Retro Trailer: ಸೂರ್ಯ ಬಗೆ ಬಗೆ ವೇಷ; ಗೆಲ್ಲುತ್ತಾ ಪಾರಿವೇಲ್ ಆವೇಶ?
ಸೂರ್ಯ ನಟನೆಯ 'ಕಂಗುವ' ಸಿನಿಮಾ ಸೋತು ಸುಣ್ಣವಾಗಿತ್ತು. ಆ ಸಿನಿಮಾ ಮಾಡಿ ಅವರು ಸಿಕ್ಕಾಪಟ್ಟೆ ಟ್ರೋಲ್ ಎದುರಿಸಿದ್ದರು. ಸದ್ಯ ಸೋಲಿನ ಸುಳಿಯಿಂದ ಹೊರಬರಲು ಹೊಸ ಅವತಾರ ತಾಳಿದ್ದಾರೆ. ಈ ಬಾರಿ ಪ್ರೇಕ್ಷಕರನ್ನು 40 ವರ್ಷ ಹಿಂದಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ನಟನೆಯ 'ರೆಟ್ರೋ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಬಹಳ ವಿಭಿನ್ನವಾಗಿರುವ ಸಿನಿಮಾ ಝಲಕ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ಗೆಲ್ಲೋದು ಗ್ಯಾರೆಂಟಿ, ಸೂರ್ಯ ಈಸ್ ಬ್ಯಾಕ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ.

ಈಗಾಗಲೇ ಚಿತ್ರದ 'ಕನ್ನಿಮಾ' ಸಾಂಗ್ ಹಿಟ್ ಆಗಿದೆ. ಪೂಜಾ ಹೆಡ್ಡೆ ಡ್ಯಾನ್ಸ್ ನೋಡಿದವರು ಫಿದಾ ಆಗಿದ್ದಾರೆ. ಇದೀಗ ಟ್ರೈಲರ್ ಬಂದು ಸಿನಿಮಾ ಬಗ್ಗೆ ಮತ್ತಷ್ಟು ನಿರೀಕ್ಷೆ ಹುಟ್ಟಾಕ್ಕಿದೆ. ಸ್ಟೋನ್ ಬೆಂಚ್ ಕ್ರಿಯೇಷನ್ಸ್ ಹಾಗೂ
2ಡಿ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಜಂಟಿಯಾಗಿ ಈ ರೊಮಾಂಟಿಕ್ ಆಕ್ಷನ್ ಸಿನಿಮಾ ನಿರ್ಮಾಣ ಮಾಡಿವೆ. ಮೇ 1ಕ್ಕೆ ಸಿನಿಮಾ ವಿಶ್ವದಾದ್ಯಂತೆ ತೆರೆಗೆ ಬರಲಿದೆ.
ಅಂದಾಜು 60 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಟೈಟಲ್‌ಗೆ ತಕ್ಕಂತೆ ದಶಕಗಳ ಕಾಲ ಹಿಂದಕ್ಕೆ ಚಿತ್ರ ನೋಡುಗರನ್ನು ಕರೆದೊಯ್ಯುತ್ತದೆ. ಸೂರ್ಯ ಖಡಕ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಅವರ ಲುಕ್, ಡ್ರೆಸ್ಸಿಂಗ್ ಸ್ಟೈಲ್ ಎಲ್ಲವೂ ಬಹಳ ವಿಭಿನ್ನವಾಗಿದೆ. ಹಿನ್ನೆಲೆ, ಕಲಾವಿದರ ಲುಕ್, ಕಾಸ್ಟ್ಯೂಮ್ ಎಲ್ಲವೂ ಹೊಸದಾಗಿ ಕಾಣುತ್ತದೆ. ಪೂಜಾ ಹೆಗ್ಡೆ ಸೇರಿ ಕೆಲವರಿಗೆ ಡಾರ್ಕ್ ಮೇಕಪ್ ಮಾಡಲಾಗಿದೆ.
'ರೆಟ್ರೋ' ಚಿತ್ರದಲ್ಲಿ ನಟ ಸೂರ್ಯ ಮಾರ್ಷಲ್ ಆರ್ಟ್ಸ್ ಕಲಿತ ಪಾರಿ ಕಣ್ಣನ್ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಆತನ ಪತ್ನಿ ರುಕ್ಮಿಣಿ ಪಾತ್ರದಲ್ಲಿ ಪೂಜಾ ಮಿಂಚಿದ್ದಾರೆ. ಪ್ರೀತಿ, ಹಾಸ್ಯ, ಯುದ್ಧ ಎಂದು ಚಿತ್ರದ ಥೀಮ್ ಅನ್ನು ರಿವೀಲ್ ಮಾಡಿದ್ದಾರೆ. ಸದಾ ತಂಟೆ, ತರಲೆ, ಗಲಾಟೆಯಲ್ಲೇ ಕಳೆದು ಹೋದ ಆತನ ಜೀವನಕ್ಕೆ ರುಕ್ಮಿಣಿ ಎಂಟ್ರಿ ಆಗುತ್ತದೆ. ಬಳಿಕ ಗಲಾಟೆ ಬಿಟ್ಟು ಪ್ರಶಾಂತ ಜೀವನ ನಡೆಸಲು ಮುಂದಾಗುತ್ತಾನೆ. ಅಷ್ಟರಲ್ಲೇ ನಡೆಯುವ ಒಂದು ಘಟನೆ ಮತ್ತೆ ಆತನನ್ನು ರಾಕ್ಷಸನಂತೆ ಬದಲಾಯಿಸುತ್ತದೆ ಎನ್ನುವುದು ಟ್ರೈಲರ್‌ನಲ್ಲಿ ಗೊತ್ತಾಗುತ್ತಿದೆ.
ಸೂರ್ಯ ಬೇರೆ ಬೇರೆ ವೇಷಗಳಲ್ಲಿ ನಟಿಸಿರೋದು ನೋಡಿ ಕೆಲವರು ದ್ವಿಪಾತ್ರನಾ? ಎಂದು ಕೇಳುತ್ತಿದ್ದಾರೆ. ಅದಕ್ಕೆಲ್ಲಾ ಮೇ 1ಕ್ಕೆ ಉತ್ತರ ಸಿಗಲಿದೆ. ಟ್ರೈಲರ್‌ನಲ್ಲಿರುವ ಸಣ್ಣ ಸಣ್ಣ ಡೈಲಾಗ್ಸ್ ಗಮನ ಸೆಳೆಯುವಂತಿದೆ. ಇನ್ನು ಸೂರ್ಯ, ಪೂಜಾ ಜೊತೆಗೆ ಜಯರಾಂ, ಪ್ರಕಾಶ್ ರಾಜ್, ನಾಸರ್ ಸೇರಿದಂತೆ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸಂತೋಷ್ ನಾರಾಯಣನ್ ಬಿಜಿಎಂ ಸಖತ್ ಮಜವಾಗಿದೆ.
ಸೂರ್ಯ ಲುಕ್ ಸಖತ್ ಇಂಟ್ರೆಸ್ಟಿಂಗ್ ಎನ್ನುವಂತಿದೆ. ಕಥೆ ಅರ್ಥ ಆದಂತೆ ಆಗದಂತೆಯೂ ಅನ್ನಿಸುತ್ತದೆ. ಪೂಜಾ ಡೀ ಗ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಂಡಿರುವುದು ಗೊತ್ತಾಗುತ್ತಿದೆ. ಥಾಯ್ಲೆಂಡ್‌ನಲ್ಲಿ ಮಾರ್ಷಲ್ ಆರ್ಟ್ಸ್ ಕಲಿತು ನಟ ಸೂರ್ಯ ಚಿತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ನೆಟ್‌ಫ್ಲಿಕ್ಸ್ ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ. ಸಿನಿಮಾ ತೆರೆಕಂಡು 40 ದಿನಗಳ ಬಳಿಕ ಓಟಿಟಿಗೆ ಬರುವ ಸಾಧ್ಯತೆಯಿದೆ. ಭಾರೀ ಮೊತ್ತಕ್ಕೆ ರೈಟ್ಸ್ ಮಾರಾಟವಾಗಿದೆ.
'ಕಂಗುವ' ಸಿನಿಮಾ ಸೋಲು ಸೂರ್ಯಗೆ ದೊಡ್ಡಮಟ್ಟಕ್ಕೆ ಪೆಟ್ಟು ಕೊಟ್ಟಿತ್ತು. ಬಳಿಕ ಮಾಧ್ಯಮಗಳ ಮುಂದೆ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಇದೀಗ ಹೊಸ ಚಿತ್ರದ ಮೂಲಕ ಆ ಸೋಲನ್ನು ಮರೆಸಿ ಗೆಲ್ಲುವ ಲೆಕ್ಕಾಚಾರದಲ್ಲಿದ್ದಾರೆ. ಅಭಿಮಾನಿಗಳು ಟ್ರೈಲರ್ ನೋಡಿ ಫಸ್ಟ್ ಡೇ ಸಿನಿಮಾ ನೋಡುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ತಮಿಳು ಜೊತೆಗೆ ಹಿಂದಿ ಹಾಗೂ ತೆಲುಗು ಭಾಷೆಗೆ ಸಿನಿಮಾ ಡಬ್ ಆಗಿ ತೆರೆಗೆ ಬರ್ತಿದೆ. ಕನ್ನಡಕ್ಕೆ ಡಬ್ ಆಗಿಲ್ಲ.


Click it and Unblock the Notifications











