Kanguva Glimpse: ಕಾಲಿವುಡ್‌ನಲ್ಲಿ 'ಕಂಗುವ' ಸೂರ್ಯ ಕಿಚ್ಚು: ತಮಿಳು ಬಾಹುಬಲಿಯ ಆರ್ಭಟ ನೋಡಿದ್ರಾ?
ತಮಿಳು ನಟ ಸೂರ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳ ಈ ಸಡಗರ ಹೆಚ್ಚಿಸಲು 'ಕಂಗುವ' ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದೆ. ಟಾಲಿವುಡ್‌ಗೆ ಬಾಹುಬಲಿ ರೀತಿ ಕಾಲಿವುಡ್‌ಗೆ 'ಕಂಗುವ' ಎಂದು ಬಿಂಬಿಸಲಾಗುತ್ತಿದೆ. ಸ್ಟುಡಿಯೋ ಗ್ರೀನ್ ಹಾಗೂ ಯುವಿ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ 6 ಭಾಷೆಗಳಲ್ಲಿ 'ಕಂಗುವ'ನ ಶುರುವಾಗುತ್ತಿದೆ.
ಪೀರಿಯಡ್ ಆಕ್ಷನ್ ಎಂಟರ್‌ಟೈನರ್ 'ಕಂಗುವ' ಚಿತ್ರಕ್ಕೆ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ಯೋಗಿ ಬಾಬು, ಕೊವೈ ಸರಳ, ಆನಂದ್‌ರಾಜ್, ಜಗಪತಿ ಬಾಬು, ಕೆ. ಎಸ್ ರವಿಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ವೆಟ್ರಿ ಪಳನಿಸ್ವಾಮಿ ಸಿನಿಮಾಟೋಗ್ರಫಿ, ದೇವಿ ಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಸೂರ್ಯ ಹುಟ್ಟುಹಬ್ಬದ ವಿಶೇಷವಾಗಿ ಮಧ್ಯರಾತ್ರಿ 12 ಗಂಟೆಗೆ 'ಕಂಗುವ' ಫಸ್ಟ್ ಗ್ಲಿಂಪ್ಸ್ ರಿವೀಲ್ ಆಗಿ ಸದ್ದು ಮಾಡ್ತಿದೆ. ಅಭಿಮಾನಿಗಳಂತೂ ಸಣ್ಣ ಝಲಕ್ ನೋಡಿ ಖುಷಿಯಾಗಿದ್ದಾರೆ.

'ಕಂಗುವ' ಚಿತ್ರದಲ್ಲಿ ಸೂರ್ಯ 5 ಬೇರೆ ಬೇರೆ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. 8 ವರ್ಷಗಳ ಹಿಂದೆ ರಾಜಮೌಳಿ ನಿರ್ದೇಶನದ ಕಾಸ್ಟ್ಯೂಮ್ ಡ್ರಾಮಾ ಬಾಹುಬಲಿ ಭಾರತೀಯ ಚಿತ್ರರಂಗದಲ್ಲಿ ಹೊಸ ಅಧ್ಯಾಯ ಬರೆಯಿತು. ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಿತ್ತು. 2 ಭಾಗಗಳಾಗಿ ಬಂದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ನಂತರ ಅಂತದ್ದೇ ಕಾಸ್ಟ್ಯೂಮ್ ಡ್ರಾಮಾ ಸಿನಿಂಆಗಳನ್ನು ಮಾಡುವ ಪ್ರಯತ್ನ ನಡೀತಿದೆ. ಇತ್ತೀಚೆಗೆ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಮೂಲಕ ಮಣಿರತ್ನಂ ಇದೇ ಪ್ರಯತ್ನ ಮಾಡಿದ್ದರು.
ಐತಿಹಾಸಿಕ ಕಥಾಹಂದರ ಆಧರಿಸಿ ಬರೆದ ಕಾದಂಬರಿಯನ್ನು ಮಣಿರತ್ನಂ ತೆರೆಗೆ ತಂದಿದ್ದರು. ಆದರೆ ಶಿವ ಈಗ ಬಾಹುಬಲಿ ರೀತಿಯಲ್ಲೇ ಒಂದು ಕಾಲ್ಪನಿಕ ಕಥೆಯನ್ನು ಕಟ್ಟಿಕೊಡುತ್ತಿದ್ದಾರೆ. ಸದ್ಯ ಟೀಸರ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ. 'ಕಂಗುವ' ಝಲಕ್ ನೋಡಿದವರು ಥ್ರಿಲ್ಲಾಗುತ್ತಿದೆ. ಚಿತ್ರದಲ್ಲಿ ಸೂರ್ಯನ ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೀತಿದೆ. ದಟ್ಟವಾದ ಕಾಡಿನಲ್ಲಿ ಎದುರಾಳಿಗಳೆಲ್ಲ ಯುದ್ಧದಲ್ಲಿ ಸತ್ತಿದ್ದಾರೆ. ಅವರ ಹೆಣಗಳು ನೀರಿನಲ್ಲಿ ತೇಲುತ್ತಿರುತ್ತದೆ. ಒಬ್ಬ ಮಾತ್ರ ದಂಗೆ ಏಳಲು ಪ್ರಯತ್ನಿಸುತ್ತಾನೆ. ಆಗ 'ಕಂಗುವ' ಬೆಂಕಿ ಉಗುಳುವ ಬಾಣವನ್ನು ಅವನ ಎದೆಗೆ ನುಗ್ಗಿಸುತ್ತಾನೆ. ಹಿಡಿಯುವ ಬಾಣಗಳನ್ನು ಬಿಡುತ್ತಾನೆ. ಅಲ್ಲಿಗೆ ವಿರೋಧಿ ಬಣ ಸಂಪೂರ್ಣವಾಗಿ ನಾಶವಾಗುತ್ತದೆ.
ಹಿಂದೆ ಬೆಂಕಿಯ ಬಾಣಗಳು ಹಾರುತ್ತವೆ. ಅಲ್ಲಿವರೆಗೂ ಕೋಣದ ರೀತಿಯ ವಿಭಿನ್ನ ಮಾಸ್ಕ್ ಧರಿಸಿ ಕಾಣಿಸಿಕೊಂಡ 'ಕಂಗುವ' ಮಾಸ್ಕ್ ತೆಗೆದು ಕೊಡಲಿ ಹಿಡಿದು ಘರ್ಜಿಸುತ್ತಾನೆ. ಹುಲಿ ಉಗುರುಗಳ ಸರ, ವಿಚಿತ್ರ ವೇಷ ಭೂಷಣ ನೋಡುತ್ತಿದ್ದರೆ ಚಿತ್ರದಲ್ಲಿ ಸೂರ್ಯ ಬುಡಕಟ್ಟು ಸಮುದಾಯದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಇನ್ನು ಸೂರ್ಯ ರಾಕ್ಷಸನಂತೆ ನಗುತ್ತಾ ಭಯ ಹುಟ್ಟಿಸುವ ಸನ್ನಿವೇಶ ಟೀಸರ್‌ನಲ್ಲಿ ಹೈಲೆಟ್ ಎನಿಸಿಕೊಂಡಿದೆ. ವಿಜ್ಯುವಲ್ಸ್, ಗ್ರಾಫಿಕ್ಸ್, ಬಿಜಿಎಂ, ಡೈಲಾಗ್ಸ್ ಎಲ್ಲವೂ ಗಮನ ಸೆಳೀತಿದೆ. ಬಹುಕೋಟಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ.
ಈಗಾಗಲೇ 'ಕಂಗುವ' ಚಿತ್ರದ ಸಾಕಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಈ ಚಿತ್ರವನ್ನು ಕೂಡ ಬಾಹುಬಲಿ, ಕೆಜಿಎಫ್ ರೀತಿ 2 ಭಾಗಗಳಾಗಿ ತೆರೆಗೆ ತರುವ ಪ್ರಯತ್ನ ನಡೀತಿದೆ ಎನ್ನಲಾಗ್ತಿದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ. ಇನ್ನು ಬರೀ ಫಸ್ಟ್ ಗ್ಲಿಂಪ್ಸ್‌ನಿಂದಲೇ 'ಕಂಗುವ' ಆರ್ಭಟ ಶುರುವಾಗಿದ್ದು ಮುಂದೆ ಟೀಸರ್, ಟ್ರೈಲರ್ ಮೂಲಕ ಮತ್ತಷ್ಟು ಹೈಪ್ ಕ್ರಿಯೇಟ್ ಆಗುವ ಸಾಧ್ಯತೆಯಿದೆ.


Click it and Unblock the Notifications











