Kanguva Trailer: ಕಾಲಿವುಡ್ ಬಾಹುಬಲಿ 'ಕಂಗುವ' ಟ್ರೈಲರ್ ನೋಡಿದ್ರಾ?; ವಿಷ್ಯುವಲ್ ಟ್ರೀಟ್
ಪ್ಯಾನ್ ಇಂಡಿಯಾ ಜಮಾನದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಸಿನಿಮಾಗಳು 1000 ಕೋಟಿ ರೂ. ಗಳಿಕೆ ಕಾಣುತ್ತಿವೆ. ಈ ವಿಚಾರದಲ್ಲಿ ತಮಿಳು ಚಿತ್ರರಂಗ ಹಿಂದೆ ಉಳಿದಿದೆ. ಯಾವುದೇ ಸಿನಿಮಾ ಈ ಮೈಲಿಗಲ್ಲಿನ ಸಮೀಪಕ್ಕೂ ಹೋಗುತ್ತಿಲ್ಲ. ಹಾಗಂತ ಪ್ರಯತ್ನ ಮಾತ್ರ ನಿಂತಿಲ್ಲ. 'ಪೊನ್ನಿಯಿನ್ ಸೆಲ್ವನ್' ಸರಣಿ ಚಿತ್ರಗಳಿಂದ ಮಣಿರತ್ನಂ ಈ ಪ್ರಯತ್ನ ಮಾಡಿದ್ರು ಸಾಧ್ಯವಾಗಲಿಲ್ಲ.
ಸೂರ್ಯ ನಟನೆಯ 'ಕಂಗುವ' ಚಿತ್ರವನ್ನು ಕಾಲಿವುಡ್ ಬಾಹುಬಲಿ ಎಂದೇ ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ಚಿತ್ರವನ್ನು ನಿರ್ಮಿಸಿ, ಪ್ರಮೋಷನ್ ಮಾಡಿ ಬಿಡುಗಡೆಗೆ ಪ್ರಯತ್ನಿಸಲಾಗುತ್ತಿದೆ. ಒಂದು ಕಾಲ್ಪನಿಕ ಕಥೆಯನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಇದೊಂದು ಕಾಸ್ಟ್ಯೂಮ್ ಡ್ರಾಮಾ ಕೂಡ ಹೌದು. ದ್ವೀಪವೊಂದರಲ್ಲಿ ವಾಸಿಸುವ ವಿವಿಧ ಬುಡಕಟ್ಟುಗಳ ಜನಶ, ಅವರ ಆಚಾರ ವಿಚಾರ, ಆಚರಣೆಗಳು, ಗುಂಪು ಗುಂಪುಗಳ ನಡುವಿನ ಸಂಘರ್ಷದ ಕಥೆ ಚಿತ್ರದಲ್ಲಿದೆ.

ಇನ್ನು ಬಾಲಿವುಡ್ ನಟ ಬಾಬಿ ಡಿಯೋಲ್ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದಾರೆ. ಟೈಟಲ್ ರೋಲ್‌ನಲ್ಲಿ ಸೂರ್ಯ ದರ್ಬಾರ್ ಮಾಡಲು ಬರ್ತಿದ್ದಾರೆ. ಸದ್ಯ 'ಕಂಗುವ' ಚಿತ್ರದ ಟ್ರೈಲರ್ ಬಿಡುಗಡೆಯಾಗಿ ನೋಡುಗರ ಹುಬ್ಬೇರಿಸಿದೆ. ಅದ್ಧೂರಿ ಮೇಕಿಂಗ್, ಸೂರ್ಯ ಲುಕ್, ಪರ್ಫಾರ್ಮನ್ಸ್‌ನಿಂದ ಸಿನಿಮಾ ಕುತೂಹಲ ಮೂಡಿಸಿದೆ. ಬಹುಕೋಟಿ ವೆಚ್ಚದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ತರಲಾಗುತ್ತಿದೆ.
ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಕಂಗುವ' ಸಿನಿಮಾ ತೆರೆಗೆ ಬರಲಿದೆ. ಶಿವ ಈ ಫ್ಯಾಂಟಸಿ ಆಕ್ಷನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜ್ಞಾನವೇಲ್ ರಾಜ, ವಂಶಿಕೃಷ್ಣ ರೆಡ್ಡಿ ಹಾಗೂ ಪ್ರಮೋದ್ ಉಪ್ಪಲಪಾಟಿ ಚಿತ್ರಕ್ಕೆ ಹಣ ಹೂಡಿದ್ದಾರೆ. ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ವೆಟ್ರಿ ಪಳನಿಸ್ವಾಮಿ ಛಾಯಾಗ್ರಹಣ, ದೇವಿಶ್ರೀ ಪ್ರಸಾದ್ ಸಂಗೀತ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಚಿತ್ರದ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದೆ.

ನಟರಂಜನ್, ಯೋಗಿ ಬಾಬು, ಆನಂದ್‌ರಾಜ್, ದೀಪಾ ವೆಂಕಟ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆದರೆ ಟ್ರೈಲರ್‌ನಲ್ಲಿ ಸೂರ್ಯ ಹಾಗೂ ಬಾಬಿ ಡಿಯೋಲ್ ಆರ್ಭಟವೇ ಜೋರಾಗಿದೆ. ತ್ರೀಡಿ ಹಾಗೂ ಐಮ್ಯಾಕ್ಸ್ ವರ್ಷನ್‌ಗಳಲ್ಲಿ 'ಕಂಗುವ' ಸಿನಿಮಾ ತೆರೆಗೆ ಬರಲಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. 300 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ.
ದೇಶ ವಿದೇಶದ 38 ಭಾಷೆಗಳಲ್ಲಿ 'ಕಂಗುವ' ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಟ್ರೈಲರ್ ನೋಡಿದರೆ ವಿಷ್ಯುವಲಿ ಸಿನಿಮಾ ತೆರೆಮೇಲೆ ಅದ್ಭುತ ಅನುಭವ ನೀಡುವ ಸಾಧ್ಯತೆಯಿದೆ. ದಟ್ಟ ಕಾನನದಲ್ಲಿ ಚಿತ್ರ ವಿಚಿತ್ರ ಗೆಟಪ್‌ಗಳಲ್ಲಿ, ವಿಭಿನ್ನ ಆಯುಧಗಳನ್ನು ಹಿಡಿದು ಕಲಾವಿದರು ಕಾಣಿಸಿಕೊಂಡಿದ್ದಾರೆ. ಒಂದಷ್ಟು ಎಮೋಷನಲ್ ಸನ್ನಿವೇಶಗಳನ್ನು ಟ್ರೈಲರ್‌ನಲ್ಲಿ ನೋಡಬಹುದು. ಸೂರ್ಯ ಗೆಟಪ್, ಹುರಿಗಟ್ಟಿದ ದೇಹ, ಮೈ ತುಂಬಾ ಟ್ಯಾಟೂಗಳು ಎಲ್ಲವೂ ಗಮನ ಸೆಳೆಯುವಂತಿದೆ.
ಚೆನ್ನೈ, ಗೋವಾ, ಕೇರಳ, ರಾಜಮಂಡ್ರಿ, ಕೊಡೆಕೊನಾಲ್‌ನಲ್ಲಿ 'ಕಂಗುವ' ಸಿನಿಮಾ ಚಿತ್ರೀಕರಣ ನಡೆದಿದೆ. ವಿದೇಶಿಗರಿಂದ ಅಕ್ಕಪಕ್ಕದ ಗಿರಿ ಜನರ ಗುಂಪುಗಳಿಂದ ಕಂಗುವ ತನ್ನವರನ್ನು ಹೇಗೆ ರಕ್ಷಿಸಿಕೊಳ್ಳುತ್ತಾನೆ. ನಾಯಕನಾಗಿ ಹೇಗೆ ಹೋರಾಡುತ್ತಾನೆ ಎನ್ನುವುದನ್ನು ನೋಡಲು ಪ್ರೇಕ್ಷಕರು ಕಾಯುವಂತಾಗಿದೆ. ಸೂರ್ಯ ಅಭಿಮಾನಿಗಳಂತೂ ಟ್ರೈಲರ್ ನೋಡಿ ಥ್ರಿಲ್ಲಾಗಿದ್ದಾರೆ. ಪ್ರತಿ ಫ್ರೇಮ್ ಗೂಸ್‌ಬಂಪ್ಸ್ ಎನ್ನುತ್ತಿದ್ದಾರೆ. ಚಿತ್ರ 1000 ಕೋಟಿ ರೂ. ಕ್ಲಬ್ ಸೇರುವುದು ಪಕ್ಕಾ ಎಂದು ಕಾಲರ್ ಎಗರಿಸುತ್ತಿದ್ದಾರೆ.


Click it and Unblock the Notifications











