್ದ ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನ ಪಾತ್ರ ನಿರ್ವಹಿಸಿದ್ದರು. ಶ್ರೀಲೀಲಾ ನಾಯಕಿಯಾಗಿ ಮಿಂಚಿದ್ದರು. ಜಯಂ ರವಿ, ಅಥರ್ವ ಕೂಡ ಚಿತ್ರದ ತಾರಾಗಣದಲ್ಲಿದ್ದರು. ಇಷ್ಟೇ ಅಲ್ಲ ನಮ್ಮ ಡಾಲಿ ಧನಂಜಯ್ ಮತ್ತು ತೆಲುಗು ನಟ ರಾಣಾ ದಗ್ಗುಬಾಟಿ ಹಾಗೂ ಮಲಯಾಳಂ ನಟ ಬಾಸಿಲ್ ಜೋಸೆಫ್ ಅತಿಥಿ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.


Click it and Unblock the Notifications