ಆಕೆ ಜೊತೆ ಸಿನಿಮಾ ಮಾಡಬಾರದು ಎಂದುಕೊಂಡಿದ್ದೆ, ಆದರೆ ನಿರ್ಧಾರ ಬದಲಾಯ್ತು: ಸೂರ್ಯ
ತಮಿಳು ನಟ ಸೂರ್ಯಾ ಅವರ ಬಹುನಿರೀಕ್ಷಿತ ಸಿನಿಮಾ 'ಸೂರರೈ ಪೊಟ್ರು' ಸಿನಿಮಾ ಅಮೆಜಾನ್ ಪ್ರೈಂ ನಲ್ಲಿ ನವೆಂಬರ್ 12 ರಂದು ಬಿಡುಗಡೆ ಆಗಲಿದೆ.
ಸೂರರೈ ಪೊಟ್ರು ಸಿನಿಮಾವು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧರಿಸಿದ ಸಿನಿಮಾ ಆಗಿದೆ. ಸಿನಿಮಾದ ಟ್ರೇಲರ್ ಸಾಕಷ್ಟು ಸದ್ದು ಮಾಡಿದ್ದು, ಬಹುತಾರಾಗಣದ ಈ ಸಿನಿಮಾ ಬಿಡುಗಡೆಗೆ ಸೂರ್ಯಾ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಸಿನಿಮಾವನ್ನು ನಿರ್ದೇಶಕಿ ಸುಧಾ ಕೊಂಗರಾ ನಿರ್ದೇಶಿಸಿದ್ದು, ಇದು ಅವರ ನಿರ್ದೇಶನದ ಐದನೇ ಸಿನಿಮಾ. ಸೂರ್ಯಾ ಮತ್ತು ಸುಧಾರದ್ದು ಹಳೆಯ ಪರಿಚಯ. ಆದರೆ ಸೂರ್ಯಾ ಸುಧಾ ಜೊತೆಗೆ ಸಿನಿಮಾ ಮಾಡಬಾರದು ಎಂದುಕೊಂಡಿದ್ದರಂತೆ ಆದರೆ ಒಂದು ಸಿನಿಮಾ ಅವರ ನಿರ್ಧಾರವನ್ನು ಬದಲಾಯಿಸಿತಂತೆ.

ಮಣಿರತ್ನಂ ಗೆ ಸಹಾಯಕ ನಿರ್ದೇಶಕಿ ಆಗಿದ್ದರು ಸುಧಾ
'ಸುಧಾ ಮೊದಲಿಗೆ ಮಣಿರತ್ನ ಸಿನಿಮಾಕ್ಕೆ ಸಹಾಯಕ ನಿರ್ದೇಶಕಿ ಆಗಿ ಕೆಲಸ ಮಾಡುತ್ತಿದ್ದರು. ಆಗಿನಿಂದಲೂ ನನಗೆ ಆಕೆ ಗೆಳತಿ. ನಟನಾಗಿ ಮಣಿರತ್ನಂ ಅವರನ್ನು ಒಪ್ಪಿಸುವುದು ಸುಲಭವಾಗಿತ್ತು, ಆದರೆ ಸುಧಾರನ್ನು ಒಪ್ಪಿಸುವುದು ಬಲು ಕಷ್ಟದ ಕೆಲಸವಾಗಿತ್ತು ನಮಗೆ' ಎಂದಿದ್ದಾರೆ ಸೂರ್ಯಾ.

'ಸುಧಾ ಜೊತೆಗೆ ಸಿನಿಮಾ ಮಾಡಬಾರದು ಎಂದಿಕೊಂಡಿದ್ದೆ'
ಸುಧಾ ನಾನು ಒಳ್ಳೆಯ ಗೆಳೆಯರು, ಹಾಗಾಗಿ ಅವರೊಟ್ಟಿಗೆ ಸಿನಿಮಾ ಮಾಡಿ ಆ ಗೆಳೆತನವನ್ನು ಹಾಳು ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಆಕೆಯೊಂದಿಗೆ ಸಿನಿಮಾ ಮಾಡುವುದು ಬೇಡ ಎಂದುಕೊಂಡಿದ್ದೆ ಆದರೆ 'ಇರುದಿ ಸುತ್ರು' ಸಿನಿಮಾ ನನ್ನ ನಿರ್ಧಾರ ಬದಲಿಸಿತು ಎಂದಿದ್ದಾರೆ ಸೂರ್ಯಾ.

ಇರುದಿ ಸುತ್ರು ಸೂಪರ್ ಹಿಟ್ ಆಗಿತ್ತು
ಸುಧಾ ನಿರ್ದೇಶಿಸಿದ್ದ 'ಇರುದಿ ಸುತ್ರು' ಸಿನಿಮಾ ಸೂಪರ್ ಹಿಟ್ ಆಗಿತ್ತು. ಮಾಧವನ್ ಬಾಕ್ಸಿಂಗ್ ಕೋಚ್ ಪಾತ್ರದಲ್ಲಿ ನಟಿಸಿದ್ದ ಈ ಸಿನಿಮಾ, ಹಿಂದಿಯಲ್ಲಿ ಸಾಲಾ ಖಡೂಸ್ ಆಗಿ ಬಿಡುಗಡೆ ಆಗಿ ಅಲ್ಲಿಯೂ ಹಿಟ್ ಆಯಿತು. ತೆಲುಗಿಗೆ ಈ ಸಿನಿಮಾ ರೀಮೇಕ್ ಸಹ ಆಯಿತು.

ಬಹುತಾರಾಗಣದ ಅದ್ಧೂರಿ ಸಿನಿಮಾ
'ಸೂರರೈ ಪೊಟ್ರು' ಸಿನಿಮಾವು ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಜೀವನ ಆಧರಿಸಿದ್ದಾಗಿದೆ. ಏರ್ ಡೆಕ್ಕನ್ ಸ್ಥಾಪಿಸಿದ ಸಾಹಸಗಾತೆಯನ್ನು ಈ ಸಿನಿಮಾ ಹೊಂದಿರಲಿದೆ. ಅಪರ್ಣಾ ಬಾಲಮುರಳಿ, ಪರೇಶ್ ರಾವಲ್, ಮೋಹನ್ ಬಾಬು, ಜಾಕಿ ಶ್ರಾಫ್, ಊರ್ವಶಿ, ಕನ್ನಡಿಗ ಅಚ್ಯುತ್ ಕುಮಾರ್ ಸಿನಿಮಾದಲ್ಲಿ ನಟಿಸಿದ್ದಾರೆ.


Click it and Unblock the Notifications











