'ತಂಗಳಾನ್' ರಿಹರ್ಸಲ್ ವೇಳೆ ವಿಕ್ರಮ್ ಪಕ್ಕೆಲುಬು ಮುರಿತ: ಸಿನಿಮಾ ಚಿತ್ರೀಕರಣಕ್ಕೆ ಬಿತ್ತು ಬ್ರೇಕ್
ಮಿಳು ನಟ ವಿಕ್ರಮ್‌ಗೆ 'ತಂಗಲಾನ್' ಸಿನಿಮಾ ರಿಹರ್ಸಲ್ ವೇಳೆ ಪೆಟ್ಟಾಗಿದ್ದು ಪಕ್ಕೆಲುಬು ಮುರಿದಿರುವುದಾಗಿ ವರದಿಯಾಗಿದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. 'KGF' ಚಿನ್ನದ ಗಣಿಯ ಹಿನ್ನೆಲೆಯಲ್ಲಿ ಈ ಕಥೆಯನ್ನು ನಿರ್ದೇಶಕ ಪಾ ರಂಜಿತ್ ಕೊಟ್ಟಿಕೊಡುತ್ತಿದ್ದಾರೆ. ಮತ್ತೊಂದು ಕಡೆ ವಿಕ್ರಮ್ ನಟನೆಯ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ.
'ತಂಗಲಾನ್' ಸಿನಿಮಾ ಚಿತ್ರೀಕರಣದ ಭರದಿಂದ ಸಾಗುತ್ತಿದೆ. ಚಿತ್ರಕ್ಕಾಗಿ ವಿಕ್ರಮ್ ಡೆಡಿಕೇಷನ್ ನೋಡಿದವರು ದಂಗಾಗಿದ್ದಾರೆ. ಚಿತ್ರವನ್ನು ಚೆನ್ನಾಗಿ ಮಾಡಿದರೆ ಖಂಡಿತ ಇದಕ್ಕೆ ಆಸ್ಕರ್ ಬರುತ್ತೆ ಎಂದು ಈ ಹಿಂದೆ ನಟ ವಿಕ್ರಮ್ ಹೇಳಿದ್ದರು. ಬರೀ ತುಂಡು ಕಚ್ಚೆಯಲ್ಲಿ ವಿಕ್ರಮ್ ಇಡೀ ಸಿನಿಮಾ ಕಾಣಿಸಿಕೊಂಡಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಪ್ರಚಾರ ಮುಗಿಸಿ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಿದ್ದರು. ರಿಹರ್ಸಲ್ ವೇಳೆ ಬಿದ್ದು ವಿಕ್ರಮ್ ಪಕ್ಕೆಲುಬಿಗೆ ಪೆಟ್ಟಾಗಿದೆ. ಕೂಡಲೇ ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗ್ತಿದೆ. ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಹೇಳಿರುವುದಾಗಿ ವರದಿ ಆಗಿದೆ.

ವಿಕ್ರಮ್‌ಗೆ ಅಪಘಾತ ಸಂಭವಿಸಿದ್ದರಿಂದ ಶೂಟಿಂಗ್ ನಿಲ್ಲಿಸಲಾಗಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕೆ ಮತ್ತೆ ಶೂಟಿಂಗ್ ಶುರುವಾಗುತ್ತದೆ. ಹಿಂದೆ ಕೂಡ ಇದೇ ಸಿನಿಮಾ ಸೆಟ್fನಲ್ಲಿ ವಿಕ್ರಮ್‌ಗೆ ಪೆಟ್ಟಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂತಿತ್ತು. ಇದರಿಂದ ವಿಕ್ರಮ್ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ವಿಕ್ರಮ್ ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಪ್ರಸ್ತುತ ವಿಕ್ರಮ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ.

ಇತ್ತೀಚೆಗೆ ವಿಕ್ರಮ್ ಹುಟ್ಟಿದ ದಿನ 'ತಂಗಲಾನ್' ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಮೇಕಿಂಗ್ ವಿಡಿಯೋದಲ್ಲಿ ವಿಕ್ರಮ್ ಹೇಗೆ ಚೇಂಜ್ ಓವರ್ ಆಗಿದ್ದರು, ಆ ಲುಕ್‌ಗಾಗಿ ಏನೆಲ್ಲಾ ಕಸರತ್ತು ಮಾಡಿದ್ದರು. ತನ್ನ ಪಾತ್ರಕ್ಕಾಗಿ ಹೇಗೆ ಸಿದ್ದರಾಗಿದ್ದರು ಎನ್ನುವುದನ್ನು ತೋರಿಸಲಾಗಿತ್ತು. KGF ಗಣಿ ಸೇರಿದಂತೆ ಕಾಡು, ಬೆಟ್ಟ ಗುಡ್ಡಗಳ ನಡುವೆ ಸಿನಿಮಾ ಚಿತ್ರೀಕರಣ ನಡೆಸಲಾಗುತ್ತಿದೆ. ಆಕ್ಷನ್ ದೃಶ್ಯಗಳ ಚಿತ್ರೀಕರಣದ ಝಲಕ್ ಕೂಡ ತೋರಿಸಲಾಗಿತ್ತು. ಈ ವಿಡಿಯೋದಲ್ಲಿ ವಿಕ್ರಮ್ ಲುಕ್ ನೋಡಿದವರು ಅಚ್ಚರಿ ವ್ಯಕ್ತಪಡಿಸಿದ್ದರು.
ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ 'ತಂಗಲಾನ್' ಸಿನಿಮಾ ಮೂಡಿ ಬರ್ತಿದೆ. ಪ್ರಶಾಂತ್ ನೀಲ್ KGF ಹಿನ್ನೆಲೆಯಲ್ಲಿ ಒಂದು ಕಾಲ್ಪನಿಕ ಕಥೆ ಕಟ್ಟಿಕೊಟ್ಟಿದ್ದರು. ಆದರೆ ಪಾ. ರಂಜಿತ್ ಅಲ್ಲಿ ನಡೆದ ನಿಜವಾದ ಘಟನೆಗಳನ್ನು ಆಧರಿಸಿ, ಆ ಬಗ್ಗೆ ಸಂಶೋಧನೆ ನಡೆಸಿ ಸಿನಿಮಾ ಮಾಡುತ್ತಿರುವುದಾಗಿ ಹೇಳಿದ್ದಾರೆ. ನೂರು ವರ್ಷಗಳ ಹಿಂದೆ ಅಲ್ಲಿನ ಗಣಿ ಕಾರ್ಮಿಕರ ಪರಿಸ್ಥಿತಿ ಹೇಗಿತ್ತು ಎನ್ನುವುದರ ಹಿನ್ನೆಲೆಯಲ್ಲಿ ಕಥೆ ಸಾಗಲಿದೆ.
ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್'- 2 ಚಿತ್ರದಲ್ಲಿ ಆದಿತ್ಯಾ ಕರಿಕಾಲನ್ ಪಾತ್ರದಲ್ಲಿ ವಿಕ್ರಮ್ ಮೋಡಿ ಮಾಡಿದ್ದಾರೆ. ಏಪ್ರಿಲ್ 28ಕ್ಕೆ ಬಿಡುಗಡೆಯಾದ ಸಿನಿಮಾ 4 ದಿನಕ್ಕೆ 200 ಕೋಟಿ ರೂ. ಕಲೆಕ್ಷನ್ ಮಾಡಿ ಧೂಳೆಬ್ಬಿಸಿತ್ತು. 6 ದಿನವೂ ತಮಿಳುನಾಡಿನಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಚಿತ್ರದಲ್ಲಿ ವಿಕ್ರಮ್ ಹಾಗೂ ಐಶ್ವರ್ಯ ರೈ ನಡುಬವಿನ ಸನ್ನಿವೇಶಗಳು ಹೈಲೆಟ್ ಆಗಿದೆ. ಇಬ್ಬರ ನಟನೆಗೂ ಸಂಪೂರ್ಣ ಅಂಕ ಸಿಕ್ಕಿದೆ.
ಈ ಹಿಂದೆ ಕೂಡ ಸಾಕಷ್ಟು ಬಾರಿ ವಿಕ್ರಮ್ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಸಾಕಷ್ಟು ಸರ್ಜರಿಗಳ ನಂತರ ಕೂಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪಾತ್ರಕ್ಕಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಕ್ಕೂ ಅವರು ಹಿಂದೆ ಮುಂದೆ ನೋಡುವುದಿಲ್ಲ. 'ಅನ್ನಿಯನ್', 'ಐ' ಸಿನಿಮಾಗಳಲ್ಲಿ ಪಾತ್ರಕ್ಕಾಗಿ ಅವರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆ ಅನ್ನುವುದನ್ನು ಸಿನಿರಸಿಕರು ನೋಡಿದ್ದಾರೆ. ಸಿನಿಮಾಗಾಗಿ ವಿಕ್ರಮ್ ತೂಕ ಹೆಚ್ಚಿಸಿಕೊಳ್ಳುವುದು, ತೂಕ ಇಳಿಸಿಕೊಳ್ಳುವುದು ಸರ್ವೇ ಸಾಧಾರಣ ಅನ್ನುವಂತಾಗಿದೆ.


Click it and Unblock the Notifications











