ಬ್ರೇಕಪ್ ನೋವು ತೋಡಿಕೊಂಡ ನಟ ಅರ್ಜುನ್ ದಾಸ್; ಕಳವಳ ವ್ಯಕ್ತಪಡಿಸಿದ ಫ್ಯಾನ್ಸ್
ಚಿತ್ರರಂಗದಲ್ಲಿ ಈಗ ಬ್ರೇಕಪ್ ವಿಚಾರಗಳು ಭಾರೀ ಸದ್ದು ಮಾಡ್ತಿದೆ. ಒಂದ್ಕಡೆ ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ನಟಿ ಹನ್ಸಿಕಾ ಹಾಗೂ ಸೊಹೈಲ್ ದಂಪತಿ ಡಿವೋರ್ಸ್ ಪಡೆದು ದೂರಾಗಿದ್ದು ಗೊತ್ತೇಯಿದೆ. ಇದೀಗ ನಟ ಅರ್ಜುನ್ ದಾಸ್ ಬ್ರೇಕಪ್ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಟೋರಿ ಹಾಕಿದ್ದಾರೆ.
ನೆಗೆಟಿವ್ ಪಾತ್ರಗಳ ಮೂಲಕ ತಮಿಳು ಚಿತ್ರರಂಗದಲ್ಲಿ ಅರ್ಜುನ್ ದಾಸ್ ಹೆಚ್ಚು ಸುದ್ದಿ ಮಾಡಿದವರು. 'ಕೈದಿ', 'ಮಾಸ್ಟರ್', 'ವಿಕ್ರಂ', 'ಬುಟ್ಟ ಬೊಮ್ಮ', 'ಗುಡ್ ಬ್ಯಾಡ್ ಅಗ್ಲಿ' ರೀತಿಯ ಸಿನಿಮಾಗಳಲ್ಲಿ ಅರ್ಜುನ್ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಚಾಕಲೇಟ್ ವಿಲನ್ ಆಗಿ ಅಬ್ಬರಿಸುತ್ತಾ ಬರ್ತಿದ್ದಾರೆ.

ದಿಢೀರನೆ ಅರ್ಜುನ್ ದಾಸ್ "ನೀವು ಯಾರನ್ನಾದರೂ ತುಂಬಾ ಪ್ರೀತಿಸಿದಾಗ ಮತ್ತು ಅವರು ನಿಮ್ಮ ಹೃದಯವನ್ನು ಮುರಿದಾಗ, ಒಬ್ಬರು ಹೇಗೆ ಮುಂದುವರಿಯಲು ಸಾಧ್ಯ?" ಎಂದು ಹೃದಯ ಹೊಡೆದ ಎಮೋಜಿ ಹಾಕಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಅರೇ ಏನಾಯ್ತು ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆರಂಭಿಸಿದ್ದಾರೆ.
'ಪೆರುಮಾನ್' ಎಂಬ ಸಿನಿಮಾ ಮೂಲಕ ಅರ್ಜುನ್ ದಾಸ್ ಚಿತ್ರರಂಗ ಪ್ರವೇಶಿಸಿದ್ದರು. ಸ್ಟೈಲಿಶ್ ಆಗಿ ತೆರೆಮೇಲೆ ಕಾಣಿಸಿಕೊಂಡು ಕಮಾಲ್ ಮಾಡಿದ್ದರು. ವಿಲನ್ ಆಗಿ ಮಾತ್ರವಲ್ಲದೇ ಹೀರೊ ಆಗಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು. ನಟಿ ಐಶ್ವರ್ಯಾ ಲಕ್ಷ್ಮಿ ಹಾಗೂ ಅರ್ಜುನ್ ದಾಸ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಊಹಾಪೋಹ ಈ ಹಿಂದೆ ಕೇಳಿಬಂದಿತ್ತು. ಬಳಿಕ ಇಬ್ಬರೂ ವದಂತಿಗಳಿಗೆ ತೆರೆ ಎಳೆದಿದ್ದರು. ಇಬ್ಬರೂ ಕೈಕೈ ಹಿಡಿದು ಹಿಂದೆ ತಿರುಗಿ ನಿಂತ ಫೋಟೊವನ್ನು ಹಂಚಿಕೊಂಡಿದ್ದರು.
ಬಳಿಕ ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಇಬ್ಬರೂ ಸ್ಪಷ್ಟನೆ ನೀಡಿದ್ದರು. ಅರ್ಜುನ್ ಬ್ರೇಕಪ್ ಪೋಸ್ಟ್ ಕೂಡ ಇದೇ ರೀತಿಯ ಅನುಮಾನ ಮೂಡಿಸಿದೆ. ಯಾವುದಾದರೂ ಸಿನಿಮಾ ಪ್ರಚಾರಕ್ಕಾಗಿ ಎಲ್ಲರ ಗಮನ ಸೆಳೆಯಲು 'ಕೈದಿ' ಚಿತ್ರನಟ ಹೀಗೆ ಪೋಸ್ಟ್ ಮಾಡಿರಬಹುದು ಎಂದು ಕೆಲವರು ಊಹಿಸುತ್ತಿದ್ದಾರೆ. ಈ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ.
'ಅನೀತಿ', 'ಪೋರ್' ಮತ್ತು 'ರಸವಾತಿ' ಎಂಬ ಸಿನಿಮಾಗಳಲ್ಲಿ ಅರ್ಜುನ್ ದಾಸ್ ಹೀರೊ ಆಗಿ ನಟಿಸಿದ್ದರು. ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಮಿಂಚಿದ್ದಾರೆ. ಒಂದು ಮ್ಯೂಸಿಕ್ ಆಲ್ಬಮ್‌ನಲ್ಲಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೇ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೂಡ ಗುರ್ತಿಸಿಕೊಂಡಿದ್ದಾರೆ. ಅರ್ಜುನ್ ದಾಸ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕಾನ್ ಸಿಟಿ' ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಹರೀಶ್ ದೊರೈರಾಜ್ ನಿರ್ದೇಶನದ ಚಿತ್ರದಲ್ಲಿ ಯೋಗಿ ಬಾಬು, ಅನ್ನಾ ಬೆನ್ ಹಾಗೂ ಹಿರಿಯ ನಟಿ ವಡಿವುಕ್ಕುರಾಸಿ ಕಾಣಿಸಿಕೊಂಡಿದ್ದಾರೆ. ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.
ತಮಿಳು ಜೊತೆಗೆ ತೆಲುಗಿಗೂ ಡಬ್ ಆಗಿ 'ಕಾನ್ ಸಿಟಿ' ಸಿನಿಮಾ ಬಿಡುಗಡೆ ಆಗಲಿದೆ. ಕಳೆದ ವರ್ಷ ತೆರೆಗೆ ಬಂದಿದ್ದ ತೆಲುಗಿನ 'OG' ಚಿತ್ರದಲ್ಲಿ ಪವನ್ ಕಲ್ಯಾಣ್ ಎದುರು ಅರ್ಜುನ್ ದಾಸ್ ಅಬ್ಬರಿಸಿದ್ದರು. ಅರ್ಜುನ್ ದಾಸ್ ಹಾಗೂ ಐಶ್ವರ್ಯ ಲಕ್ಷ್ಮಿ ಜೋಡಿ 'ಲವ್' ಎಂಬ ವೆಬ್ ಸೀರಿಸ್‌ನಲ್ಲಿ ಒಟ್ಟಿಗೆ ನಟಿಸಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಇದು ಸ್ಟ್ರೀಮಿಂಗ್ ಆಗಲಿದೆ. ಇದರ ಪ್ರಚಾರಕ್ಕಾಗಿ ಹೀಗೆ ಅರ್ಜುನ್ ಗೂಡಾರ್ಥದ ಬ್ರೇಕಪ್ ಪೋಸ್ಟ್ ಮಾಡಿದ್ರಾ? ಎನ್ನುವ ಊಹಾಪೋಹ ಶುರುವಾಗಿದೆ.
ತಾರೆಯರು ಹೀಗೆ ಮಾರ್ಮಿಕವಾಗಿ ಪೋಸ್ಟ್ ಮಾಡಿ ಜನರ ಗಮನ ಸೆಳೆದು ಬಳಿಕ ತಮ್ಮ ಸಿನಿಮಾ ಪ್ರಚಾರ ಮಾಡುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇದೇ ರೀತಿ ಅರ್ಜುನ್ ದಾಸ್ ಮಾಡುತ್ತಿದ್ದಾರಾ ಎನ್ನುವ ಬಗ್ಗೆ ಸ್ಪಷ್ಟನೆ ಸಿಗಬೇಕಿದೆ.


Click it and Unblock the Notifications











