ಸೂಪರ್ ಸ್ಟಾರ್ ರಜನಿಕಾಂತ್ ಬಯೋಪಿಕ್ ನಲ್ಲಿ ತಮಿಳು ಸ್ಟಾರ್ ನಟ
ಭಾರತೀಯ ಸಿನಿಮಾರಂಗದ ಖ್ಯಾತ ನಟ, ಕೋಟ್ಯಂತರ ಅಭಿಮಾನಿಗಳ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಯೋಪಿಕ್ ವಿಚಾರ ಆಗಾಗ ಸದ್ದು ಮಾಡಲೇ ಇರುತ್ತೆ. ಇದೀಗ ಮತ್ತೆ ರಜನಿಕಾಂತ್ ಬಯೋಪಿಕ್ ವಿಚಾರ ಸುದ್ದಿಯಲ್ಲಿದ್ದು, ಸೂಪರ್ ಸ್ಟಾರ್ ಜೀವನಚರಿತ್ರೆಯನ್ನು ತೆರೆಮೇಲೆ ತರುವ ಸಾಹಸಕ್ಕೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಒಂದು ವೇಳೆ ಸೂಪರ್ ಸ್ಟಾರ್ ಬಯೋಪಿಕ್ ಮಾಡಿದ್ರೆ, ರಜನಿಕಾಂತ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿಗಳ ಪ್ರಕಾರ ತೈಲವ ಬಯೋಪಿಕ್ ನಲ್ಲಿ ಅವರ ಅಳಿಯ ಧನುಷ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ತೆರೆಮೇಲೆ ರಜನಿಕಾಂತ್ ಆಗಲಿರುವ ಧನುಷ್ ಗೆ ಯಾರು ನಿರ್ದೇಶಕ ಮಾಡಲಿದ್ದಾರೆ ಎನ್ನುವುದು ಈಗ ಕುತೂಹಲ ಮೂಡಿಸಿದೆ. ಆದರೆ ಈ ಬಗ್ಗೆ ರಜನಿಕಾಂತ್ ಆಗಲಿ ಅಥವಾ ಧನುಷ್ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಶೀಘ್ರದಲ್ಲೇ ಮಾಹಿತಿ ಬಹಿರಂಗವಾಗಲಿದೆ ಎಂದು ಹೇಳಲಾಗುತ್ತಿದೆ.

ಧನುಷ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಜಗಮೆ ತಂಧಿರಾಮ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಧನುಷ್ ಗೆ ನಾಯಕಿಯಾಗಿ ಐಶ್ವರ್ಯ ಲಕ್ಷ್ಮೀ ನಟಿಸುತ್ತಿದ್ದಾರೆ. ಈ ಸಿನಿಮಾ ಜೊತೆಗ 'ಕರ್ಣನ್' ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತಮಿಳು ಸಿನಿಮಾದ ಜೊತೆಗೆ ಧನುಷ್ ಅತ್ರಂಗಿ ರೇ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳು ಮುಗಿದ ಬಳಿಕ ಧನುಷ್ ರಜನಿಕಾಂತ್ ಬಯೋಪಿಕ್ ನಲ್ಲಿ ನಟಿಸುವ ಸಾಧ್ಯತೆ ಇದೆ.
ಮತ್ತೊಂದೆಡೆ ರಜನಿಕಾಂತ್ ಅಣ್ಣಾತೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ನಯನತಾರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೀರ್ತಿ ಸುರೇಶ್ ಸಹ ನಟಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸಿನಿಮಾದ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. ಸದ್ಯದಲ್ಲೇ ಚಿತ್ರದ ಚಿತ್ರೀಕರಣ ಹೈದರಾಬಾದ್ ನಲ್ಲಿ ಪ್ರಾರಂಭಿಸಲು ಸಿನಿಮಾತಂಡ ನಿರ್ಧರಿಸಿದೆ.


Click it and Unblock the Notifications











