ತಮಿಳು ನಟ ಮತ್ತು ವೈದ್ಯ ಡಾ.ಸೇತುರಾಮ್ ನಿಧನ
ತಮಿಳು ನಟ ಮತ್ತು ವೈದ್ಯ ಡಾ. ಸೇತುರಾಮ್ ಹೃದಯಘಾತದಿಂದ ನಿಧನರಾಗಿದ್ದಾರೆ. ಚರ್ಮರೋಗ ತಜ್ಞರಾಗಿದ್ದ 36 ವರ್ಷದ ನಟ ಸೇತುರಾಮ್ ಚೆನ್ನೈನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ. ಸೇತುರಾಮ್ ಚಿತ್ರರಂಗದಲ್ಲಿ ಸೇತು ಎಂದೆ ಖ್ಯಾತಿ ಪಡೆದಿದ್ದರು.
Recommended Video
ಡಾ.ಸೇತುಪತಿ 2013ರಲ್ಲಿ 'ಕನ್ನ ಲಡ್ಡು ತಿನ್ನ ಆಸಯ್ಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ತಮಿಳು ಚಿತ್ರರಂಗದಲ್ಲಿ ಸೇತು ಖ್ಯಾತ ನಟ ಸಂತಾನಮ್ ಜೊತೆ ತೀರಾ ಆತ್ಮೀಯರಾಗಿದ್ದರು. ಇಬ್ಬರು ದೀರ್ಘಕಾಲದ ಗೆಳೆಯರು. ಮೊದಲ ಸಿನಿಮಾದ ಯಶಸ್ಸಿನ ನಂತರ ಸೇತುರಾಮ್ ಮೂರ್ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸೇತುರಾಮ್ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪತ್ನಿ ಮತ್ತು ಒಂದು ವರ್ಷದ ಮಗಳನ್ನು ಅಗಲಿಸಿದ್ದಾರೆ. ನಟನ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಚೆನ್ನೈನಲ್ಲಿ ಸೇತು ಸ್ವಂತ ಚರ್ಮರೋಗ ಕ್ಲಿನಿಕ್ ನಡೆಸುತ್ತಿದ್ದು ಅಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಸೇತು ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಸರ್ಜರಿ ಕೂಡ ಆಗಿತ್ತು ಎಂದು ಹೇಳಲಾಗುತ್ತಿದೆ. ವೈದ್ಯರಾಗಿ ಕೆಲಸ ಮಾಡುವ ಜೊತೆಗೆ ಸಿನಿಮಾರಂಗದಲ್ಲೂ ಸಕ್ರೀಯರಾಗಿದ್ದರು.
'ವಾಲಿಬ ರಾಜಾ', 'ಸಕ್ಕ ಪೊಡು ರಾಜ' ಮತ್ತು 'ಫಿಫ್ಟಿ ಫಿಫ್ಟಿ' ಸಿನಿಮಾದಲ್ಲಿ ನಾಯಕನಾಗಿ ಮಿಂಚಿದ್ದರು. ಇತ್ತೀಚಿಗಷ್ಟೆ ಕೊರೊನಾ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿ ಮನೆಯಲ್ಲಿಯೆ ಇದ್ದು ಸಹಕರಿಸಬೇಕೆಂದು ಮನವಿ ಮಾಡಿಕೊಂಡಿದ್ದರು.


Click it and Unblock the Notifications











