ವೋಟ್ ಹಾಕೋಕೆ 3 ಸಾವಿರ, 5 ಸಾವಿರ ಕೊಟ್ಟು ದೇವರ ಮೇಲೆ ಆಣೆ ಮಾಡಿಸ್ತಾರೆ; ಹಣ ತಗೊಂಡು ಏನು ಮಾಡ್ಬೇಕು ಗೊತ್ತಾ?
ತಮಿಳು ನಟ ವಿಜಯ್ ರಾಜಕೀಯರಂಗ ಪ್ರವೇಶಿಸಿರುವುದು ಗೊತ್ತೇಯಿದೆ. ತಮಿಳಗ ವೆಟ್ರಿ ಕಳಗಂ ಎಂಬ ಪ್ರಾದೇಶಿಕ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಈ ಹಿಂದೆ ಕರೂರಿನಲ್ಲಿ ರ್ಯಾಲಿ ವೇಳೆ ಕಾಲ್ತುಳಿತ ಸಂಭವಿಸಿ 41 ಜನ ಮೃತಪಟ್ಟಿದ್ದರು. ಇಂದು(ಫೆಬ್ರವರಿ 13) ಸೇಲಂನಲ್ಲಿ ವಿಜಯ್ ಸಮಾವೇಶ ಆಯೋಜಿಸಿದ್ದರು.
ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಬಿಡುಗಡೆ ತಡವಾಗುತ್ತಿದೆ. ಇದಕ್ಕೂ ರಾಜಕೀಯ ಕಾರಣ ಎನ್ನಲಾಗ್ತಿದೆ. ಇನ್ನು ಸೇಲಂನಲ್ಲಿ ನಡೆದ ಸಮಾವೇಶದಲ್ಲಿ ವಿಜಯ್ ಎಂದಿನಂತೆ ಆಡಳಿತ ಪಕ್ಷವನ್ನು ಟಾರ್ಗೆಟ್ ಮಾಡಿ ಭಾಷಣ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸಮಾವೇಶದಲ್ಲಿ ಭಾಗಿ ಆಗಿದ್ದರು. ದಳಪತಿಗೆ ಜೈಹಾರ ಹಾಕಿದರು. ಇನ್ನು ಸಮಾವೇಶದ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟಿರುವುದಾಗಿ ವರದಿಯಾಗಿದೆ. ಸಮಾವೇಶದಲ್ಲಿ ವಿಜಯ್ ಆಡಿರುವ ಮಾತುಗಳು ವೈರಲ್ ಆಗ್ತಿದೆ.

ಚುನಾವಣೆ ಮತದಾನದ ಸಮಯದಲ್ಲಿ ವೋಟ್ ಹಾಕುಲು ಹಣ ಹಂಚುತ್ತಾರೆ. ಅದು ನಿಮ್ಮದೇ ಹಣ ಬೇಡ ಎನ್ನಬೇಡಿ. ಆದರೆ ಹಣ ತಗೊಂಡು ಏನು ಮಾಡಬೇಕು ಎಂದು ವಿಜಯ್ ಹೇಳಿದ್ದಾರೆ. "ವೋಟ್ ಹಾಕಲು 2 ಸಾವಿರ, 3 ಸಾವಿರ, 5 ಸಾವಿರ ಕೊಡ್ತಾರೆ. ದೇವರ ಮೇಲೆ ಆಣೆ ಮಾಡಿಸಿಕೊಂಡು ವೋಟ್ ಹಾಕಬೇಕು ಎನ್ನುತ್ತಾರೆ. ಸಂತೋಷದಿಂದ ಹಣ ತಗೊಳ್ಳಿ. ಅದು ನಿಮ್ಮದೇ ಹಣ. ಆದರೆ ತಗೊಂಡು ಅವರ ಕಿವಿಯಲ್ಲಿ ಸೀಟಿ ಊದಿ ಅವರನ್ನು ವಾಪಸ್ ಕಳಿಸಿ" ಎಂದಿದ್ದಾರೆ.
ಟಿವಿಕೆ ಪಕ್ಷದ ಚುನಾವಣೆ ಗುರುತು ಸೀಟಿ. ಹಾಗಾಗಿ ವಿಜಯ್ ಈ ರೀತಿ ಹೇಳಿದ್ದಾರೆ. ತಮಿಳುನಾಡಿಗೆ ಒಂದೊಳ್ಳೆ, ಸರ್ಕಾರ ಕೊಡೊಕೆ ಸಾಧ್ಯ. ನಾನು ಮಾಡಿ ತೋರಿಸ್ತೀನಿ. ಸ್ಟಾಲಿನ್ ಸರ್ ಬೇಕೆಂದೇ ನಮ್ಮನ್ನು ಟಾರ್ಗೆಟ್ ಮಾಡ್ತಿದ್ದಾರೆ. ಬೇರೆಯವರು ಸಮಾವೇಶ, ರ್ಯಾಲಿ ನಡೆಸಲು ಅನುಮತಿ ಕೊಡ್ತಾರೆ, ಭದ್ರತೆ ಕೊಡ್ತಾರೆ, ನಮಗೆ ಯಾಕೆ ಕೊಡಲ್ಲ ಎಂದು ವಿಜಯ್ ಪ್ರಶ್ನಿಸಿದ್ದಾರೆ. ನಮಗೆ ಅನುಭವ ಇಲ್ಲ ಎಂದು ಮೂದಲಿಸುತ್ತಾರೆ. ಒಳ್ಳೆ ಆಡಳಿತ ಕೊಡಲು ಅನುಭವ ಯಾಕೆ ಬೇಕು? ನಿಮ್ಮಂತೆ ಮೋಸದಿಂದ ಹಣ ದೋಚಲು ಅನುಭವ ಬೇಕು ಎಂದು ವ್ಯಂಗ್ಯವಾಡಿದ್ದಾರೆ.
ನೀನು ಅಧಿಕಾರಕ್ಕೆ ಬಂದ್ರೆ ಏನು ಮಾಡ್ತೀಯಪ್ಪಾ ಎಂದು ಕೇಳಬಹುದು. ಹೇಳ್ತಿನಿ, ಜನ ಬೇಡಿಕೆಗಳನ್ನು ಪೂರೈಸುವುದೇ ನಮ್ಮ ಮೊದಲ ಕೆಲಸ, ಅದಕ್ಕಾಗಿ ಏನು ಮಾಡಬೇಕು ಎನ್ನುವ ಬಗ್ಗೆ ಗಮನ ಹರಿಸುತ್ತೇವೆ. ಪ್ರಣಾಳಿಕೆ ಸಿದ್ಧವಾಗ್ತಿದೆ. ಆದಷ್ಟು ಬೇಗ ಬಹಿರಂಗಪಡಿಸ್ತೀವಿ. ನನ್ನನ್ನು ನಂಬಿರುವ ನಿಮ್ಮನ್ನು ನಿರಾಸೆ ಪಡಿಸುವುದಿಲ್ಲ. ಅಧಿಕಾರಕ್ಕೆ ಬರಬೇಕು ಎನ್ನುವ ಕಾರಣಕ್ಕೆ ಸಾಧ್ಯವಾಗದ ಭರವಸೆಗಳನ್ನು ಕೊಡಲ್ಲ. ಅದೇರೀತಿ ಯಾರ ಮೇಲೆ ಕೂಡ ಆರೋಪ ಮಾಡುತ್ತಾ ಕೂರಲ್ಲ, ನಿಮಗಾಗಿ ಯಾವುದೇ ಹಂತಕ್ಕೆ ಹೋಗಿ ಹೋರಾಡಲು ನಾನು ಸಿದ್ಧ ಎಂದು ಟಿವಿಕೆ ಪಕ್ಷ ಅಧ್ಯಕ್ಷ ವಿಜಯ್ ಹೇಳಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಡಿಎಂಕೆ ಹಾಗೂ ಟಿವಿಕೆ ನಡುವೆ ಮಾತ್ರ ಪೈಪೋಟಿ. ಈ ಬಾರಿ ಚುನಾವಣೆ ಜನರನ್ನು ಪ್ರೀತಿಸುವ ವಿಜಯ್ ಬೇಕಾ? ಜನ ವಿರೋಧಿ ಸರ್ಕಾರದ ಸ್ಟಾಲಿನ್ ಸರ್ ಬೇಕಾ? ಎನ್ನುವುದು ಮಾತ್ರ ಚರ್ಚೆ. ಇನ್ನುಳಿದ ಪಕ್ಷಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಕೊನೆಯದಾಗಿ ಒಂದು ಪ್ರಶ್ನೆ. ವಿಜಯ್‌ನ ನಂಬ್ತೀರಾ? ಸ್ಟಾಲಿನ್ ಸರ್‌ನ ನಂಬ್ತೀರಾ? ಎಂದು ಕೇಳಿದ್ದಾರೆ. ವಿಜಯ್ ವಿಜಯ್ ಎಂದು ಜನ ಕಿರುಚಿದ್ದಾರೆ. ಅಲ್ಲಿಗೆ ಮುಗೀತು. ಖತಂ ಖತಂ ಎಂದು ವಿಜಯ್ ಅಬ್ಬರಿಸಿದ್ದಾರೆ.


Click it and Unblock the Notifications











