ಪತ್ನಿ ಆರತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ತಮಿಳು ನಟ ಜಯಂ ರವಿ
ಕಾಲಿವುಡ್ ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ವಿವಾದ ದಿನದಿಂದ ದಿನಕ್ಕೆ ಭಾರೀ ಚರ್ಚೆ ಹುಟ್ಟಾಕುತ್ತಿದೆ. ಜಯಂ ರವಿ ನನಗೆ ಡಿವೋರ್ಸ್ ಬೇಕು ಎಂದಿದ್ದರು. ಆದರೆ ಪತ್ನಿ ಆರತಿ ಇದಕ್ಕೆ ನನ್ನ ಒಪ್ಪಿಗೆ ಇಲ್ಲ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು. ಇದೀಗ ಪತ್ನಿಯ ವಿರುದ್ಧ ನಟ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎನ್ನಲಾಗ್ತಿದೆ.
ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜಯಂ ರವಿ ತಮಿಳು ಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ಅವರ ದಾಂಪತ್ಯ ಜೀವನ ವಿಚಾರ ಈಗ ಬೀದಿಗೆ ಬಂದಿದೆ. ಪತ್ನಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಜಯಂ ರವಿ ವಾದಿಸುತ್ತಿದ್ದಾರೆ. ಆದರೆ ಇದನ್ನು ಒಪ್ಪಲು ಪತ್ನಿ ಆರತಿ ಸಿದ್ಧರಿಲ್ಲ. ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಕೂಡ ಕೊಡದೇ ಆರತಿ ಸತಾಯಿಸುತ್ತಿದ್ದರು ಎನ್ನಲಾಗಿತ್ತು. ಹಾಗಾಗಿ ಮೆಟಾಗೆ ದೂರು ನೀಡಿ ಜಯಂರವಿ ತಮ್ಮ ಅಕೌಂಟ್ ಅನ್ನು ಮರಳಿ ಪಡೆದುಕೊಂಡಿದ್ದರು.

ತಮಗೆ ತಿಳಿಸದೇ ಜಯಂ ರವಿ ರಿವೋರ್ಸ್ ವಿಚಾರವನ್ನು ಘೋಷಿಸಿದ್ದಾರೆ ಎಂದು ಆರತಿ ಹೇಳಿದ್ದರು. ಆದರೆ ನಾನು ಈ ಸಂಬಂಧ ಎರಡು ನೋಟಿಸ್ ನೀಡಿರುವುದಾಗಿ ಹೇಳಿದ್ದರು. ಒಟ್ಟಾರೆ ಡಿವೋರ್ಸ್ ವಿಚಾರದಲ್ಲಿ ಇಬ್ಬರೂ ಭಿನ್ನ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದಾರೆ. ಇದೀಗ ಸಹಾಯ ಕೋರಿ ನಟ ರವಿ ಪೊಲೀಸ್ ಠಾಣೆಯನ್ನು ಆಶ್ರಯಿಸಿರುವುದಾಗಿ ವರದಿಯಾಗಿದೆ.
ಪ್ರಾಪರ್ಟಿ ವಿಚಾರದಲ್ಲಿ ಜಯಂರವಿ ಅಡ್ಯಾರ್(ಚೆನ್ನೈ) ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗ್ತಿದೆ. ಪತ್ನಿ ತನ್ನನ್ನು ಮನೆಯಿಂದ ಹೊರ ಹಾಕಿದ್ದಾಳೆ, ಅಲ್ಲದೇ, ಚೆನ್ನೈನ ಇಸಿಆರ್ ರಸ್ತೆಯಲ್ಲಿರುವ ಆರತಿ ಅವರ ಮನೆಯಲ್ಲಿದ್ದ ವಸ್ತುಗಳನ್ನು ವಾಪಸ್ ಕೊಡಿಸುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಆರತಿ ಮನೆಯಲ್ಲಿ ಇರುವ ತಮ್ಮ ಚಿನ್ನಾಭರಣ, ಪಾಸ್‌ಪೋರ್ಟ್, ಕಾರ್ ಕೀ ಸೇರಿದಂತೆ ಒಂದಷ್ಟು ವಸ್ತುಗಳನ್ನು ವಾಪಸ್ ಕೊಡಿಸಿ ಎಂದು ಜಯಂ ರವಿ ತಮ್ಮ ದೂರಿನಲ್ಲಿ ಕೇಳಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಾವಿಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಮುಂದಾಗಿದ್ದೇವೆ ಎಂದು ಜಯಂ ರವಿ ಪೋಸ್ಟ್ ಮಾಡಿದ್ದರು. ಅದರೆ ಅದನ್ನು ಪತ್ನಿ ಆರತಿ ಅಲ್ಲಗಳೆದಿದ್ದರು. ಇದನ್ನು ಕೇಳಿ ಭಿನ್ನಾಭಿಪ್ರಾಯ ಮರೆತು ಇಬ್ಬರೂ ಒಂದಾಗುತ್ತಾರೆ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ಇದು ಸದ್ಯಕ್ಕೆ ಬಗೆಹರಿಯುವಂತೆ ಕಾಣ್ತಿಲ್ಲ.

ಜಯಂರವಿ ಡಿವೋರ್ಸ್ ಘೋಷಿಸಿದ ಬೆನ್ನಲ್ಲೇ ಗಾಯಕಿ ಒಬ್ಬರ ಹೆಸರು ಕೇಳಿಬಂದಿತ್ತು. ಆಕೆಯ ಜೊತೆಗಿನ ಒಡನಾಟದಿಂದಲೇ ಜಯಂ ರವಿ ಈಗ ಪತ್ನಿಯಿಂದ ದೂರಾಗಲು ನಿರ್ಧರಿಸಿದ್ದಾರೆ ಎಂದು ಗುಲ್ಲಾಗಿತ್ತು. ಆದರೆ ಈ ಬಗ್ಗೆ ಸ್ವತಃ ನಟ ಪ್ರತಿಕ್ರಿಯಿಸಿದ್ದಾರೆ. ನಾವಿಬ್ಬರು ಫ್ರೆಂಡ್ಸ್ ಅಷ್ಟೆ. ನಮ್ಮ ವೈಯಕ್ತಿಕ ಜೀವನಕ್ಕೂ ಆಕೆಗೂ ಯಾವುದೇ ಸಂಬಂಧ ಇಲ್ಲ. ಸುಳ್ಳು ವದಂತಿ ಹಬ್ಬಿಸಬೇಡಿ ಎಂದಿದ್ದರು.
ನನ್ನ ಇಬ್ಬರು ಮಕ್ಕಳ ಜವಾಬ್ದಾರಿ ನನಗೆ ಕೊಡಬೇಕು. ಅದಕ್ಕಾಗಿ ನಾನು ಯಾವುದೇ ಹೋರಾಟಕ್ಕೂ ಸಿದ್ಧ ಎಂದಿದ್ದರು. "ನನಗೆ ನನ್ನ ಮಕ್ಕಳಾದ ಆರವ್ ಮತ್ತು ಅಯಾನ್ ಪಾಲನೆಗೆ ಅವಕಾಶ ಬೇಕು. ಈ ವಿಚ್ಛೇದನ ಕೇಸ್‌ನಲ್ಲಿ 10 ವರ್ಷ, 20 ವರ್ಷ ಅಥವಾ ಎಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ನ್ಯಾಯಾಲಯದಲ್ಲಿ ಹೋರಾಡಲು ನಾನು ಸಿದ್ಧನಿದ್ದೇನೆ. ಆದರೆ ನನ್ನ ಭವಿಷ್ಯ ನನ್ನ ಮಕ್ಕಳು; ಅವರು ನನ್ನ ಸಂತೋಷ." ಎಂದಿದ್ದರು.
ಇನ್ನು ಜಯಂ ರವಿ ನಟನೆಯ 'ಬ್ರದರ್' ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾ ಪ್ರಚಾರದಲ್ಲಿ ನಟ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ಮರಳಿ ಪಡೆದ ಬಳಿಕ ಚಿತ್ರದ ಪ್ರಚಾರಕ್ಕಾಗಿ ಸಾಕಷ್ಟು ಪೋಸ್ಟ್ ಮಾಡುತ್ತಿದ್ದಾರೆ.


Click it and Unblock the Notifications











