'33 ವರ್ಷಗಳ ನಂತರ ನನ್ನ ಗುರುವಿನೊಂದಿಗೆ ಕೆಲಸ ಮಾಡುತ್ತಿದ್ದೇನೆ' : ಸೂಪರ್‌ಸ್ಟಾರ್ ರಜನಿಕಾಂತ್
'ಜೈಲರ್' ಸಿನಿಮಾ ಯಶಸ್ಸಿನಲ್ಲಿರುವ ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ ಮುಂಬರುವ ಚಿತ್ರ 'ತಲೈವರ್ 170' ಚಿತ್ರೀಕರಣವನ್ನು ಕೆಲವು ವಾರಗಳ ಹಿಂದೆ ಪ್ರಾರಂಭಿಸಿದ್ದಾರೆ. ಇದರ ಬೆನ್ನಲ್ಲೆ ರಜನಿಕಾಂತ್ ಅಕ್ಟೋಬರ್ 25 ರಂದು ಮತ್ತೊಂದು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಹೆಸರಾಂತ ನಟ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿದ್ದಾರೆ.
ಅಮಿತಾಬ್ ಬಚ್ಚನ್ ಅವರ ಜೊತೆಗಿನ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅವರು, ಬಿಗ್ ಬಿಯನ್ನಯ ತಮ್ಮ ಗುರು (ಮೆಂಟರ್) ಎಂದು ಕರೆದಿದ್ದಾರೆ. 33 ವರ್ಷಗಳ ನಂತರ ಮ್ತೆ ತಾವಿಬ್ಬರು ಒಂದಾಗುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

33 ವರ್ಷಗಳ ನಂತರ ಬಿಗ್ ಬಿ ಜೊತೆ ಮತ್ತೆ ಒಂದಾದ ರಜಿನಿಕಾಂತ್
ಫೋಟೋ ಹಂಚಿಕೊಂಡಿರುವ ಅವರು ತಮ್ಮ ಶೀರ್ಷಿಕೆಯಲ್ಲಿ, "33 ವರ್ಷಗಳ ನಂತರ, ಟಿ.ಜೆ ಜ್ಞಾನವೇಲ್ ನಿರ್ದೇಶನದ ಮುಂಬರುವ ಲೈಕಾ ಪ್ರೋಡಕ್ಷನ್‌ನ "ತಲೈವರ್ 170" ಸಿನಿಮಾದಲ್ಲಿ ನನ್ನ ಗುರು ಅಮಿತಾಬ್ ಬಚ್ಚನ್ ಅವರೊಂದಿಗೆ ನಾನು ಮತ್ತೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವು ಸಂತೋಷದಿಂದ ಮಿಡಿಯುತ್ತಿದೆ!" ಎಂದು ಬರೆದುಕೊಂಡಿದ್ದಾರೆ. ಇಬ್ಬರು ಸೂಪರ್‌ಸ್ಟಾರ್‌ಗಳು ಕೊನೆಯದಾಗಿ 1991 ರಲ್ಲಿ ಬಿಡುಗಡೆಯಾದ 'ಹಮ್' ಎಂಬ ಹಿಂದಿ ಚಲನಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
ಸೂಪರ್‌ಸ್ಟಾರ್ ರಜನಿಕಾಂತ್ ಅವರು ಕೆಲವು ದಿನಗಳ ಹಿಂದೆ ತಿರುನಲ್ವೇಲಿಯಲ್ಲಿ 'ತಲೈವರ್ 170' ಚಿತ್ರದ ಚಿತ್ರೀಕರಣ ಪ್ರಾರಂಭಿಸಿದ್ದರು. ಈ ವೇಳೆ ಕೇರಳ ಮತ್ತು ತಿರುನಲ್ವೇಲಿಯಲ್ಲಿ ನಟ ರಜನಿಕಾಂತ್ ಅವರನ್ನು ನೋಡಲು ಅಭಿಮಾನಿಗಳ ಸಾಗರವೇ ನೆರೆದಿತ್ತು. 'ತಲೈವರ್ 170' ಚಿತ್ರವನ್ನು 'ಜೈ ಭೀಮ್' ಖ್ಯಾತಿಯ ಟಿಜೆ ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ.
'ತಲೈವರ್ 170'
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದಲ್ಲಿ ರಜನಿಕಾಂತ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ವಿಶ್ವದಾದ್ಯಂತ 650 ಕೋಟಿ ರೂಪಾಯಿಗಳನ್ನು ಗಳಿಸಿ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. 'ಜೈಲರ್' ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ಕೇರಳದ ತಿರುವನಂತಪುರದಲ್ಲಿ 'ತಲೈವರ್ 170' ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ತಮ್ಮ 'ತಲೈವರ್ 170' ಚಿತ್ರದ ಕುರಿತು ಮಾತನಾಡಿದ್ದ ರಜನಿಕಾಂತ್ ಅವರು, ಮುಂಬರುವ ಚಿತ್ರವು ಸಾಮಾಜಿಕ ಸಂದೇಶದೊಂದಿಗೆ ದೊಡ್ಡ-ಬಜೆಟ್ ಕಮರ್ಷಿಯಲ್ ಎಂಟರ್‌ಟೈನರ್ ಆಗಿರುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ. 'ತಲೈವರ್ 170' ಚಿತ್ರದ ತಾರಾಗಣದಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್, ದುಶಾರ ವಿಜಯನ್, ರಕ್ಷಣ್ ಮತ್ತು ಜಿಎಂ ಸೌಂದರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಟಿಜೆ ಜ್ಞಾನವೇಲ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾಗೆ ಅನಿರುದ್ಧ ರವಿಚಂದರ್ ಸಂಗೀತ ಸಂಯೋಜಿಸಲಿದ್ದಾರೆ.


Click it and Unblock the Notifications










