'ಕೆಜಿಎಫ್' ಸುಂದರಿ ಜೊತೆ ಕೋಲ್ಕತಾಗೆ ಹೊರಡಲು ಸಜ್ಜಾದ ನಟ ಚಿಯಾನ್ ವಿಕ್ರಮ್
ತಮಿಳು ನಟ ಚಿಯಾನ್ ವಿಕ್ರಮ್ ಸದ್ಯ ಕೋಬ್ರಾ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೋಬ್ರಾ ವಿಕ್ರಮ್ ನಟನೆಯ 58ನೇ ಸಿನಿಮಾ ಇದಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭಿಸಿದ್ದಾರೆ.
ಇದೀಗ ಚಿತ್ರತಂಡ ಮುಂದಿನ ಹಂತದ ಚಿತ್ರೀಕರಣವನ್ನು ಪ್ರಾರಂಭಿಸಲು ಸಜ್ಜಾಗಿದ್ದು, ಕೋಲ್ಕತಾ ಕಡೆ ಹೊರಡಲು ಸಿದ್ಧರಾಗಿದ್ದಾರೆ. ಹೌದು, ಕೋಬ್ರಾ ಸಿನಿಮಾದ ಮುಂದಿನ ಹಂತದ ಚಿತ್ರೀಕರಣ ಕೋಲ್ಕತಾದಲ್ಲಿ ಮಾಡಲು ನಿರ್ಧರಿಸಿದ್ದಾರೆ. ಹಾಗಾಗಿ ಸಿನಿಮಾತಂಡ ಕೋಲ್ಕತಾಗೆ ಹೊರಡಲು ರೆಡಿಯಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಅಂದಹಾಗೆ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಗೆ ನಾಯಕಿಯಾಗಿ ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಶ್ರೀನಿಧಿ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೆಜಿಎಫ್ ಸಿನಿಮಾ ಬಿಟ್ಟರೆ ಶ್ರೀನಿಧಿ ಯಾವುದೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಆದರೆ ಕೋಬ್ರಾ ಸಿನಿಮಾ ಮೂಲಕ ತಮಿಳು ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಈಗಾಗಲೇ ಸಿನಿಮಾದಿಂದ ಮದುವೆ ಸಾಂಗ್ ರಿಲೀಸ್ ಆಗಿದ್ದು ಅಭಿಮಾನಿಗಳ ಹೃದಯ ಗೆದ್ದಿದೆ. ಚಿತ್ರದಲ್ಲಿ ಚಿಯಾನ್ ವಿಕ್ರಮ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಫಸ್ಟ್ ಲುಕ್ ನಲ್ಲಿ ವಿಕ್ರಮ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಭಾರತದ ಖ್ಯಾತ ಕ್ರಿಕೆಟಿಗ ಇರ್ಫಾನ್ ಪಠಾಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ಇರ್ಫಾನ್ ಪಠಾಣ್ ಬಣ್ಣ ಹಚ್ಚಿದ ಸಿನಿಮಾ ಇದಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
ಸದ್ಯ ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ಮುಂದಿನ ವರ್ಷ ಬೆಸಿಗೆ ಸಮಯದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಸಿನಿಮಾ ತಮಿಳು ಮಾತ್ರವಲ್ಲದೆ ತೆಲುಗು ಮತ್ತು ಹಿಂದಿಯಲ್ಲೂ ರಿಲೀಸ್ ಆಗುತ್ತಿದೆ.


Click it and Unblock the Notifications











