ಶೀಘ್ರದಲ್ಲೇ ತಲೈವಾ- ಶಿವಣ್ಣ ಹೊಸ ಸಿನಿಮಾ ಪ್ರೋಮೊ ಶೂಟ್; ಡಿ. 12ಕ್ಕೆ ರಿಲೀಸ್
ಸದ್ಯ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಶುರುವಾಗಿದೆ. ಕನ್ನಡ ಕಲಾವಿದರು, ತಂತ್ರಜ್ಞರು ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸೋದು, ಪರಭಾಷಿಕರು ಕನ್ನಡಕ್ಕೆ ಬರುವುದು ಹೆಚ್ಚಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಈಗಾಗಲೇ ತೆಲುಗು, ತಮಿಳು ಚಿತ್ರದಲ್ಲಿ ಮಿಂಚಿದ್ದಾರೆ.
ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ನರಸಿಂಹ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಕೇವಲ ಎರಡು ಸನ್ನಿವೇಶಗಳಲ್ಲಿ ಕಾಣಿಸಿಕೊಂಡು ಚಿತ್ರದ ಖದರ್ ಹೆಚ್ಚಿಸಿದ್ದರು. ಇದೀಗ ಮತ್ತೊಮ್ಮೆ ಸೂಪರ್ ಸ್ಟಾರ್ ಜೊತೆ ಸೆಂಚುರಿ ಸ್ಟಾರ್ ತೆರೆಹಂಚಿಕೊಳ್ಳುವುದು ಪಕ್ಕಾ ಆಗಿದೆ. ಈ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೀತಿದೆ. ಆ ಲೇಟೆಸ್ಟ್ ಅಪ್‌ಡೇಟ್ ಕೇಳಿ ಸಿನಿರಸಿಕರು ಫಿದಾ ಆಗಿದ್ದಾರೆ.

ಕಳೆದ ವರ್ಷ ಬಂದಿದ್ದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 650 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ತಲೈವಾಗೆ ದೊಡ್ಡ ಬ್ರೇಕ್ ಕೊಟ್ಟಿತ್ತು. ನೆಲ್ಸನ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಿಸಿತ್ತು. ಮೋಹನ್ ಲಾಲ್, ಶಾಕಿಶ್ರಾಫ್ ಸಹ ಚಿತ್ರದ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದರು.
ಚಿತ್ರದ ಕೈಮ್ಯಾಕ್ಸ್‌ನಲ್ಲಿ ಮುತ್ತುವೇಲ್ ಪಾಂಡಿಯನ್(ರಜನಿಕಾಂತ್), ನರಸಿಂಹ (ಶಿವಣ್ಣ) ಹಾಗೂ ಮ್ಯಾಥ್ಯೂ (ಮೋಹನ್ ಲಾಲ್) ಸಿಗರೇಟ್ ಸೇದುತ್ತಾ ಕ್ರಿಯೇಟ್ ಮಾಡಿದ್ದ ಮ್ಯಾಜಿಕ್ ಅಭಿಮಾನಿಗಳು ಇನ್ನು ಮರೆತ್ತಿಲ್ಲ. ಇದೀಗ 'ಜೈಲರ್' ಸೀಕ್ವೆಲ್‌ಗೆ ವೇದಿಕೆ ಸಿದ್ಧವಾಗಿದೆ. ಮತ್ತೆ ಅದೇ ತಂಡ ಒಟ್ಟಿಗೆ ಕೆಲಸ ಮಾಡಲಿದೆ. ನೆಲ್ಸನ್ ನಿರ್ದೇಶನದಲ್ಲೇ ಸಿನಿಮಾ ಮೂಡಿ ಬರಲಿದೆ.
'ಜೈಲರ್' ಸಕ್ಸಸ್ ಬೆನ್ನಲ್ಲೇ ಸನ್ ಪಿಕ್ಚರ್ಸ್ ಸಂಸ್ಥೆ ರಜನಿಕಾಂತ್, ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ಭರ್ಜರಿ ಉಡುಗೊರೆ ನೀಡಿ ಲಾಭದಲ್ಲಿ ಪಾಲನ್ನು ಕೊಟ್ಟಿತ್ತು. ಅದೇ ಸಮಯಲ್ಲಿ 'ಜೈಲರ್'-2 ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎನ್ನಲಾಗಿತ್ತು. ಇತ್ತೀಚೆಗೆ ಸಂದರ್ಶನದಲ್ಲಿ ನೆಲ್ಸನ್ ಇದನ್ನು ಖಚಿತಪಡಿಸಿದ್ದರು. ಇದೀಗ 'ಜೈಲರ್' ಸೀಕ್ವೆಲ್ ಪ್ರೋಮೊ ಶೂಟ್ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಮುಂದಿನ ವಾರ 'ಜೈಲರ್'-2 ಚಿತ್ರದ ಸಣ್ಣ ಟೀಸರ್ ಶೂಟ್ ಮಾಡಲು ತಯಾರಿ ನಡೀತಿದೆ. ಅದಕ್ಕಾಗಿ ಸೆಟ್ ಹಾಕಲಾಗುತ್ತಿದ್ದು ರಜನಿಕಾಂತ್ ಜೊತೆ ಮತ್ತೊಬ್ಬ ಸ್ಟಾರ್ ನಟ ಕೂಡ ಟೀಸರ್ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನಲಾಗ್ತಿದೆ. ಇನ್ನು ಮುತ್ತುವೇಲ್, ನರಸಿಂಹ ಹಾಗೂ ಮ್ಯಾಥ್ಯು ಸ್ಪೆಷಲ್ ಪೋಸ್ಟರ್‌ಗಳನ್ನು ರಿಲೀಸ್ ಮಾಡಿ ಸನ್ ಪಿಕ್ಚರ್ಸ್ ಸಂಸ್ಥೆ ಸೀಕ್ವೆಲ್ ಬಗ್ಗೆ ಸುಳಿವು ನೀಡಿದೆ.
ನರಸಿಂಹ ಅವತಾರದಲ್ಲಿ ಶಿವಣ್ಣನ ಹೊಸ ಪೋಸ್ಟರ್ ಅಂತೂ ಸಖತ್ ಕಿಕ್ ಕೊಡುತ್ತಿದೆ. ಡಿಸೆಂಬರ್ 12ಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ. ಅದೇ ಸಂಭ್ರಮದಲ್ಲಿ ಟೀಸರ್ ಸಮೇತ 'ಜೈಲರ್'-2 ಘೋಷಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ. ಸದ್ಯ ಶಿವಣ್ಣನ 'ಭೈರತಿ ರಣಗಲ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಮಾಫಿಯಾ ಡಾನ್ ಅವತಾರದಲ್ಲಿ ಸೆಂಚುರಿ ಸ್ಟಾರ್ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ.
'ಭೈರತಿ ರಣಗಲ್' ಪಾತ್ರವನ್ನೇ ನೆನಪಿಸುವಂತೆ ನರಸಿಂಹ ಪಾತ್ರ ಕೂಡ ಇದೆ. ಪರಭಾಷಿಕರು ಕೂಡ ಈ ಚಿತ್ರವನ್ನು ಮೆಚ್ಚಿಕೊಂಡಾಡಿದ್ದರು. ಶಿವಣ್ಣನ ಸ್ಕ್ರೀನ್ ಪ್ರೆಸೆನ್ಸ್, ಸ್ವಾಗ್ ನೋಡಿ ಥ್ರಿಲ್ಲಾಗಿದ್ದರು. ಇದೀಗ 'ಜೈಲರ್-2' ಚಿತ್ರದಲ್ಲಿ ಮತ್ತೆ ಸೆಂಚುರಿ ಸ್ಟಾರ್ ದರ್ಬಾರ್ ನಡೆಯುತ್ತದೆ ಎಂದು ನೋಡಿ ಖುಷಿಯಾಗಿದ್ದಾರೆ.
ರಜನಿಕಾಂತ್ ನಟನೆಯ 'ವೆಟ್ಟೆಯಾನ್' ಇತ್ತೀಚೆಗೆ ಬಿಡುಗಡೆ ಆಗಿ ತಕ್ಕ ಮಟ್ಟಿಗೆ ಗೆದ್ದಿತ್ತು. ಬಳಿಕ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಉಪೇಂದ್ರ ಕೂಡ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೆಲ್ಲದರ ನಡುವೆ 'ಜೈಲರ್-2' ಬಗ್ಗೆ ನಿರೀಕ್ಷೆ ಗರಿಗೆದರಿದೆ.


Click it and Unblock the Notifications











