Tamannaah: "ಅದು ನಾನು ಕೆಟ್ಟದಾಗಿ ನಟಿಸಿದ ಸಿನಿಮಾ.. ಚಿತ್ರೀಕರಣ ವೇಳೆಯೇ ಗೆಲ್ಲಲ್ಲ ಅಂತ ಗೊತ್ತಿತ್ತು"
ಸಾಮಾನ್ಯವಾಗಿ ನಟ- ನಟಿಯರು ತಮ್ಮ ಸಿನಿಮಾಗಳ ಗೆಲುವಿನ ಬಗ್ಗೆ ಮಾತನಾಡುತ್ತಾರೆ. ಆದರೆ ಸಿನಿಮಾ ಸೋಲಿನ ಬಗ್ಗೆ ತುಟಿಬಿಚ್ಚಲು ಹಿಂದುಮುಂದು ನೋಡುತ್ತಾರೆ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ತಾವು ನಟಿಸಿದ ಸಿನಿಮಾಗಳೆಲ್ಲಾ ನಮಗೆ ಇಷ್ಟ ಅಂತಲೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ಮಾತ್ರ ಬಹಳ ದಿನಗಳ ನಂತರ ತಾವು ನಟಿಸಿದ ಕೆಟ್ಟ ಸಿನಿಮಾಗಳ ಪಟ್ಟಿ ಬಿಚ್ಚಿಡುತ್ತಾರೆ.
ಬಹುಭಾಷಾ ನಟಿ ತಮನ್ನಾ ಬಾಟಿಯಾ ನಟನೆಯ 'ಜೈಲರ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದಲ್ಲಿ ರಜನಿಕಾಂತ್ ಜೋಡಿಯಾಗಿ ಮಿಲ್ಕಿ ಬ್ಯೂಟಿ ಮಿಂಚಿದ್ದಾರೆ. ಸದ್ಯ ಚಿತ್ರದ 'ಕಾವಾಲ' ಸಾಂಗ್ ಸೂಪರ್ ಹಿಟ್ ಆಗಿದೆ. ಬಿಂದಾಸ್ ನಂಬರ್‌ಗೆ ತಮನ್ನಾ ಸ್ಟೆಪ್ಸ್ ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ 'ಜೈಲರ್' ಆಡಿಯೋ ಲಾಂಚ್ ಕೂಡ ನಡೀತು. ಆಗಸ್ಟ್ 10ಕ್ಕೆ ಸಿನಿಮಾ ತೆರೆಗಪ್ಪಳಿಸುತ್ತಿದೆ. ಇದೀಗ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಮಿಲ್ಕಿಬ್ಯೂಟಿ ತಮನ್ನಾ ಗಲಾಟ ತಮಿಳಿ ಯೂಟ್ಯೂಬ್ ಸಂದರ್ಶನದಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ನೀವು ನಟಿಸಿದ ಸಿನಿಮಾಗಳಲ್ಲಿ ಬಹಳ ಕೆಟ್ಟ ಸಿನಿಮಾ ಎನಿಸಿದ್ದು, ನೀವು ನೋಡೊಕೆ ಇಷ್ಟಪಡಲ್ಲ ಎನ್ನುವಂತ ಸಿನಿಮಾ ಯಾವುದು? ಎನ್ನುವ ಪ್ರಶ್ನೆಗೆ 'ಸುರ' ಸಿನಿಮಾ ಹೆಸರು ಹೇಳಿದ್ದಾರೆ. ಇಂತಹ ಸಾಕಷ್ಟು ಸಿನಿಮಾಗಳು ಇವೆ. ಅದರಲ್ಲಿ ಅದು ಒಂದು ಎಂದಿದ್ದಾರೆ. ಶೂಟಿಂಗ್ ವೇಳೆಯೇ ಅದು ಸರಿಯಲ್ಲ ಎನಿಸಿತು. ಆದರೂ ನಟಿಸುವಂತಾಯಿತು ಎಂದಿದ್ದಾರೆ.
"ನಾನು 'ಸುರ' ರೀತಿ ಸಿನಿಮಾ ಮತ್ತೆ ಮಾಡಲಾರೆ. ಆ ಸಿನಿಮಾದಲ್ಲಿ ನಾನು ಬಹಳ ಕೆಟ್ಟದಾಗಿ ಕಾಣಿಸಿಕೊಂಡಿದ್ದೇನೆ. ನನಗೆ ಚಿತ್ರೀಕರಣದ ವೇಳೆಯೇ ಅದು ಗೊತ್ತಾಗಿತ್ತು. ಇದು ವರ್ಕ್ ಆಗಲ್ಲ ಅನ್ನೋದು ಅರ್ಥವಾಗಿ ಹೋಗಿತ್ತು. ಈ ರೀತಿ ಸಾಕಷ್ಟು ಸಿನಿಮಾಗಳ ಚಿತ್ರೀಕರಣದ ವೇಳೆ ಅನಿಸಿದೆ. ಕೆಲವೊಮ್ಮೆ ಶೂಟಿಂಗ್ ವೈಬ್ ನೋಡಿದಾಗಲೇ ಗೊತ್ತಾಗಿಬಿಡುತ್ತದೆ. ಆದರೆ ಏನು ಮಾಡುವುದು. ನಾವು ಒಪ್ಪಿಕೊಂಡಿರುತ್ತೇವೆ. ನಟಿಸಲೇಬೇಕಾಗುತ್ತದೆ" ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಹೇಳಿಕೆ ಇದೀಗ ದಳಪತಿ ವಿಜಯ್ ಅಭಿಮಾನಿಗಳಿಗೆ ಬೇಸರ ತಂದಿದೆ. ಈ ಹಿಂದೆ ತಮನ್ನಾ 'ಸುರ' ಸಿನಿಮಾದಲ್ಲಿ ನಟಿಸಿದ ಮೇಲೆ ನನಗೆ ತಮಿಳಿನಲ್ಲಿ ಹೆಚ್ಚು ಅವಕಾಶ ಸಿಕ್ಕಿತ್ತು ಎಂದಿದ್ದರು. ಈಗ ನೋಡಿದರೆ ಅದು ಕೆಟ್ಟ ಸಿನಿಮಾ ಎನ್ನುತ್ತಿದ್ದಾರೆ ಅಂತೆಲ್ಲಾ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಆಗತಾನೇ 'ಪಯ್ಯಾ' ಚಿತ್ರದಿಂದ ಪ್ರೇಕ್ಷಕರ ಮನಗೆದ್ದಿದ್ದ ತಮನ್ನಾ 'ಸುರ' ಸಿನಿಮಾದಿಂದ ಹಿನ್ನಡೆ ಅನುಭವಿಸುವಂತಾಯಿತು. ಎಸ್. ಪಿ ರಾಜ್‌ಕುಮಾರ್ ನಿರ್ದೇಶನದ ಈ ಚಿತ್ರದ ಕೆಲ ದೃಶ್ಯಗಳು ಬಹಳ ಪೇಲವವಾಗಿತ್ತು.
ನಟ ಅಜಿತ್ ಬಗ್ಗೆ ಕೂಡ ತಮನ್ನಾ ಮಾತನಾಡಿದ್ದರು. 'ವೀರಂ' ಚಿತ್ರದಲ್ಲಿ ಅಜಿತ್ ಜೊತೆ ಮಿಲ್ಕಿಬ್ಯೂಟಿ ಮಿಂಚಿದ್ದರು. ಇಡೀ ಚಿತ್ರ ಅಜಿತ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ನಿರ್ದೇಶಕರ ಬಳಿ ಅಜಿತ್ ಅವರ ಕೂದಲಿಗೆ ಬಣ್ಣ ಹಾಕುವಂತೆ ಹೇಳಿ ಬೇರೆ ಲುಕ್ ತೋರಿಸಲು ಪ್ರಯತ್ನಿಸಬಹುದಿತ್ತೇ? ಎನ್ನುವ ಪ್ರಶ್ನೆಗೆ "ಈಗ ಬೇಕಿದ್ದರೆ ಹೇಳಬಹುದು. ಆಗ ಅದು ಸಾಧ್ಯವಿರಲಿಲ್ಲ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಅವಕಾಶ ಸಿಗುವುದು ಕಷ್ಟ. ಅವಕಾಶ ಸಿಕ್ಕಾಗ ಈ ರೀತಿ ಏನೇನೋ ಹೇಳೋಕೆ ಆಗುವುದಿಲ್ಲ" ಎಂದಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ತಮನ್ನಾ ನಟಿಸುತ್ತಿದ್ದಾರೆ. ವಿಶೇಷ ಅಂದ್ರೆ ಒಂದು ದಿನದ ಅಂತರದಲ್ಲಿ ಆಕೆಯ 2 ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತಿದೆ. 'ಜೈಲರ್' ಆಗಸ್ಟ್ 10ಕ್ಕೆ ತೆರೆಕಂಡರೆ ಮರುದಿನ ತೆಲುಗಿನ 'ಭೋಳಾ ಶಂಕರ್' ಸಿನಿಮಾ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ಜೋಡಿಯಾಗಿ ಮುಂಬೈ ಚೆಲುವೆ ಮಿಂಚಿದ್ದಾರೆ. 'ಅರನ್ಮಣೈ-4', 'ಬಾಂದ್ರಾ', 'ವೀದಾ' ಹೀಗೆ ಇನ್ನು 3 ಸಿನಿಮಾ ಆಕೆಯ ಕೈಯಲ್ಲಿವೆ. ಇತ್ತೀಚೆಗೆ ವೆಬ್ ಸೀರಿಸ್‌ಗಳಲ್ಲಿ ಕೂಡ ತಮನ್ನಾ ಬಣ್ಣ ಹಚ್ಚುತ್ತಿದ್ದಾರೆ.


Click it and Unblock the Notifications











