ಒಮ್ಮೆಲೆ ಸ್ಟೆಥಸ್ಕೋಪ್ ಹಿಡಿದ ರಜನಿಕಾಂತ್ ಹಾಗೂ ಸೂರ್ಯ; ಐದು ರೂಪಾಯಿ ಡಾಕ್ಟರ್ ಯಾರು?
ತೆರೆಮೇಲೆ ಕಲಾವಿದರು ಭಿನ್ನ ವಿಭಿನ್ನ ಪಾತ್ರಗಳನ್ನು ಮಾಡ್ತಾರೆ. ಡಾಕ್ಟರ್, ಲಾಯರ್, ಪೊಲೀಸ್, ಬ್ಯುಸಿನೆಸ್‌ಮ್ಯಾನ್, ಆಟೋ ಡ್ರೈವರ್, ವಿಜ್ಞಾನಿ ಹೀಗೆ ತರಹೇವಾರಿ ಪಾತ್ರಗಳಲ್ಲಿ ನಟಿಸಿ ಗೆಲ್ಲುತ್ತಾರೆ. ತಮಿಳು ನಟರಾದ ರಜನಿಕಾಂತ್ ಹಾಗೂ ಸೂರ್ಯ ಕೂಡ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ.
ಇತ್ತೀಚೆಗೆ 'ಕರುಪ್ಪು' ಚಿತ್ರದ ಕಪ್ಪು ಕೋಟ್ ಧರಿಸಿ ಲಾಯರ್ ಪಾತ್ರದಲ್ಲಿ ಸೂರ್ಯ ಕಮಾಲ್ ಮಾಡಿದ್ದರು. ಸಿನಿಮಾ 300 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಮುಂದಿನ ಚಿತ್ರದಲ್ಲಿ ಸೂರ್ಯ ಬಿಳಿ ಕೋಟ್ ಧರಿಸಿ ಸ್ಟೆಥಸ್ಕೋಪ್ ಹಿಡಿಯಲಿದ್ದಾರೆ. ಅಂದರೆ ಡಾಕ್ಟರ್ ಪಾತ್ರದಲ್ಲಿ ನಟಿಸೋಕೆ ಸಿದ್ಧತೆ ನಡೆಸಿದ್ದಾರೆ. ಮತ್ತೊಂದು ಕಡೆ ರಜನಿಕಾಂತ್ ಕೂಡ ತಮ್ಮ ಮುಂದಿನ ಚಿತ್ರದಲ್ಲಿ ಡಾಕ್ಟರ್ ವೇಷದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ.

ತಮಿಳುನಾಡಿನ ಡಾ. ತಿರುವೇಂಗಡಂ ವೀರರಾಘವನ್ ಅವರ ಜೀವನಾಧರಿತ ಚಿತ್ರದಲ್ಲಿ ಸೂರ್ಯ ನಟಿಸುತ್ತಾರೆ ಎನ್ನಲಾಗ್ತಿದೆ. ಅವರು 5 ರೂಪಾಯಿ ಡಾಕ್ಟರ್ ಎಂದೇ ಚೆನ್ನೈನಲ್ಲಿ ಜನಪ್ರಿಯರಾದವರು. ಬಡವರಿಗೆ ಸಹಾಯವಾಗಲಿ ಎಂದು ಕೇವಲ 5 ರೂಪಾಯಿಗೆ ರೋಗಿಗಳನ್ನು ಪರೀಕ್ಷಿಸಿ ಚಿಕಿತ್ಸೆ ಕೊಡುತ್ತಾ ಬಂದವರು. ಅವರ ಜೀವನದ ಕಥೆಯನ್ನೇ ಸಿನಿಮಾ ಮಾಡುವ ಪ್ರಯತ್ ನಡೀತಿದೆ.
ರಜನಿಕಾಂತ್ ಕೂಡ ಮುಂದಿನ ಸಿನಿಮಾದಲ್ಲಿ ಡಾಕ್ಟರ್ ಪಾತ್ರ ಮಾಡ್ತಾರೆ ಎನ್ನುತ್ತಿದ್ದಂತೆ ಎರಡೂ ಒಂದೇ ಕಥೆನಾ? ಸೂರ್ಯ ಬದಲು ತಲೈವಾ 5 ರೂಪಾಯಿ ಡಾಕ್ಟರ್ ಪಾತ್ರ ಮಾಡ್ತಾರಾ ಎನ್ನುವ ಚರ್ಚೆ ಶುರುವಾಗಿತ್ತು. ಆದರೆ ಎರಡೂ ಕೂಡ ಬೇರೆಬೇರೆ ಕಥೆ ಎನ್ನಲಾಗ್ತಿದೆ. ಕಮಲ್ ಹಾಸನ್ ನಿರ್ಮಾಣದ ಚಿತ್ರದಲ್ಲಿ ರಜನಿಕಾಂತ್ ನಟಿಸುತ್ತಿದ್ದಾರೆ. ಇದು ಅವರ 173ನೇ ಸಿನಿಮಾ ಆಗಿದ್ದು ಅಶ್ವಥ್ ಮಾರಿಮುತ್ತು ಆಕ್ಷನ್ ಕಟ್ ಹೇಳಲಿದ್ದಾರೆ.

ಡಾ. ತಿರುವೇಂಗಡಂ ವೀರರಾಘವನ್ ಅವರಿಂದ ಪ್ರೇರಣೆಗೊಂಡು 'ಮೆರ್ಸಲ್' ಚಿತ್ರದಲ್ಲಿ ವಿಜಯ್ ಡಾಕ್ಟರ್ ಆಗಿ ನಟಿಸಿದ್ದರು. ಆದರೆ ಅದು ಸಂಪೂರ್ಣವಾಗಿ ಬಯೋಪಿಕ್ ಸಿನಿಮಾ ಆಗಿರಲಿಲ್ಲ. ಆದರೆ ಸೂರ್ಯ 5 ರೂಪಾಯಿ ಡಾಕ್ಟರ್ ಪಾತ್ರದಲ್ಲೇ ನಟಿಸುತ್ತಾರೆ ಎನ್ನಲಾಗ್ತಿದೆ. ಟಿ. ಜೆ ಜ್ಞಾನವೇಲ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಇವರಿಬ್ಬರು 'ಜೈಭೀಮ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.
ಅಶ್ವಥ್ ಮಾರಿಮುತ್ತು ನಿರ್ದೇಶನದ ಚಿತ್ರದಲ್ಲಿ ರಜನಿಕಾಂತ್ ಕೂಡ ಡಾಕ್ಟರ್ ಆಗಿ ನಟಿಸುತ್ತಿದ್ದಾರೆ. ಆದರೆ ಇದು ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಎನ್ನಲಾಗ್ತಿದೆ. ಈಗಾಗಲೇ ಫೋಟೊಶೂಟ್ ಕೂಡ ಮಾಡಿ ಮುಗಿಸಿದ್ದಾರೆ. ಶೀಘ್ರದಲ್ಲೇ ಫಸ್ಟ್ ಲುಕ್ ರಿವೀಲ್ ಆಗುತ್ತದೆ ಎನ್ನಲಾಗ್ತಿದೆ. 5 ರೂಪಾಯಿ ಡಾಕ್ಟರ್ ಕಥೆಗೂ ರಜನಿಕಾಂತ್ ಹಾಗೂ ಅಶ್ವಥ್ ಕಾಂಬಿನೇಷನ್ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವ ಚರ್ಚೆ ಶುರುವಾಗಿದೆ.
ಕರ್ನಾಟಕದ ಮಂಡ್ಯದಲ್ಲಿ ಡಾ. ಶಂಕರೇಗೌಡ ಎಂಬುವವರು ಕೂಡ ಅತಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ಚಿಕಿತ್ಸೆ ನೀಡುತ್ತಿದ್ದರು. ಕೇವಲ 5 ರೂಪಾಯಿ ಕನ್ಸಲ್ಟೇಶನ್ ಫೀಸ್ ಆಗಿ ಪಡೆಯುತ್ತಿದ್ದರು. ಇವರನ್ನು ಕೂಡ 5 ರೂಪಾಯಿ ಡಾಕ್ಟರ್ ಎಂದೇ ಜನ ಕರೆಯುತ್ತಿದ್ದರು. ಸದ್ಯ ರಜನಿಕಾಂತ್ 'ಜೈಲರ್'-2 ಚಿತ್ರೀಕರಣ ಮುಗಿಸಿದ್ದಾರೆ. ಶೀಘ್ರದಲ್ಲೇ ಅಶ್ವಥ್ ನಿರ್ದೇಶನದ ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ.
ಮತ್ತೊಂದು ಕಡೆ 'ಕರುಪ್ಪು' ಬಳಿಕ 'ವಿಶ್ವನಾಥ್ ಅಂಡ್ ಸನ್ಸ್' ಎಂಬ ಚಿತ್ರದಲ್ಲಿ ಸೂರ್ಯ ನಟಿಸುತ್ತಿದ್ದಾರೆ. ಆಗಸ್ಟ್ 14ಕ್ಕೆ ಈ ಸಿನಿಮಾ ಬಿಡುಗಡೆ ಪ್ರಯತ್ನ ನಡೀತಿದೆ. ಅದೇ ಸಮಯಕ್ಕೆ ತಲೈವಾ ನಟನೆಯ 'ಜೈಲರ್'-2 ಸಿನಿಮಾ ಕೂಡ ತೆರೆಗೆ ಬರುವ ನಿರೀಕ್ಷೆಯಿದೆ. ಮೋಹನ್ ಲಾಲ್, ಶಿವರಾಜ್‌ಕುಮಾರ್ ಮತ್ತೊಮ್ಮೆ ಅತಿಥಿ ಪಾತ್ರಗಳಲ್ಲಿ ನಟಿಸಿ ಚಿತ್ರಕ್ಕೆ ಬಲ ತುಂಬಿದ್ದಾರೆ.


Click it and Unblock the Notifications