ದಳಪತಿ ವಿಜಯ್ ಪಾರ್ಟಿ ಬಾವುಟ, ಚಿಹ್ನೆ ಅನಾವರಣ; ಆನೆ, ಹೂವಿನ ಚಿತ್ರ ಯಾಕೆ?
ತಮಿಳು ನಟ ದಳಪತಿ ವಿಜಯ್ ಈ ಹಿಂದೆ ರಾಜಕೀಯ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ಘೋಷಿಸಿದ್ದರು. 'ತಮಿಳಗ ವೆಟ್ರಿ ಕಳಗಂ' ಎಂದು ಪಕ್ಷಕ್ಕೆ ಹೆಸರಿಟ್ಟಿದ್ದರು. ಇದೀಗ ಚುನಾವಣಾ ಆಯೋಗದಿಂದ ಅವರು ಕೇಳಿದ್ದ ಪಕ್ಷದ ಬಾವುಟ, ಚಿಹ್ನೆಗೆ ಅನುಮತಿ ಸಿಕ್ಕಿದೆ. ಇದೀಗ ಅಧಿಕೃತವಾಗಿ ವಿಜಯ್ ತಮ್ಮ ಪಕ್ಷದ ಬಾವುಟ, ಆಂಥೆಮ್ ಅನಾವರಣ ಮಾಡಿದ್ದಾರೆ.
ಚಿತ್ರರಂಗದಲ್ಲಿ ಸಿಕ್ಕ ಜನಪ್ರಿಯತೆ ಬಳಸಿಕೊಂಡು ಈ ಹಿಂದೆ ಹಲವರು ರಾಜಕೀಯರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡಿನದಲ್ಲಿ ಇದಕ್ಕೆ ದೊಡ್ಡ ಪರಂಪರೆಯೇ ಇದೆ. ಇವತ್ತಿಗೂ ಕಮಲ್ ಹಾಸನ್, ಉದಯನಿಧಿ ಸ್ಟಾಲಿನ್, ಶರತ್‌ಕುಮಾರ್ ದಂಪತಿ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಎಂಜಿಆರ್, ಕರುಣಾನಿಧಿ, ವಿಜಯ್‌ಕಾಂತ್ ಸೇರಿದಂತೆ ಹಲವರು ಈ ಪ್ರಯತ್ನ ಮಾಡಿ ಗೆದ್ದಿದ್ದರು.

ರಜನಿಕಾಂತ್ ಕೂಡ ತಮಿಳುನಾಡ ರಾಜಕೀಯರಂಗ ಪ್ರವೇಶಕ್ಕೆ ಮನಸ್ಸು ಮಾಡಿದ್ದರು. ಆದರೆ ಕೊನೆ ಕ್ಷಣದಲ್ಲಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು. ದಳಪತಿ ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಕೊನೆಗೆ ಇದನ್ನು ಖಚಿತಪಡಿಸಿದ್ದರು. ಇದೀಗ ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ದಳಪತಿ ತನ್ನ ಪಕ್ಷವನ್ನು ಸಂಘಟಿಸಲು ಮುಂದಾಗಿದ್ದಾರೆ. ತೆರೆಮರೆಯಲ್ಲಿ ಬಹಳ ಹಿಂದೆಯೇ ಅದಕ್ಕಾಗಿ ತಯಾರಿ ನಡೆಸಿದ್ದರು.
ಇಂದು(ಆಗಸ್ಟ್ 22) ಚೆನ್ನೈನಲ್ಲಿರುವ 'ತಮಿಳಗ ವೆಟ್ರಿ ಕಳಗಂ' ಪಕ್ಷದ ಕಚೇರಿಯಲ್ಲಿ ಬಾವುಟ ಹಾಗೂ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸ್ವತಃ ವಿಜಯ್ ಬಾವುಟ, ಚಿಹ್ನೆ ಅನಾವರಣ ಮಾಡಿದರು. ಬಳಿಕ ದೊಡ್ಡ ಧ್ಜಜಾರೋಹಣ ಮಾಡಿದರು. ಇನ್ನು ಮರೂನ್ ಹಾಗೂ ಹಳದಿ ಬಣ್ಣದ ಬಾವುಟದಲ್ಲಿ ಎರಡು ಆನೆಗಳು ಹಾಗೂ ವಾಗೈ ಪುಷ್ಪವನ್ನು ನೋಡಬಹುದು.
ಬಾವುಟದ ವಿಶೇಷತೆಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. 3 ಪಟ್ಟಿಯ ರೀತಿಯಲ್ಲಿ 3 ಬಣ್ಣಗಳನ್ನು ಅದರಲ್ಲಿ ಕಾಣಬಹುದು. ಮೇಲೆ ಕೆಳಗೆ ಮರೂನ್ ಬಣ್ಣವಿದ್ದರೆ ನಡುವೆ ಹಳದಿ ಬಣ್ಣವಿದೆ. ಕೇಂದ್ರ ಭಾಗದಲ್ಲಿ 'ವಾಗೈ' ಹೂವು, ಅದರ ಎರಡು ಬದಿಯಲ್ಲಿ ಆನೆಗಳು ಮುಂಗಾಲುಗಳನ್ನು ಮೇಲೆತ್ತಿ ಘೀಳಿಡುವ ಚಿತ್ರವನ್ನು ಕಾಣಬಹುದು. ವಿಜಯ್ ಅಭಿಮಾನಿಗಳು ಈ ಬಾವುಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಬದಿಯಲ್ಲಿ ನೆಡುವ ಒಂದು ಪ್ರಭೇದದ ಮರವೊಂದರ ಹೂವು ಇದು. ಇದನ್ನು ತಮಿಳುನಾಡಿನಲ್ಲಿ ಐತಿಹಾಸಿಕವಾಗಿ ವಿಜಯದ ಸಂಕೇತ ಎಂದು ಭಾವಿಸಲಾಗುತ್ತದೆ. ಮಹಿಷಾಸುರನನ್ನು ಕೊಲ್ಲುವ ಮೊದಲು ಪಾರ್ವತಿ ಈ ವಗೈ ಮರದ ಕೆಳಗೆ ಶಿವನಿಗಾಗಿ ತಪಸ್ಸು ಮಾಡಿದ್ದಳು ಎಂದು ತಮಿಳು ಪುರಾಣಗಳಲ್ಲಿ ಹೇಳಲಾಗುತ್ತದೆ. ಅಷ್ಟೇ ಅಲ್ಲ ಚೋಳರ ಕಾಲದಲ್ಲಿ ವಿಜಯದ ಸಂಕೇತವಾಗಿ ಬಳಸಲಾಗುತ್ತಿತ್ತು.
ಇನ್ನು 'ತಮಿಳಗ ವೆಟ್ರಿ ಕಳಗಂ' ಪಕ್ಷದ ಬಾವುಟ ಅನಾವರಣ ಕಾರ್ಯಕ್ರಮಕ್ಕೆ ವಿಜಯ್ ಪೋಷಕರು ಆಗಮಿಸಿದ್ದರು. ಇದೇ ವೇಳೆ ಎಸ್. ತಮನ್ ಸಂಗೀತದಲ್ಲಿ ಪಕ್ಷದ ಧ್ಯೇಯ ಗೀತೆಯನ್ನು ದಳಪತಿ ಬಿಡುಗಡೆ ಮಾಡಿದರು. ವಿವೇಕ್ ಈ ಗೀತೆಗೆ ಸಾಹಿತ್ಯ ಬರೆದಿದ್ದಾರೆ. ಇನ್ನು ಧ್ವಜಾರೋಹಣ ನೆರವೇರಿಸಿದ ವಿಜಯ್ ಪಕ್ಷದ ಕಾರ್ಯಕರ್ತರೊಂದಿಗೆ ಅಲ್ಲೇ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ವಿಜಯ್ ಮಾತನಾಡಿ, "ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರು, ತಮಿಳು ನೆಲವನ್ನು ತೊರೆದು ನಮ್ಮ ಹಕ್ಕುಗಳಿಗಾಗಿ ಅವಿರತವಾಗಿ ಹೋರಾಡಿದ ಅಸಂಖ್ಯಾತ ಸೈನಿಕರನ್ನು ನಾವು ಎಂದೆಂದಿಗೂ ಸ್ಮರಿಸುತ್ತೇವೆ. ನಾವು ಜಾತಿ, ಧರ್ಮ, ಲಿಂಗ ಹಾಗೂ ಪ್ರದೇಶದ ಆಧಾರದ ಮೇಲೆ ತಾರತಮ್ಯವನ್ನು ತೊಡೆದುಹಾಕುತ್ತೇವೆ. ನಾವು ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳಿಗಾಗಿ ಕೆಲಸ ಮಾಡುತ್ತೇವೆ. ಸಮಾನತೆಯ ತತ್ವವನ್ನು ಬಲವಾಗಿ ಸಮರ್ಥಿಸುವುದಾಗಿ" ಅವರು ತಿಳಿಸಿದರು.
ಇನ್ನು ನಟ ವಿಜಯ್ ತಮಿಳುನಾಡಿನಾದ್ಯಂತ ಪಾದಯಾತ್ರೆ ಮಾಡಿ ಪಕ್ಷ ಸಂಘಟಿಸುವ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ. ಅದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಎಲ್ಲೆಲ್ಲೆ ಪಾದಾಯಾತ್ರೆ ಮಾಡಬೇಕು ಎನ್ನುವ ಬಗ್ಗೆಯೂ ಚರ್ಚೆ ನಡೆಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಸದ್ಯ ವಿಜಯ್ ನಟನೆಯ 'ಗೋಟ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾ ಬಳಿಕ ದಳಪತಿ ಮತ್ತೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.


Click it and Unblock the Notifications











