"ಶಿವರಾತ್ರಿ ದಿನವೇ ಮಯಿಲ್ ಸಾಮಿ ನಿಧನ.. ಆತನ ಕೊನೆ ಆಸೆಯನ್ನು ನಾನು ಈಡೇರಿಸುತ್ತೇನೆ": ರಜನಿಕಾಂತ್
ಭಾನುವಾರ ತಮಿಳಿನ ಹಾಸ್ಯ ನಟ ಮಯಿಲ್ ಸಾಮಿ(57) ನಿಧನರಾಗಿದ್ದರು. ಬೆಂಗಳೂರಿನಿಂದ ಚೆನ್ನೈಗೆ ಮರಳಿದ್ದ ರಜನಿಕಾಂತ್ ಮಯಿಲ್ ಸಾಮಿಗೆ ಅಂತಿಮ ನಮನ ಸಲ್ಲಿಸಿದರು. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಸೂಪರ್ ಸ್ಟಾರ್ "ನನಗೆ ಮಯಿಲ್ ಸಾಮಿ ಬಹಳ ಆಪ್ತರಾಗಿದ್ದರು. ಅವರು ಕೂಡ ಶಿವನ ಭಕ್ತರಾಗಿದ್ದರು. ಅವರ ಕೊನೆ ಆಸೆಯನ್ನು ಈಡೇರಿಸುತ್ತೇನೆ" ಎಂದಿದ್ದಾರೆ
100ಕ್ಕೂ ಅಧಿಕ ಸಿನಿಮಾಗಳಲ್ಲಿ ಪೋಷಕ ನಟರಾಗಿ ಮಯಿಲ್ ಸಾಮಿ ನಟಿಸಿದ್ದರು. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟನನ್ನು ಭಾನುವಾರ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು. ಕಮಲ್ ಹಾಸನ್, ಧನುಷ್, ತಮಿಳುನಾಡು ಸಿಎಂ ಸ್ಟಾಲಿನ್ ಸೇರಿದಂತೆ ಸಾಕಷ್ಟು ಗಣ್ಯರು ಮಯಿಲ್ ಸಾಮಿ ನಿಧಕ್ಕೆ ಸಂತಾಪ ಸೂಚಿಸಿದ್ದರು. ಹಲವರು ಸೋಶಿಯಲ್ ಮೀಡಿಯಾದಲ್ಲಿ ಮಯಿಲ್ ಸಾಮಿ ಅಗಲಿಕೆಗೆ ಸಂತಾಪ ಸೂಚಿಸಿದ್ದರು.
ನಟ ರಜನಿಕಾಂತ್ ನಿನ್ನೆ(ಫೆ.20) ಮಯಿಲ್ ಸಾಮಿ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ನಂತರ ಆತ್ಮೀಯ ಸ್ನೇಹಿತನ ಬಗ್ಗೆ ಮಾತನಾಡಿದ್ದಾರೆ. ಆತನಿಗೆ ಫೋನ್ ಮಾಡಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾವಿಬ್ಬರು ಒಟ್ಟಿಗೆ ನಟಿಸಿದ್ದು ಕಮ್ಮಿ
"ಮಯಿಲ್ ಸಾಮಿ ನನಗೆ ಆತ್ಮೀಯ ಸ್ನೇಹಿತರಾಗಿದ್ದರು. ಬಹಳ ವರ್ಷಗಳಿಂದ ಅವರು ನನಗೆ ಗೊತ್ತು. ಆದರೆ ನಾವು ಒಟ್ಟಿಗೆ ಸಿನಿಮಾಗಳಲ್ಲಿ ನಟಿಸಿದ್ದು ಕಡಿಮೆ. ಇನ್ನು ಮಯಿಲ್ ಸಾಮಿ ಶಿವಭಕ್ತರು.. ಅವರಿಗೆ ಎಂಜಿಆರ್ ಎಂದರೆ ತುಂಬಾ ಇಷ್ಟ.. ನಾನು ಆತನ ಜೊತೆಗಿದ್ದಾಗ ಸಿನಿಮಾಗಳ ಬಗ್ಗೆ ಕೇಳುತ್ತಿದ್ದೆ. ಆದರೆ, ಆತ ಎಂಜಿಆರ್ ಹಾಗೂ ಶಿವನ ಬಗ್ಗೆ ಹೆಚ್ಚು ಮಾತನಾಡುತ್ತಿದ್ದರು. ಮಯಿಲ್ ಸಾಮಿ ಪ್ರತೀ ವರ್ಷ ಕಾರ್ತಿಕ ಪೌರ್ಣಮಿ ದಿನ ತಿರುವಣ್ಣಾಮಲೈ ಹೋಗುತ್ತಿದ್ದರು."

ಮಯಿಲ್ ನನಗೆ ಫೋನ್ ಮಾಡಿದ್ರು
"ಮಯಿಲ್ ಸಾಮಿ ಶಿವನ ಧ್ಯಾನದಲ್ಲಿ ಬಹಳ ಸಂತೋಷಪಡುತ್ತಿದ್ದರು. ನನಗೆ ಅಲ್ಲಿಂದ ಫೋನ್ ಮಾಡಿ ಮಾತನಾಡುತ್ತಿದ್ದರು. ಕಳೆದ ಬಾರಿ ಕಾರ್ತಿಕ ಪೌರ್ಣಿಮೆ ಸಮಯದಲ್ಲಿ ಫೋನ್ ಮಾಡಿದ್ದರು. ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಮಾತನಾಡಲು ಸಾಧ್ಯವಾಗಿರಲಿಲ್ಲ. ನಂತರ ಕೂಡ ಮೂರ್ನಾಲ್ಕು ಬಾರಿ ಫೋನ್ ಮಾಡಿದ್ದರು. ನನಗೆ ಮಾತನಾಡಲು ಸಾಧ್ಯವಾಗಲಿಲ್ಲ. ಈಗ ಮಾತನಾಡಲು ಮೆಯಿಲ್ ಇಲ್ಲ. ಶಿವನ ಭಕ್ತರಾಗಿದ್ದ ಮಯಿಲ್ ಸಾಮಿ ಶಿವರಾತ್ರಿ ದಿನವೇ ನಿಧನರಾಗಿದ್ದಾರೆ. ಅದು ಆ ದೇವರ ಇಚ್ಛೆ. ತನ್ನ ಪ್ರಿಯ ಭಕ್ತನನ್ನು ದೇವರು ಆ ದಿನವೇ ತನ್ನ ಬಳಿಗೆ ಕರೆದುಕೊಂಡಿದ್ದಾನೆ"

ಆತನ ಕೊನೆ ಆಸೆ ಈಡೇರಿಸುತ್ತೇನೆ
"ಮಯಿಲ್ ಕೊನೆಯ ಆಸೆ ನಾನು ತಿರುವಣ್ಣಾಮಲೈಗೆ ಹೋಗಿ ಶಿವನ ದರ್ಶನ ಮಾಡಬೇಕು ಎನ್ನುವುದು. ನಾನು ಅಲ್ಲಿಗೆ ಹೋದರೆ, ನಾನು ಆ ಪರಶಿವನಿಗೆ ಅಭಿಷೇಕ ಮಾಡಿದರೆ ನೋಡಬೇಕು ಎಂದು ಬಯಸಿದ್ದರು. ಇದೇ ವಿಚಾರವನ್ನು ಡ್ರಮ್ಸ್ ಶಿವಮಣಿ ಬಳಿ ಹೇಳಿಕೊಂಡಿದ್ದರಂತೆ. ನಾನು ಶಿವಮಣಿಯೊಂದಿಗೆ ಮಾತನಾಡುತ್ತೇನೆ. ಮಯಿಲ್ ಸಾಮಿ ಕೊನೆಯ ಆಸೆಯನ್ನು ತೀರಿಸುತ್ತೇನೆ" ಎಂದು ರಜನಿಕಾಂತ್ ಹೇಳಿದ್ದಾರೆ.

ಸ್ಟಾರ್ ನಟರ ಜೊತೆ ಅಭಿನಯ
ಅಜಿತ್, ದಳಪತಿ ವಿಜಯ್, ಕಮಲ್ ಹಾಸನ್, ಸೂರ್ಯ ಸೇರಿದಂತೆ ತಮಿಳಿನ ಸ್ಟಾರ್ ನಟರ ಜೊತೆಗೆ ಮಯಿಲ್ ಸಾಮಿ ನಟಿಸಿದ್ದರು. ಕಿರುತೆರೆ ಕಾರ್ಯಕ್ರಮಗಳ ಮೂಲಕವೂ ವೀಕ್ಷಕರಿಗೆ ಹತ್ತಿರವಾಗಿದ್ದರು. ಗಿಲ್ಲಿ, 2.0, ಕಾಂಚನಾ, ವೀರಂ, ಧೂಳ್ ಇವರು ನಟಿಸಿದ ಕೆಲ ಹಿಟ್ ಸಿನಿಮಾಗಳು.


Click it and Unblock the Notifications











