ಸೂರ್ಯ 42 ಚಿತ್ರೀಕರಣದ ವಿಡಿಯೋ ಲೀಕ್: ಕಿಡಿಗೇಡಿಗಳಿಗೆ ಚಿತ್ರತಂಡದ ಖಡಕ್ ವಾರ್ನಿಂಗ್
ಇತ್ತೀಚಿಗೆ ಸಿನಿಮಾದ ಶೂಟಿಂಗ್ ವಿಡಿಯೋ ದೃಶ್ಯಗಳು ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದು ಸಾಮಾನ್ಯವಾಗಿದೆ. ಚಿತ್ರೀಕರಣ ನೋಡಲು ಬರುವವರು ಅಥವಾ ಶೂಟಿಂಗ್ ಸೆಟ್‌ನಲ್ಲಿ ಕೆಲಸ ಮಾಡುವ ಯಾರಾದರೂ ಇರಬಹುದು. ಅಲ್ಲಿನ ದೃಶ್ಯಗಳನ್ನು ಅಥವಾ ಪ್ರಮುಖ ಪಾತ್ರಗಳ ಪೋಟೋಗಳನ್ನು ವೈರಲ್ ಮಾಡುತ್ತಾರೆ. ಚಿತ್ರತಂಡ ಈ ಬಗ್ಗೆ ಎಷ್ಟೇ ಗಮನ ಹರಿಸಿದರೂ ಕೂಡ ಇಂತಹ ಘಟನೆಗಳು ನಡೆಯುತ್ತಿರುತ್ತದೆ.
ಒಂದು ಪಾತ್ರ ಅಥವಾ ಚಿತ್ರೀಕರಣದ ಸ್ಥಳಗಳ ಬಗ್ಗೆ ಚಿತ್ರತಂಡ ಸಿಕ್ರೇಟ್ ಕಾಪಾಡಿಕೊಂಡಿರುತ್ತಾರೆ. ಆದರೆ ಇವುಗಳು ಪೊಸ್ಟರ್ ರಿಲೀಸ್ ಅಥವಾ ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲೇ ಇತ್ತಿಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುತ್ತದೆ. ಇದು ಬಹುತೇಕ ಚಿತ್ರತಂಡದ ಅಸಮಾಧಾನಕ್ಕೆ ಕಾರಣವಾಗಿದೆ. ಸದ್ಯ ಈ ಬಿಸಿ ಕಾಲಿವುಡ್ ನಟ ಸೂರ್ಯ ಅವರ ಚಿತ್ರಕ್ಕೂ ತಟ್ಟಿದೆ.
ಜೈ ಭೀಮ್, ಸೂರರೈ ಪೋಟ್ರು ಚಿತ್ರಗಳ ಭರ್ಜರಿ ಯಶಸ್ಸಿನ ಬಳಿಕ ಸೂರ್ಯ ತಮ್ಮ ಮುಂದಿನ ಚಿತ್ರದ ತಯಾರಿಯಲ್ಲಿದ್ದಾರೆ. ಸೂರ್ಯ ಅವರ ಮುಂದಿನ ಚಿತ್ರಕ್ಕೆ ಶೀರ್ಷಿಕೆ ಅಂತಿಮವಾಗದ ಹಿನ್ನೆಲೆಯಲ್ಲಿ ಸದ್ಯ ಈ ಚಿತ್ರವನ್ನು ಸೂರ್ಯ 42 ಎಂದು ಕರೆಯಲಾಗುತ್ತಿದೆ. ಈಗಾಗಲೇ ಚಿತ್ರಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಸಿರುತೈ ಶಿವ ನಿರ್ದೇಶನದ ಸೂರ್ಯ 42 ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಈ ಮಧ್ಯೆ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಚಿತ್ರತಂಡ ಬೇಸರ ವ್ಯಕ್ತಪಡಿಸಿದ್ದು, ಅಭಿಮಾನಿಗಳಿಗೆ ಸೂಚನೆ ಜೊತೆ ಖಡಕ್ ವಾರ್ನಿಂಗ್ ನೀಡಿದೆ.

ಸೂರ್ಯ 42 ಚಿತ್ರ ಚಿತ್ರೀಕರಣದ ಕೆಲ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಚಾರ ಚಿತ್ರತಂಡದ ಗಮನಕ್ಕೂ ಬಂದಿದ್ದು, ಈ ರೀತಿಯ ಕೆಲಸ ಮಾಡಿರುವ ಕಿಡಿಗೇಡಿಗಳ ವಿರುದ್ಧ ಚಿತ್ರತಂಡ ಕಿಡಿಕಾರಿದೆ. ಸೂರ್ಯ ೪೨ ಚಿತ್ರತಂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದೆ.
ಸೂರ್ಯ 42 ಸಿನಿಮಾದ ಚಿತ್ರೀಕರಣದ ದೃಶ್ಯಗಳು ಹಾಗೂ ಸೆಟ್‌ನ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಸಿನಿಮಾದ ಒಂದು ಚಿಕ್ಕ ಕೆಲಸದ ಹಿಂದೆ ಕೂಡ ಸಂಪೂರ್ಣ ಚಿತ್ರತಂಡ ಬೆವರಿನ ಶ್ರಮವಿರುತ್ತದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಉತ್ತಮ ಉಡುಗೊರೆಯಾಗಿ ನೀಡಲು ನಾವು ಶ್ರಮವಹಿಸುತ್ತಿದ್ದೇವೆ. ನೀವು ಈಗಾಗಲೇ ಹಂಚಿಕೊಂಡಿರುವ ಚಿತ್ರದ ವಿಡಿಯೋ ಹಾಗೂ ಫೋಟೋಗಳನ್ನು ಡಿಲೀಟ್ ಮಾಡಿದರೆ ಅದೇ ನಮಗೆ ದೊಡ್ಡ ಉಪಕಾರವಾಗುತ್ತದೆ. ಅಲ್ಲದೇ ಈ ಬಗ್ಗೆ ನಾವು ಕಾನೂನಾತ್ಮಕವಾಗಿ ಕೂಡ ಕ್ರಮ ತೆಗೆದುಕೊಳ್ಳುತ್ತೇವೆ. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸಿದರೆ ಅಂತವರ ವಿರುದ್ಧ ಕಾಪಿ ರೈಟ್ ಆ್ಯಕ್ಟ್ ಅಡಿಯಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಕಾಲಿವುಡ್ ನಟ ಸೂರ್ಯ ಅವರ ಮುಂದಿನ ಚಿತ್ರವನ್ನು ಸ್ಟುಡಿಯೋ ಗ್ರೀನ್ ಹಾಗೂ ಯುವಿ ಕ್ರಿಯೇಷನ್ಸ್ ಪ್ರಸ್ತುತ ಪಡಿಸುತ್ತಿದ್ದು, ಕಾಲಿವುಡ್‌ನ ಉತ್ತಮ ಕಲಾವಿದರ ತಂಡವೇ ಈ ಚಿತ್ರಕ್ಕಾಗಿ ಕೆಲಸ ಮಾಡುತ್ತಿದೆ. ಚಿತ್ರದ ನಾಯಕ ಸೂರ್ಯ ಕೂಡ ಈ ಚಿತ್ರದ ಬಗ್ಗೆ ಮುತುವರ್ಜಿ ವಹಿಸುತ್ತಿದ್ದು, ಸಿನಿ ಪ್ರೇಕ್ಷಕರಿಗೆ ಒಂದು ಉತ್ತಮ ಸಿನಿಮಾ ಕೊಡಲು ಚಿತ್ರತಂಡ ಶ್ರಮಹಿಸುತ್ತಿದೆ.
ಸಿರುತೈ ಶಿವ ನಿರ್ದೇಶನದ ಸೂರ್ಯ 42 ಚಿತ್ರ 3ಡಿ ಅವತರಣಿಕೆಯಲ್ಲಿ ದೊಡ್ಡ ಮಟ್ಟದಲ್ಲೇ ಬಿಡುಗಡೆಯಾಗಲಿದ್ದು, ಚಿತ್ರದ ಬಗ್ಗೆ ಕಾಲಿವುಡ್ ಮಾತ್ರವಲ್ಲದೆ ಎಲ್ಲಾ ಭಾಷೆಯ ಸೂರ್ಯ ಅವರ ಅಭಿಮಾನಿಗಳಿಗೆ ಭಾರಿ ನಿರೀಕ್ಷೆಯಿದೆ. ಇನ್ನು ಚಿತ್ರದಲ್ಲಿ ಸೂರ್ಯ ಅವರಿಗೆ ಜೋಡಿಯಾಗಿ ಬಾಲಿವುಡ್ ಹಾಟ್ ಬೆಡಗಿ ದಿಶಾ ಪಟಾಣಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸದ್ಯದಲ್ಲೇ ಸೂರ್ಯ 42 ಬಗ್ಗೆ ಚಿತ್ರತಂಡ, ಇನ್ನಷ್ಟು ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.


Click it and Unblock the Notifications











