ಹುಟ್ಟುಹಬ್ಬದ ಹೊಸ್ತಿಲಲ್ಲಿ ಡಿವೋರ್ಸ್ ಘೋಷಿಸಿದ ತಮಿಳು ನಟ ಜಯಂ ರವಿ
ಚಿತ್ರರಂಗದಲ್ಲಿ ಡಿವೋರ್ಸ್ ಸುದ್ದಿ ಸರ್ವೇ ಸಾಧಾರಣ ಎನ್ನುವಂತಾಗಿಬಿಟ್ಟಿದೆ. ಬಾಲಿವುಡ್ ಮಾತ್ರವಲ್ಲ ಟಾಲಿವುಡ್, ಕಾಲಿವುಡ್, ಮಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ತಾರಾ ಜೋಡಿಗಳು ದೂರಾಗುತ್ತಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ತಮಿಳು ನಟ ಜಯಂ ರವಿ ಹಾಗೂ ಪತ್ನಿ ಆರತಿ ದೂರಾಗುವ ಬಗ್ಗೆ ಇತ್ತೀಚೆಗೆ ಗುಸುಗುಸು ಶುರುವಾಗಿತ್ತು. ಇದೀಗ ನಟ ಜಯಂ ರವಿ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನಾಳೆ(ಸೆಪ್ಟೆಂಬರ್ 10) ನಟನ ಹುಟ್ಟುಹಬ್ಬ. ಇಂತಹ ಹೊತ್ತಲ್ಲೇ ಅಭಿಮಾನಿಗಳಿಗೆ ಬೇಸರದ ಸುದ್ದಿ ಸಿಕ್ಕಂತಾಗಿದೆ.

ತೆಲುಗಿನ 'ಜಯಂ' ಸಿನಿಮಾ ರೀಮೆಕ್‌ನಲ್ಲಿ ಮೋಹನ್ ರವಿ ಹೀರೊ ಆಗಿ ನಟಿಸಿದ್ದರು. ಆ ಸಿನಿಮಾ ಹಿಟ್ ಆಗಿತ್ತು. ಬಳಿಕ ಜಯಂರವಿ ಎಂದೇ ಅವರು ತಮಿಳು ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದರು. 2009ರಲ್ಲಿ ಜಯಂರವಿ, ಆರತಿ ಎಂಬುವವರ ಕೈ ಹಿಡಿದಿದ್ದರು. 15 ವರ್ಷಗಳ ಬಳಿಕ ದಂಪತಿ ದೂರಾಗುತ್ತಿದ್ದಾರೆ.
ತಮಿಳು ನಟ ಧನುಷ್- ಐಶ್ವರ್ಯ ಜೋಡಿ 2 ವರ್ಷದ ಹಿಂದೆ ಡಿವೋರ್ಸ್ ಘೋಷಿಸಿದ್ದರು. ಇದೇ ವರ್ಷ ಸಂಗೀತ ನಿರ್ದೇಶಕ, ನಟ ಜಿ. ವಿ ಪ್ರಕಾಶ್ ಕೂಡ ಪತ್ನಿಯಿಂದ ದೂರಾಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. ಇದೀಗ ಅದೇ ಹಾದಿಯಲ್ಲಿ ಜಯಂ ರವಿ ಕೂಡ ಪತ್ನಿಯಿಂದ ದೂರಾಗುವ ಬಗ್ಗೆ ತಿಳಿಸಿಸಿದ್ದಾರೆ.
ಸಿನಿಮಾ ಸಂಕಲನಕಾರ ಮೋಹನ್ ಪುತ್ರ ರವಿ. ಕಿರುತೆರೆ ನಿರ್ಮಾಪಕ ಸುಜಾತಾ ವಿಜಯಕುಮಾರ್ ಪುತ್ರಿ ಆರತಿ. ಇಬ್ಬರ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನುವ ಚರ್ಚೆ ಇತ್ತೀಚೆಗೆ ಕೇಳಿಬಂದಿತ್ತು. ಕಾರಣ ದಿಢೀರನೆ ಆರತಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪತಿ ಜೊತೆಗಿನ ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಇತ್ತೀಚೆಗೆ ದೂರಾಗುವ ಮುನ್ನ ಸೆಲೆಬ್ರೆಟಿ ಜೋಡಿಗಳು ಇದೇ ರೀತಿ ಮಾಡುತ್ತಿದ್ದಾರೆ. ಆ ಮೂಲಕ ಸುಳಿವು ಕೊಡುತ್ತಿದ್ದಾರೆ.
ರವಿ ಹಾಗೂ ಆರತಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. 'ಎಂಗೆಯುಂ ಕಾದಲ್', 'ಪೇರಣ್ಮೈ', 'ತನಿ ಒರುವನ್', 'ಕೋಮಲಿ', 'ಪೊನ್ನಿಯನ್ ಸೆಲ್ವನ್' ಪಾರ್ಟ್-1 ಹಾಗೂ ಪಾರ್ಟ್-2 ಸೇರಿ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ರವಿ ನಟಿಸಿದ್ದಾರೆ. ಇದೇ ವರ್ಷ 'ಸಿರೆನ್' ಚಿತ್ರದಲ್ಲಿ ನಟಿಸಿದ್ದರು. ಸದ್ಯ 'ಬ್ರದರ್' ಎನ್ನುವ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.
"ಭಾರವಾದ ಮನಸ್ಸಿನಿಂದ ನನ್ನ ವೈಯಕ್ತಿಕ ಜೀವನದ ಬಗ್ಗೆ ನಾನು ಹಂಚಿಕೊಳ್ಳುತ್ತಿದ್ದೇನೆ" ಎಂದು ನಟ ಜಯಂ ರವಿ ಪೋಸ್ಟ್ ಆರಂಭಿಸಿದ್ದಾರೆ. "ಬಹಳ ಯೋಚಿಸಿದ ಬಳಿಕ ಚರ್ಚಿಸಿದ ನಂತರ ನಾನು, ಆರತಿ ಅವರಿಂದ ದೂರವಾಗುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಈ ನಿರ್ಧಾರವನ್ನು ತರಾತುರಿಯಿಂದ ತೆಗೆದುಕೊಂಡಿದ್ದಲ್ಲ. ಕೆಲ ವೈಯಕ್ತಿಕ ಕಾರಣಗಳಿಂದ ಇದು ಪ್ರತಿಯೊಬ್ಬರ ಹಿತದೃಷ್ಟಿಯಿಂದ ತೆಗೆದುಕೊಂಡ ನಿರ್ಧಾರ" ಎಂದು ತಿಳಿಸಿದ್ದಾರೆ.
"ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಮತ್ತು ನಮ್ಮ ಕುಟುಂಬದ ಸದಸ್ಯರ ಖಾಸಗಿತನವನ್ನು ಗೌರವಿಸುವಂತೆ ನಾನು ಈ ಮೂಲಕ ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯದಲ್ಲಿ ಯಾವುದೇ ಊಹಾಪೋಹ, ವದಂತಿಗಳು ಅಥವಾ ಆರೋಪಗಳನ್ನು ಮಾಡದಂತೆ ನಿಮ್ಮೆಲ್ಲರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಈ ವಿಷಯವು ಖಾಸಗಿಯಾಗಿ ಉಳಿಯಲಿ" ಎಂದಿದ್ದಾರೆ.


Click it and Unblock the Notifications











