ಕೇಂದ್ರದ ವಿರುದ್ಧ ಗುಡುಗಿದ ವಿಜಯ್; ತಮಿಳುನಾಡು ಸರ್ಕಾರಕ್ಕೂ ದಳಪತಿ ಎಚ್ಚರಿಕೆ!
ತಮಿಳುನಾಡಿನಲ್ಲಿ ಸಿನಿಮಾ ಮಂದಿಯ ರಕ್ತದಲ್ಲಿಯೇ, ರಾಜಕೀಯ ಇದೆ. ಅಣ್ಣಾದೊರೈ, ಕರುಣಾನಿಧಿ, ಜಯಲಲಿತಾ, ವಿಜಯಕಾಂತ್, ಶರತ್ ಕುಮಾರ್ ಇದಕ್ಕೆ ಉದಾಹರಣೆ.
ಇನ್ನೂ ಕಮಲಹಾಸನ್ ಈಗಾಗಲೇ ಪಕ್ಷ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಬರಬೇಕೆಂಬ ಉದ್ದೇಶದಲ್ಲಿ ರಜನಿಕಾಂತ್ ಸಾಕಷ್ಟು ಗೊಂದಲಗಳ ಮಧ್ಯೆಯೂ ತಮ್ಮ ಪಕ್ಷ ಸ್ಥಾಪಿಸಿ ಆ ನಂತರ ರಾಜಕೀಯದ ಸಹವಾಸ ಬೇಡ ಎಂದು ಯುಟರ್ನ್ ಕೂಡ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ಇತ್ತ ಇಳಯ ದಳಪತಿ ಬಿರುದಾಂಕಿದ ವಿಜಯ್ ಕೂಡ ಅಖಾಡಕ್ಕಿಳಿದಿದ್ದಾರೆ. ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷವನ್ನೂ ಹುಟ್ಟು ಹಾಕಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನ ಇರುವಾಗ ಬಿ.ಜೆ.ಪಿ ಪಕ್ಷದ ವಿರುದ್ಧ ಸಮರವನ್ನೂ ಸಾರಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.
ಹೌದು, ನಿಮಗೆ ಗೊತ್ತಿರಬೇಕು.. ಪೌರತ್ವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ, ನಿನ್ನೆ ಸಂಜೆಯಿಂದ ಅಧಿಕೃತವಾಗಿ ಜಾರಿಗೊಳಿಸಿದೆ. ಈ ಮೂಲಕ, ಅನೇಕ ವರ್ಷಗಳಿಂದ ತಾನು ನೀಡಿದ್ದ ಭರವಸೆಯೊಂದನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಹಲವು ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಕಾಯ್ದೆಯ ಬಗ್ಗೆಯೇ ವಿಜಯ್ ಸದ್ಯಕ್ಕೆ ತಮ್ಮ ಅಸಮಾಧಾನವನ್ನ ಹೊರ ಹಾಕಿದ್ದಾರೆ. ಕಾಯ್ದೆಯನ್ನು 'ವಿಭಜಕ' ಎಂದು ಕರೆದಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಇನ್ನೂ ಸಿಎಎ ಜಾರಿಯನ್ನು ಒಪ್ಪಲು ಸಾಧ್ಯವಿಲ್ಲ. ಪೌರತ್ವ ತಿದ್ದುಪಡಿ 2019ರಂತಹ ಯಾವುದೇ ಕಾನೂನನ್ನು ದೇಶದಲ್ಲಿ ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿ ಎಲ್ಲರೂ ಸಹಬಾಳ್ವೆಯಿಂದ ಬಾಳುತ್ತಿರುವಾಗ ಇಂತಹ ಕಾನೂನಿನ ಅಗತ್ಯ ಏನಿದೆ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ ವಿಜಯ್.

ಇಷ್ಟೇ ಅಲ್ಲ ಯಾವುದೇ ಕಾರಣಕ್ಕೂ ತಮಿಳುನಾಡಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಡಿಎಂಕೆ ಸರ್ಕಾರವು ಜನರಿಗೆ ಭರವಸೆ ನೀಡಬೇಕೆಂದು ವಿಜಯ್ ಒತ್ತಾಯಿಸಿದ್ದಾರೆ.ವಿಜಯ್ ಅವರ ಈ ಪೊಲಿಟಿಕಲ್ ಸ್ಟೇಟ್ಮೆಂಟ್, ತಮಿಳುನಾಡಿನಲ್ಲಿ ಅಷ್ಟೇ ಅಲ್ಲ ಭಾರತದೆಲ್ಲೆಡೆ ಸಂಚಲನವನ್ನ ಸೃಷ್ಟಿಸಿದೆ. ಪರ ವಿರೋಧದ ಚರ್ಚೆ ನಡೆಯುತ್ತಿದೆ.
ಸಿಎಎ ಎಂದರೇನು..?
1955ರಲ್ಲಿ ಭಾರತದಲ್ಲಿ ಪೌರತ್ವ ಕಾಯ್ಡೆಯನ್ನ ಜಾರಿಗೊಳಿಸಲಾಗಿತ್ತು. ಅದರ ಪ್ರಕಾರ, ಭಾರತದಲ್ಲಿ ಹುಟ್ಟಿದವರಿಗೆ, ಭಾರತದಲ್ಲಿ ಯಾವುದಾದರೂ ಸರ್ಕಾರದಿಂದ ಗುರುತಿಸಲ್ಪಟ್ಟ ಯೋಜನೆಯಲ್ಲಿ ನೋಂದಾವಣೆಯಾದವರಿಗೆ, ಭಾರತಕ್ಕೆ ವಲಸೆ ಬಂದವರಿಗೆ ಭಾರತದ ಪೌರತ್ವ ನೀಡುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿತ್ತು. ಈ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ತರಲಾಗಿತ್ತು.ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧರ್ಮದ ಆಧಾರದಲ್ಲಿ ದಬ್ಬಾಳಿಕೆಗೊಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬರುವ ಎಲ್ಲಾ ಮುಸ್ಲಿಮೇತರಿಗೆ ಭಾರತೀಯ ಪೌರತ್ವ ಎಂಬ ಬದಲಾವಣೆ ಮಾಡಲಾಗಿತ್ತು. ಡಿಸೆಂಬರ್ 9 - 2019 ರಂದು ಸದನವು ಅಂಗೀಕರಿಸಿತು. ಈ ಮಸೂದೆಯನ್ನು ರಾಜ್ಯಸಭೆಯು 11 ಡಿಸೆಂಬರ್ 2019 ರಂದು ಅಂಗೀಕರಿಸಿತು.


Click it and Unblock the Notifications











