38 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗಪ್ಪಳಿಸಲಿದೆ ಸೂರ್ಯ ಮುಂದಿನ ಸಿನಿಮಾ: ಅಧಿಕೃತವಾಗಿ ಘೋಷಿಸಿದ ನಿರ್ಮಾಪಕ
ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಆರ್ಭಟ ಜೋರಾಗಿದೆ. ಒಂದಕ್ಕಿಂದ ಒಂದು ದೊಡ್ಡ ಸಿನಿಮಾ ನಿರ್ಮಾಣ ಮಾಡುವ ಪ್ರಯತ್ನಗಳು ನಡೀತಿದೆ. ತೆಲುಗು, ಕನ್ನಡ, ತಮಿಳಿನಲ್ಲೂ ಇಂತಹ ಕಸರತ್ತು ನಡೆಯುತ್ತಲೇ ಇದೆ. ತಮಿಳಿನಲ್ಲಿ ಈವರೆಗೆ 1000 ಕೋಟಿ ರೂ. ಕಲೆಕ್ಷನ್ ಸಿನಿಮಾ, 'ಬಾಹುಬಲಿ', 'KGF' ರೇಂಜ್ ಸಿನಿಮಾ ಬಂದಿಲ್ಲ ಎನ್ನುವ ಚರ್ಚೆ ನಡೆಯುತ್ತಲೇ ಇದೆ.
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ತಮಿಳಿನ 'ಬಾಹುಬಲಿ' ಎಂದೇ ಕೆಲವರು ಮಾತನಾಡಿಕೊಂಡಿದ್ದರು. ಆದರೆ ನಿರೀಕ್ಷಿಸಿದ ಮಟ್ಟದಲ್ಲಿ ಆ ಸಿನಿಮಾ ಸರಣಿ ಗೆಲ್ಲಲಿಲ್ಲ. ಮೊದಲ ಭಾಗ ಒಂದು ಹಂತಕ್ಕೆ ಗೆದ್ದರೂ 2ನೇ ಭಾಗ ಸೋಲುಂಡಿತ್ತು. ಸದ್ಯ ಸೂರ್ಯ ಹೀರೊ ಆಗಿ 'ಕಂಗುವ' ಎನ್ನುವ ಸಿನಿಮಾ ದೊಡ್ಡಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.

ಶಿವ ನಿರ್ದೇಶನದ ಈ ಪೀರಿಯಡ್ ಆಕ್ಷನ್ ಥ್ರಿಲ್ಲರ್ ಸಿನಿಮಾ ತಯಾರಾಗುತ್ತಿದೆ. ಬಹುಕೋಟಿ ವೆಚ್ಚದಲ್ಲಿ 3D, ಐಮ್ಯಾಕ್ಸ್ ಫಾರ್ಮೆಟ್‌ಗಳಲ್ಲಿ 'ಕಂಗುವ' ಸಿನಿಮಾ ನಿರ್ಮಾಣವಾಗುತ್ತಿದೆ. ಸೂರ್ಯ ಭಿನ್ನ ವಿಭಿನ್ನ ಶೇಡ್‌ಗಳಿರೋ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಖಡಕ್ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಹಾಗೂ ಟೀಸರ್ ರಿಲೀಸ್ ಆಗಿ ಕುತೂಹಲ ಮೂಡಿಸಿದೆ.
'ಕಂಗುವ' ಚಿತ್ರದಲ್ಲಿ ಸೂರ್ಯ 6 ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವುದು ವಿಶೇಷ. ದಿಶಾ ಪಟಾನಿ ನಾಯಕಿಯಾಗಿ ಮಿಂಚಲಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ಜಗಪತಿ ಬಾಬು, ಕೋವೈ ಸರಳಾ, ಆನಂದರಾಜ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಕೆ. ಇ ಜ್ಞಾನವೇಲ್ ರಾಜಾ, ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪಾಟಿ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಬರೋಬ್ಬರಿ 38 ಭಾಷೆಗಳಲ್ಲಿ 'ಕಂಗುವ' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಈ ವಿಚಾರವನ್ನು ಸ್ವತಃ ಚಿತ್ರದ ನಿರ್ಮಾಪಕ ಕೆ. ಇ ಜ್ಞಾನವೇಲ್ ರಾಜಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಭಾಷೆಗಳಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾ ಅಂದ್ರೆ 5 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. 'ಕಂಗುವ' ಚಿತ್ರವನ್ನು ಭಾರತದ ಭಾಷೆಗಳ ಜೊತೆಗೆ ವಿದೇಶದ ಭಾಷೆಗಳಲ್ಲೂ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ.
ಮುಂದಿನ ವರ್ಷ ಏಪ್ರಿಲ್ 11ಕ್ಕೆ 'ಕಂಗುವ' ಸಿನಿಮಾ ರಿಲೀಸ್ ಆಗಲಿದೆ. ಗೋವಾ, ಕೊಡೈಕೆನಲ್, ಕೇರಳ, ರಾಜಮಂಡ್ರಿಯಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. 'ಕಂಗುವ' ಕಾಲ್ಪನಿಕ ಕತೆ ಎನ್ನಲಾಗುತ್ತಿದೆ. ಈ ಚಿತ್ರವನ್ನು ಕೂಡ 2 ಭಾಗಗಳಾಗಿ ಪ್ರೇಕ್ಷಕರ ಮುಂದೆ ತರುವ ಬಗ್ಗೆ ಗುಸುಗುಸು ಕೇಳಿಬರ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ.
ಭಾರೀ ಸೆಟ್‌ಗಳನ್ನು ನಿರ್ಮಿಸಿ 'ಕಂಗುವ' ಚಿತ್ರೀಕರಣ ನಡೆಸಲಾಗುತ್ತಿದೆ. ನಿರ್ಮಾಪಕರು ಮಾತನಾಡಿ "10 'ಬಾಹುಬಲಿ'ಗೆ ಸಮ, ಅಷ್ಟು ದೊಡ್ಡ ಸಿನಿಮಾ ಅಂತೆಲ್ಲಾ ನಾನು ಹೇಳಲ್ಲ. ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ತೆರೆಗೆ ಬರಲಿದೆ. 3D, ಐಮ್ಯಾಕ್ಸ್ ವರ್ಷನ್‌ಗಳಲ್ಲಿ ಪ್ರೇಕ್ಷಕರು ಸಿನಿಮಾ ನೋಡಬಹುದು. ಒಟ್ಟು 38 ಭಾಷೆಗಳಲ್ಲಿ ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಈವರೆಗೆ ತಮಿಳು ಸಿನಿಮಾ ಎಲ್ಲಿಯವರೆಗೆ ತಲುಪುತ್ತಿದೆಯೋ ಅದನ್ನು ಮೀರಿ 'ಕಂಗುವ' ಹೋಗುತ್ತದೆ" ಎಂದು ಹೇಳಿದ್ದಾರೆ.
ಕಮಲ್ ಹಾಸನ್ ನಟನೆಯ 'ವಿಕ್ರಂ' ಚಿತ್ರದಲ್ಲಿ 'ರೊಲೆಕ್ಸ್' ಆಗಿ ಅತಿಥಿ ಪಾತ್ರದಲ್ಲಿ ಸೂರ್ಯ ಅಬ್ಬರಿಸಿದ್ದರು. ಬಳಿಕ 'ರಾಕೆಟ್ರಿ' ಚಿತ್ರದಲ್ಲೂ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಸದ್ಯ 'ಕಂಗುವ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಮುಗಿಯುವವರೆಗೂ ಹೊಸ ಸಿನಿಮಾ ಒಪ್ಪಿಕೊಳ್ಳದಿರಲು ನಿರ್ಧರಿಸಿದ್ದಾರೆ.


Click it and Unblock the Notifications











