ಹಿಂದಿಯಲ್ಲಿ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ; ನಾಯಕ ಯಾರು?
ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಅವರ ಬಯೋಪಿಕ್ ಬಿಡುಗಡೆಯಾಗಿ ಅನೇಕ ತಿಂಗಳುಗಳೇ ಕಳೆದಿದೆ. 'ಸೂರರೈ ಪೊಟ್ರು' ಟೈಟಲ್‌ನಲ್ಲಿ ತಯಾರಾದ ಈ ಸಿನಿಮಾ ಕಳೆದ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ಕ್ಯಾಪ್ಟನ್ ಗೋಪಿನಾಥ್ ಆಗಿ ನಟ ಸೂರ್ಯ ಕಾಣಿಸಿಕೊಂಡಿದ್ದು, ಈ ಸಿನಿಮಾಗೆ ಪ್ರೇಕ್ಷಕರದಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ತಮಿಳು ಜೊತೆಗೆ ಈ ಸಿನಿಮಾ ದಕ್ಷಿಣ ಭಾರತ ಎಲ್ಲಾ ಭಾಷೆಗಳಲ್ಲೂ ಡಬ್ ಆಗಿ ದಕ್ಷಿಣ ಸಿನಿ ಪ್ರೇಕ್ಷಕರ ಮುಂದೆ ಬಂದಿತ್ತು. ಸುಧಾ ಕೊಂಗರಾ ಸಾರಥ್ಯದಲ್ಲಿ ಮೂಡಿಬಂದ ಈ ಸಿನಿಮಾ ಪ್ರತಿಷ್ಠಿತ ಆಸ್ಕರ್ ಅಂಗಳಕ್ಕೂ ಲಗ್ಗೆ ಇಟ್ಟಿತ್ತು. ಆನ್ ಲೈನ್ ನಲ್ಲಿ ದಾಖಲೆ ನಿರ್ಮಿಸಿರುವ 'ಸೂರರೈ ಪೊಟ್ರು' ಇದೀಗ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ.
ದಕ್ಷಿಣ ಭಾರತದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನು ಹಿಂದಿಗೆ ರಿಮೇಕ್ ಮಾಡುವುದು ಹೊಸದೇನಲ್ಲ. ಈಗಾಗಲೇ ಸಾಲು ಸಾಲು ಸಿನಿಮಾಗಳು ಬಾಲಿವುಡ್‌ನಲ್ಲಿ ರಿಮೇಕ್ ಆಗಲು ಸಜ್ಜಾಗುತ್ತಿವೆ. ಅದೆ ಸಾಲಿಗೆ 'ಸೂರರೈ ಪೊಟ್ರು' ಸಿನಿಮಾ ಕೂಡ ಸೇರಿಕೊಂಡಿದೆ. ಹಿಂದಿಗೆ ರಿಮೇಕ್ ಆಗುತ್ತಿರುವ ಬಗ್ಗೆ ಸ್ವತಃ ನಟ ಸೂರ್ಯ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

ನಟ ಸೂರ್ಯ ನಿರ್ಮಾಣ, ಸುಧಾ ನಿರ್ದೇಶನ
ಅಂದಹಾಗೆ ನಟ ಸೂರ್ಯ ಹಿಂದಿಯಲ್ಲೂ ನಟಿಸುತ್ತಿದ್ದಾರೆ ಅಂತ ಅಂದ್ಕೋಬೇಡಿ. ಸೂರ್ಯ ನಟನೆ ಬದಲಿಗೆ ನಿರ್ಮಾಣಕ್ಕೆ ಇಳಿದಿದ್ದಾರೆ. ಅವರ ಪ್ರೊಡಕ್ಷನ್ ಬ್ಯಾನರ್ 2ಡಿ ಎಂಟಟೈನ್ಮೆಂಟ್ ಸಹಯೋಗದಲ್ಲಿ ಹಿಂದಿಯಲ್ಲಿ ರಿಮೇಕ್ ಮಾಡಲು ಮುಂದಾಗಿದ್ದಾರೆ. ವಿಶೇಷ ಎಂದರೆ ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ಸುಧಾ ಕೊಂಗರಾ ಹಿಂದಿ ರಿಮೇಕ್‌ಗೂ ನಿರ್ದೇಶನ ಮಾಡುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಅಪರ್ಣಾ ನಾಯಕಿಯಾಗಿ ಮಿಂಚಿದ್ದರು
ಮೊದಲ ಬಾರಿಗೆ ಸೂರ್ಯ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದು, ಮೊದಲ ಸಿನಿಮಾವೇ ಸೂಪರ್ ಸಕ್ಸಸ್ ಆಗಿತ್ತು. ಚಿತ್ರದಲ್ಲಿ ಸೂರ್ಯಗೆ ನಾಯಕಿಯಾಗಿ ಅಪರ್ಣಾ ಬಾಲಮುರಳಿ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ ಅಪರ್ಣಾ ಪಾತ್ರ ಮಾಡುತ್ತಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ಪರೇಶ್ ರಾವಲ್, ಮೋಹನ್ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಹೃದಯ ಗೆದ್ದಿತ್ತು.

ಕ್ಯಾಪ್ಟನ್ ಗೋಪಿನಾಥ್ ಬಗ್ಗೆ
ಕ್ಯಾಪ್ಟನ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗಿದ್ದವರು. ನಂತರ ಏರ್ ಡೆಕ್ಕನ್ ವಿಮಾನಯಾನ ಸಂಸ್ಥೆಯ ಹುಟ್ಟುಹಾಕುವ ಮೂಲಕ ವಿಶ್ವದ ಗಮನ ಸೆಳೆದರು. ಕಡಿಮೆ ಹಣದಲ್ಲಿ ವಿಮಾನಯಾನ ಪ್ರಾರಂಭಿಸುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗುತ್ತಾರೆ. ಜಿ.ಆರ್ ಗೋಪಿನಾಥ್ ಜೀವನದ ರೋಚಕ ಕಥೆಯನ್ನು ಅದ್ಭುತವಾಗಿ ಸಿನಿಮಾ ಮೂಲಕ ಕಟ್ಟಿಕೊಟ್ಟಿದ್ದರು ನಿರ್ದೇಶಕಿ ಸುಧ ಕೊಂಗರಾ. ಗೋಪಿನಾಥ್ ಪಾತ್ರವನ್ನು ಅಷ್ಟೆ ಸುಂದರವಾಗಿ ನಿಭಾಯಿಸಿದ್ದರು ನಟ ಸೂರ್ಯ.
Recommended Video

ಹಿಂದಿ ರಿಮೇಕ್ ನಲ್ಲಿ ನಾಯಕ ಯಾರು?
ಇದೀಗ ಹಿಂದಿಯಲ್ಲಿ ಸಿನಿಮಾವಾಗುತ್ತಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಅಂದಹಾಗೆ ನಟ ಸೂರ್ಯ ನಿಭಾಯಿಸಿದ್ದ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದು ಇನ್ನು ಬಹಿರಂಗವಾಗಿಲ್ಲ. ಈ ಮೊದಲು ನಟ ಶಾಹಿದ್ ಕಪೂರ್ ಹೆಸರು ಕೇಳಿಬರುತ್ತಿತ್ತು. ಆದರೆ ಈ ಬಗ್ಗೆ ಸೂರ್ಯ ಮತ್ತು ತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ನಾಯಕ ಯಾರು ಎನ್ನುವುದು ಬಹಿರಂಗವಾಗುವ ಸಾಧ್ಯತೆ ಇದೆ.


Click it and Unblock the Notifications











