ಅಪರೂಪದ ರೇಸ್ ಕಾರ್ ಖರೀದಿಸಿದ ನಟ ಅಜಿತ್; ಬೆಲೆ ಎಷ್ಟು ಕೋಟಿ ರೂ. ಗೊತ್ತಾ?
ತಮಿಳು ನಟ ಅಜಿತ್ ಬೈಕ್ ಹಾಗೂ ಕಾರ್ ಕ್ರೇಜ್ ಗೊತ್ತೇಯಿದೆ. ಕಾರ್ ರೇಸ್ ತಂಡವನ್ನು ಹೊಂದಿರುವ ಅಜಿತ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಇನ್ನು ಕೋಟಿ ಕೋಟಿ ಸಂಭಾವನೆ ಪಡೆಯುವ ನಟ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ಆ ಪಟ್ಟಿಗೆ ರೇಸ್ ಕಾರ್ ಸೇರಿಕೊಂಡಿದೆ.
ಮೆಕ್ಲೆರೆನ್ ಸೆನ್ನಾ (McLaren Senna) ರೇಸ್ ಕಾರ್ ಅನ್ನು ನಟ ಅಜಿತ್ ಖರೀದಿಸಿದ್ದಾರೆ. ಅದರ ಮುಂದೆ ನಿಂತು ಪೋಸ್ ಕೊಟ್ಟಿದ್ದಾರೆ. ಅಜಿತ್ ಹೊಸ ಕಾರಿನ ಬಗ್ಗೆ ಅವರ ಮ್ಯಾನೇಜರ್ ಸುರೇಶ್ ಚಂದ್ರ ಮಾಹಿತಿ ನೀಡಿದ್ದಾರೆ. ಸದ್ಯ ಅಜಿತ್ ದುಬಾರಿ ಕಾರ್ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೊ ವೈರಲ್ ಆಗುತ್ತಿದೆ. ಕೆಲವೇ ತಿಂಗಳ ಹಿಂದೆ ಕೆಂಪು ಬಣ್ಣದ ಫೆರಾರಿ SF90 ಕಾರ್ ಅನ್ನು 9 ಕೋಟಿ ರೂ. ಕೊಟ್ಟು ಅಜಿತ್ ಖರೀದಿಸಿದ್ದರು. ಬಳಿಕ ಪೋರ್ಷೆ ಕಂಪನಿಯ GT3 RS ಮಾಡೆಲ್ ಕಾರನ್ನು ಮನೆಗೆ ಕೊಂಡೊಯ್ದಿದ್ದರು. ಇದೀಗ ಮೆಕ್ಲೆರೆನ್ ಸೆನ್ನಾ ಸರದಿ.

ಈ ಐಷಾರಾಮಿ ಹೈಪರ್‌ಕಾರ್ ಅನ್ನು ಸೀಮಿತ ಆವೃತ್ತಿಯ ಮಾದರಿಯಾಗಿ ತಯಾರಿಸಲಾಗುತ್ತದೆ. ಬಹಳ ದುಬಾರಿ ಆಗಿರುವ ಈ ಕಾರ್ ಭಾರತದಲ್ಲಿ ಖರೀದಿಸಲು ಸಿಗುವುದಿಲ್ಲ. ಇನ್ನು ಅಜಿತ್ ಬಳಿ ಇರುವ 2ನೇ ಅತಿ ದುಬಾರಿ ಕಾರ್ ಮೆಕ್ಲೆರೆನ್ ಸೆನ್ನಾ ಎನಿಸಿಕೊಂಡಿದೆ. 9 ಕೋಟಿ ರೂ. ಬೆಲೆಯ ಫೆರಾರಿ SF90 ಈವರೆಗೆ ಅವರ ಬಳಿ ಇರುವ ಅತಿ ದುಬಾರಿ ಕಾರ್ ಆಗಿದೆ.
ಕೆಲವೇ ದಿನಗಳ ಹಿಂದೆ ಅಜಿತ್ ಒಡೆತನದ ಕಾರ್ ರೇಸ್ ತಂಡ ದುಬೈ ರೇಸ್‌ನಲ್ಲಿ ಗೆದ್ದಿತ್ತು. 3ನೇ ಸ್ಥಾನ ಪಡೆದರೂ ಸಾಧನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಮೊದಲಿನಿಂದಲೂ ಅಜಿತ್ ಕಾರ್ ಹಾಗೂ ಬೈಕ್‌ಗಳ ಬಗ್ಗೆ ಬಹಳ ಕ್ರೇಜ್ ಬೆಳೆಸಿಕೊಂಡಿದ್ದಾರೆ. ಬೈಕ್ ಏರಿ ವಿಶ್ವಪರ್ಯಟನೆ ಮಾಡುವ ಕನಸು ಇದೆ. ಈಗಾಗಲೇ ಒಮ್ಮೆ ಬೈಕ್ ಏರಿ ಭಾರತದ ವಿವಿಧ ರಾಜ್ಯಗಳ ಮೂಲಕ ಟಿಬೆಟ್, ನೇಪಾಳ, ಭೂತಾನ್ ದೇಶಗಳಲ್ಲಿ ಸುತ್ತಾಡಿ ಬಂದಿದ್ದರು. ಎರಡನೇ ಬಾರಿ ಬೈಕ್ ಏರಿ ಮತ್ತಷ್ಟು ದೇಶಗಳನ್ನು ಸುತ್ತಾಡುವ ಲೆಕ್ಕಾಚಾರದಲ್ಲಿದ್ದಾರೆ. ಅದರ ನಡುವೆ ಕಾರ್ ರೇಸ್ ಹುಚ್ಚು ಹೆಚ್ಚಾಗಿದೆ.
ಸಿನಿಮಾಗಳಲ್ಲಿ ಕೂಡ ಯಾವುದೇ ಡ್ಯೂಪ್ ಇಲ್ಲದೇ ಅಜಿತ್ ಕಾರ್, ಬೈಕ್ ಸ್ಟಂಟ್ಸ್ ಮಾಡುತ್ತಿರುತ್ತಾರೆ. ಈ ಹಾದಿಯಲ್ಲಿ ಗಾಯಗೊಂಡಿರುವುದು ಇದೆ. ಆದರೂ ತಮ್ಮ ಪ್ರಯತ್ನ ಬಿಡುವುದಿಲ್ಲ. ಇನ್ನು ಇದೇ ವರ್ಷ ಅಜಿತ್ ನಟಿಸಿದ 2 ಸಿನಿಮಾ ಬಿಡುಗಡೆಯಾಗಿದೆ. 'ವಿಡಾಮುಯರ್ಚಿ' ಸಿನಿಮಾ ಸೋತರೂ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಅದರ ಬೆನ್ನಲ್ಲೇ ಹೊರ ರೇಸ್ ಕಾರ್ ಖರೀದಿಸಿದ್ದಾರೆ.
ತಮಿಳುನಾಡಿನಲ್ಲಿ ರಜನಿಕಾಂತ್ ಹಾಗೂ ದಳಪತಿ ವಿಜಯ್ ಬಿಟ್ಟರೆ ಅತಿಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟ ಅಜಿತ್. 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ವಿಜಯ್ ಜೊತೆ ಸದಾ ಅಜಿತ್ ಸಿನಿಮಾಗಳು ಪೈಪೋಟಿ ನಡೆಸುತ್ತವೆ. ಇಬ್ಬರ ಅಭಿಮಾನಿಗಳ ನಡುವೆಯೂ ಶೀತಲ ಸಮರ ನಡೆಯುತ್ತಿರುತ್ತದೆ.
ಅಜಿತ್ ಕಾರ್, ಬೈಕ್ ಕ್ರೇಜ್ ಬಗ್ಗೆ ಅಭಿಮಾನಿಗಳಿಗೆ ಕೊಂಚ ಬೇಸರವೂ ಇದೆ. ರೇಸ್ ಹೆಸರಿನಲ್ಲಿ ಅಜಿತ್ ಸುಖಾಸುಮ್ಮನೆ ಸಮಯ ವ್ಯರ್ಥ ಮಾಡುತ್ತಾರೆ. ಹೆಚ್ಚು ಸಿನಿಮಾಗಳಲ್ಲಿ ನಟಿಸಲ್ಲ ಎಂದು ಕಾಮೆಂಟ್ ಮಾಡುತ್ತಿರುತ್ತಾರೆ.ಸಿನಿಮಾಗಳ ಜೊತೆ ಜೊತೆಗೆ ರೇಸ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಇಂಗಿತ ಅವರು ವ್ಯಕ್ತಪಡಿಸಿದ್ದಾರೆ. ಅಜಿತ್ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎನ್ನುವ ಊಹಾಪೋಹ ಸಹ ಶುರುವಾಗಿತ್ತು. ಅದಕ್ಕೆ ಇತ್ತೀಚೆಗೆ ತೆರೆ ಎಳೆದಿದ್ದರು.
ನವೆಂಬರ್‌ನಲ್ಲಿ ಹೊಸ ಸಿನಿಮಾ ಶುರು ಮಾಡುವುದಾಗಿ ಅಜಿತ್ ಹೇಳಿದ್ದಾರೆ. ಮುಂದಿನ ವರ್ಷ ಏಪ್ರಿಲ್ ವೇಳೆಗೆ ಸಿನಿಮಾ ತೆರೆಗೆ ಬರುತ್ತದೆ ಎಂದಿದ್ದರು. ಆದರೆ ಸದ್ಯಕ್ಕೆ ಯಾವುದೇ ಸಿನಿಮಾ ಅಜಿತ್ ಒಪ್ಪಿಕೊಂಡಿಲ್ಲ. ಸಾಕಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಲಿದೆ. ಇತ್ತೀಚೆಗೆ ಅಜಿತ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡುತ್ತಿರಲಿಲ್ಲ. ಆದರೆ 'ಗುಡ್ ಬ್ಯಾಡ್ ಅಗ್ಲಿ' ಸಕ್ಸಸ್ ಅಭಿಮಾನಿಗಳಿಗೂ ಒಳ್ಳೆ ಜೋಶ್ ತಂದುಕೊಟ್ಟಿದೆ.


Click it and Unblock the Notifications











