ದುಬೈ ಯೂಟ್ಯೂಬರ್ ಜೊತೆ ಮದುವೆಯಾಗಲಿದ್ದಾರೆ ‘ಗಂಗೆ ಬಾರೆ ತುಂಗೆ ಬಾರೆ’ ನಾಯಕಿ..?
ಸುನೈನಾ.. ನಿಮಗೆ ನೆನಪಿರಬೇಕು.. 2008ರಲ್ಲಿ ತೆರೆಗೆ ಬಂದಿದ್ದ ''ಗಂಗೆ ಬಾರೇ ತುಂಗೇ ಬಾರೇ'' ಚಿತ್ರದ ನಾಯಕಿ. ಕನ್ನಡದಲ್ಲಿ ಇದೊಂದೇ ಚಿತ್ರದಲ್ಲಿ ಕಾಣಿಸಿಕೊಂಡ ಸುನೈನಾ ಆ ನಂತರ ಮಿಂಚಿದ್ದು.. ಹೆಸರು ಮಾಡಿದ್ದು.. ಎಲ್ಲವೂ ಕಾಲಿವುಡ್‌ನಲ್ಲಿಯೇ.
ಒಂದಾದ ಮೇಲೊಂದು ಸಿನಿಮಾಗಳನ್ನು ಮಾಡುವ ಮೂಲಕ ತಮಿಳುನಾಡಿನ ಮನೆ ಹಾಗೂ ಮನಗಳನ್ನು ತಲುಪಿದ ಸುನೈನಾ, ಕೆಲ ದಿನದ ಹಿಂದೆ ಗೃಹಸ್ಥಾಶ್ರಮಕ್ಕೆ ಕಾಲಿಡಲಿರುವ ಸೂಚನೆ ಕೊಟ್ಟಿದ್ದರು. ತಮ್ಮ ಕನಸಿನ ಹುಡುಗನ ಕೈಯನ್ನು ಹಿಡಿದು ಫೋಟೋ ಹಂಚಿಕೊಂಡಿದ್ದರು.
ಸುನೈನಾ ಫೋಟೋ ಹಂಚಿಕೊಂಡಿದ್ದೇ ತಡ, ಅನೇಕರು ಶುಭಾಶಯವನ್ನೂ ಕೋರುವುದರ ಜೊತೆ ಯಾರು ಆ ಲಕ್ಕಿ ಹುಡುಗ ಎಂಬ ಪ್ರಶ್ನೆಯನ್ನು ಕೇಳಿದ್ದರು. ಹುಡುಗನ ಭಾವಚಿತ್ರದ ಜೊತೆ ಆತನ ಕುಲ-ಗೋತ್ರದ ಮಾಹಿತಿಯನ್ನೂ ಹಂಚಿಕೊಳ್ಳಿ ಎಂಬ ಮನವಿಯನ್ನೂ ಮಾಡಿದ್ದರು.ಇನ್ನೂ ಕೆಲವರು..ಸುನೈನಾ ಅವರದ್ದು ಅರೆಂಜ್ ಮ್ಯಾರೇಜ್ ಎಂಬ ವಾದ ಮಾಡಿದ್ದರೆ, ಕೆಲವರು ಲವ್ ಮ್ಯಾರೇಜ್ ಇರಬಹುದು ಎಂದು ಊಹಿಸಿದ್ದರು.
ಹೀಗೆ ಒಂದು ತಿಂಗಳ ಹಿಂದೆ ಚೆನೈನಲ್ಲಿ ಚರ್ಚೆಗೀಡಾದ, ಸುದ್ದಿಯಾದ ಸುನೈನಾ, ಈಗ ಇನ್ನೊಮ್ಮೆ ಸುದ್ದಿಯಲ್ಲಿದ್ದಾರೆ. ಯಾಕೆಂದರೆ ಸುನೈನಾ ಕೈ ಹಿಡಿಯಲಿರುವ ಆ ಅದೃಷ್ಟವಂತ ಯಾರು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ದುಬೈ ಮೂಲದ ಯೂಟ್ಯೂಬರ್, ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್ ಖಲೀದ್ ಅಲ್ ಅಮೇರಿ, ಸುನೈನಾ ಅವರನ್ನು ಮದುವೆಯಾಗಲಿದ್ದಾರೆ ಅನ್ನುವ ಸುದ್ದಿ ಸದ್ಯಕ್ಕೆ ಹಬ್ಬಿದೆ. ನಿನ್ನೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಇನ್ನೂ ಕಳೆದ ತಿಂಗಳು ಸುನೈನಾ ಹುಡುಗನ ಕೈ ಹಿಡಿದು, ತಾವು ಎಂಗೇಜ್ ಎಂದು ಪರೋಕ್ಷವಾಗಿ ಹೇಳಿದ್ದರು. ವಿಶೇಷ ಅಂದರೆ ಈ ಫೋಟೋನ ಖಲೀದ್ ಅವರು ಲೈಕ್ ಮಾಡಿದ್ದಾರೆ. ಇಷ್ಟೇ ಅಲ್ಲ ಈಗ ಖಲೀದ್ ಅಲ್ ಅಮೇರಿ ಕೂಡ ಇದೇ ರೀತಿಯ ಫೋಟೋವನ್ನು ಇತ್ತೀಚೆಗೆ ಹಾಕಿದ್ದಾರೆ. ಹೀಗಾಗಿ ಈ ಇಬ್ಬರು ಹೊಸ ಬದುಕಿಗೆ ಕಾಲಿಡಲಿದ್ದಾರೆ ಅನ್ನುವುದು ಅನೇಕರಿಗೆ ಖಾತ್ರಿಯಾಗಿದೆ.
ಅಂದ್ಹಾಗೇ ಖಲೀದ್ ಅಲ್ ಅಮೇರಿಗೆ ಇದು ಎರಡನೇ ಮದುವೆ. ಸಲಾಮಾ ಮೊಹ್ಮದ್ ಜೊತೆ ಈ ಹಿಂದೆ ಮದುವೆಯಾಗಿದ್ದ ಖಲೀದ್ ಕಳೆದ ಫೆಬ್ರವರಿಯಲ್ಲಿ ಮೊದಲ ಪತ್ನಿ ಸಲಾಮಾ ಅವರಿಂದ ದೂರವಾಗಿದ್ದರು. ಜುಲೈ 1ರಂದು ಸಲಾಮಾ ಅವರು ವಿಚ್ಛೇದನದ ವಿಚಾರ ಬಹಿರಂಗಗೊಳಿಸಿದ್ದಾರೆ ಕೂಡ. ಇನ್ನೂ ಖಲೀದ್ ಅಲ್ ಅಮೇರಿ ಸ್ಟ್ಯಾನ್ಫೋರ್ಡ್ ವಿಶ್ವ ವಿದ್ಯಾಲಯದಲ್ಲಿ ಪದವೀಧರ. ಖಲೀದ್ ಹಾಗೂ ಇವರ ಮೊದಲ ಪತ್ನಿ ಸಲಾಮಾ ಇಬ್ಬರೂ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಖಲೀದ್ಗೆ 31 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಹೀಗಾಗಿ ಖಲೀದ್ ದುಬೈನ ಸ್ಟಾರ್ ಎನ್ನಲು ಅಡ್ಡಿ ಇಲ್ಲ.
ಈ ಹಿನ್ನೆಲೆಯಲ್ಲಿ ಸುನೈನಾ ಮತ್ತು ಖಲೀದ್ ಮದುವೆ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚೆರ್ಚೆಯನ್ನು ಹುಟ್ಟು ಹಾಕಿದೆ. ಇವರಿಬ್ಬರ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಬಗೆ ಬಗೆಯ ಅಭಿಪ್ರಾಯಗಳು ಕೂಡ ವ್ಯಕ್ತವಾಗುತ್ತಿವೆ. ನಿಜಕ್ಕೂ ಸುನೈನಾ, ಖಲೀದ್ ಅವರನ್ನೇ ಮದುವೆಯಾಗ್ತಾರಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











