ಕನ್ನಡದಲ್ಲೂ ಬರ್ತಿದೆ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಸಿನಿಮಾ
ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಜೀವನ ಸಿನಿಮಾ ಆಗಿ ತೆರೆ ಮೇಲೆ ಬರುತ್ತಿದೆ. ಕನ್ನಡಿಗರೊಬ್ಬರ ಜೀವನ ತಮಿಳಿನಲ್ಲಿ ಸಿನಿಮಾ ಆಗಿ ತೆರೆ ಬರುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಕನ್ನಡದಲ್ಲಿ ಬರುತ್ತಿಲ್ಲವಲ್ಲ ಎನ್ನುವ ಬೇಸರ ಕನ್ನಡಾಭಿಮಾನಿಗಳಲ್ಲಿ ಇತ್ತು. ಆದರೀಗ ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಿನಿಮಾವನ್ನು ಕನ್ನಡದಲ್ಲೂ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಸಿಕ್ಕಿದೆ.
ಹೌದು, ತಮಿಳಿನಲ್ಲಿ ತಯಾರಾಗುತ್ತಿರುವ 'ಸೂರರೈ ಪೊಟ್ರು' ಸಿನಿಮಾ ಕನ್ನಡಕ್ಕು ಡಬ್ ಆಗಿ ರಿಲೀಸ್ ಆಗುತ್ತಿದೆ. ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಸಿನಿಮಾವನ್ನು ಕನ್ನಡದಲ್ಲೂ ರಿಲೀಸ್ ಮಾಡಬೇಕೆನ್ನುವುದು ಕನ್ನಡಾಭಿಮಾನಿಗಳ ಆಸೆಯಾಗಿತ್ತು. ಅಭಿಮಾನಿಗಳ ಒತ್ತಾಯದ ಮೇರೆಗೆ ಚಿತ್ರತಂಡ ಕನ್ನಡದಲ್ಲೂ ತೆರೆಗೆ ತರಲು ನಿರ್ಧರಿಸಿದೆ.

ಸೂರರೈ ಪೊಟ್ರು ಚಿತ್ರದಲ್ಲಿ ನಾಯಕನಾಗಿ ಸೂರ್ಯ ಕಾಣಿಸಿಕೊಂಡಿದ್ದಾರೆ. ಕ್ಯಾಪ್ಟನ್ ಜಿ.ಆರ್ ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಮಿಂಚಿದ್ದಾರೆ. ಚಿತ್ರಕ್ಕೆ ಸುಧಾ ಕೊಂಗಾರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಅಂದ್ಹಾಗೆ ಕ್ಯಾಪ್ಟರ್ ಗೋಪಿನಾಥ್ ಹಾಸನ ಜಿಲ್ಲೆಯ ಗೊರೂರಿನ ಶಾಲಾ ಶಿಕ್ಷಕರೊಬ್ಬರ ಪುತ್ರ. ಕನ್ನಡ ಮಾಧ್ಯಮದಲ್ಲಿ ಓದಿ, ಸೈನ್ಯಕ್ಕೆ ಸೇರಿ ಕ್ಯಾಪ್ಟನ್ ಆಗುತ್ತಾರೆ. ಆ ನಂತರ ಏರ್ ಡೆಕ್ಕರ್ ವಿಮಾನಯಾನ ಸಂಸ್ಥೆಯ ಹುಟ್ಟುಹಾಕುತ್ತಾರೆ. ಕಡಿಮೆ ಹಣದಲ್ಲಿ ವಿಮಾನಯಾನ ಪ್ರಾರಂಭಿಸುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗುತ್ತಾರೆ. ಜಿ.ಆರ್ ಗೋಪಿನಾಥ್ ಅವರ ಜೀವನದ ರೋಚಕ ಕಥೆಯೆ ಸಿನಿಮಾ ಆಗಿ ತೆರೆ ಮೇಲೆ ಬರುತ್ತಿದೆ. ಸಾಕಷ್ಟು ಕುತೂಹಲ ಮೂಡಿಸಿರುವ 'ಸೂರರೈ ಪೊಟ್ರು' ಸಿನಿಮಾ ಇದೆ ತಿಂಗಳು 21ರಂದು ತೆರೆಗೆ ಬರುತ್ತಿದೆ.


Click it and Unblock the Notifications











