ಖ್ಯಾತ ಹಾಸ್ಯನಟ ಮದನ್ ಬಾಬ್ ಕ್ಯಾನ್ಸರ್‌ಗೆ ಬಲಿ
ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. ತಮಿಳಿನ ಪ್ರಮುಖ ಹಾಸ್ಯನಟ ಮದನ್ ಬಾಬ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಸಾಕಷ್ಟು ಸಿನಿಮಾಗಳಲ್ಲಿ ತಮ್ಮ ಕಾಮಿಡಿ ಮೂಲಕ ಅವರು ಮೋಡಿ ಮಾಡಿದ್ದರು. ಕಿರುತೆರೆಯಲ್ಲಿ ಕೂಡ ಗಮನ ಸೆಳೆದಿದ್ದರು.
70ಕ್ಕೂ ಅಧಿಕ ಸಿನಿಮಾಗಳಲ್ಲಿ ಮದನ್ ಬಾಬ್ ನಟಿಸಿದ್ದರು. 1984ರಲ್ಲಿ ಬಂದ 'ನೀಂಗಲ್ ಕೆಟ್ಟವೈ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಖ್ಯಾತ ನಿರ್ದೇಶಕ ಬಾಲು ಮಹೇಂದರ್ ಚಿತ್ರರಂಗಕ್ಕೆ ಅವರನ್ನು ಪರಿಚಯಿಸಿದ್ದರು. 'ದೇವರ್ ಮಗನ್', 'ಜಾತಿ ಮಲ್ಲಿ', 'ನಮ್ಮವರ್', 'ಫ್ರೆಂಡ್ಸ್', 'ವಸೂಲ್ ರಾಜಾ' ಮದನ್ ಬಾಬ್ ನಟಿಸಿದ ಕೆಲ ಜನಪ್ರಿಯ ಸಿನಿಮಾಗಳು.

ಮದನ್ ಬಾಬ್ ನಟಿಸಿದ ಕೊನೆಯ ಸಿನಿಮಾ 'ಚೆನ್ನೈ ಫೈಲ್ಸ್; ಮುತ್ತಲ್ ಪಕ್ಕಂ' ಈ ವಾರ ತೆರೆಗೆ ಬಂದಿದೆ. ಕೆಲ ವರ್ಷಗಳಿಂದ ಅವರು ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ನಡುವೆ ಒಮ್ಮೆ ಚೇತರಿಸಿಕೊಂಡರೂ ಬಳಿಕ ಅದೇ ಕ್ಯಾನ್ಸರ್ ಅವರನ್ನು ಬಲಿ ಪಡೆದುಕೊಂಡಿದೆ. ಶನಿವಾರ(ಆಗಸ್ಟ್ 2) ಸಂಜೆ 5 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ.
ನಟನೆ ಮಾತ್ರವಲ್ಲದೇ ಸಂಗೀತ ಕ್ಷೇತ್ರದಲ್ಲಿ ಕೂಡ ಮದನ್ ಗುರ್ತಿಸಿಕೊಂಡಿದ್ದರು. ಸಹೋದರ ಬಾಬು ಜೊತೆ ಸೇರಿ 'ಮದನ್ & ಬಾಬು' ಎಂಬ ತಂಡ ಕಟ್ಟಿಕೊಂಡು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಳ್ಳುತ್ತಿದ್ದರು. ಮುಂದೆ ಮದನ್ ಬಾಬ್ ಎಂದು ಹೆಸರು ಬದಲಿಸಿಕೊಂಡಿದ್ದರು. ಆರಂಭದಲ್ಲಿ ನಾಟಕ, ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಅವರು ಬಳಿಕ ಚಿತ್ರರಂಗಕ್ಕೆ ಬಂದಿದ್ದರು. ಕಮಲ್ ಹಾಸನ್, ರಜನಿಕಾಂತ್, ಅಜಿತ್, ಸೂರ್ಯ ಮತ್ತು ವಿಜಯ್ ಸೇರಿ ತಮಿಳಿನ ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿದ್ದರು.
ಅಂದಹಾಗೆ ಮದನ್ ಬಾಬ್ ಮೂಲ ಹೆಸರು ಎಸ್. ಕೃಷ್ಣಮೂರ್ತಿ. ತಮ್ಮ ಪೋಷಕರಿಗೆ 8 ಮಗುವಾಗಿದ್ದರು. ಎರಡು ಮಲಯಾಳಂ, ತಲಾ ಹಿಂದಿ ಹಾಗೂ ತೆಲುಗು ಸಿನಿಮಾ ಮದನ್ ನಟಿಸಿದ್ದರು. ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಅಸತ್ತಾ ಪೋವದು ಯಾರು?' ಎಂದು ಕಾರ್ಯಕ್ರಮದ ತೀರ್ಪುಗಾರರಾಗಿ ಬಹಳ ವರ್ಷ ರಂಜಿಸಿದ್ದರು.
ಮದನ್ ಬಾಬ್ ಅಗಲಿಕೆಗೆ ತಮಿಳು ಚಿತ್ರರಂಗ ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅವರು ಅಗಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರಹಮಾನ್ ಅವರಿಗೆ ಮದನ್ ಬಾಬ್ ಸಂಗೀತದ ಗುರುಗಳಾಗಿದ್ದರು.


Click it and Unblock the Notifications











