ಅಭಿಮಾನಿಯನ್ನೇ ಪ್ರೀತಿಸಿ ಮದುವೆಯಾದ ದಳಪತಿ ವಿಜಯ್ ಇಂಟರೆಸ್ಟಿಂಗ್ ಲವ್ ಸ್ಟೋರಿ
ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಗೆ ಇಂದು ವಿಶೇಷವಾದ ದಿನ. ವಿಜಯ್ ಪ್ರೀತಿಸಿದ ಹುಡುಗಿಯನ್ನು ಮದುವೆಯಾದ ಸುದಿನ. ಇಂದು ವಿಜಯ್ ಮತ್ತು ಸಂಗೀತಾ ದಂಪತಿಯ ಮದುವೆ ವಾರ್ಷಿಕೋತ್ಸವ. ಅಭಿಮಾನಿಗಳ ನೆಚ್ಚಿನ ಜೋಡಿ 21ನೇ ವರ್ಷದ ಮದುವೆ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ದಂಪತಿಗೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.
Recommended Video
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎಂದು ಹೇಳುತ್ತಾರೆ. ವಿಜಯ್ ಪಾಲಿಗೆ ಇದು ಅಕ್ಷರಶಃ ನಿಜ. ಜೋಸೆಫ್ ವಿಜಯ್ ಚಂದ್ರಶೇಖರ್ ಅಂದರೆ ಥಟ್ ಅಂತ ಗೊತ್ತಾಗಲಿಕ್ಕಿಲ್ಲ. ಆದರೆ ದಳಪತಿ ವಿಜಯ್ ಅಂದರೆ ಪರಿಚಯ ಮಾಡಿಕೊಡಬೇಕಾಗಿಲ್ಲ. 1999ರಲ್ಲಿ ವಿಜಯ್, ಅಭಿಮಾನಿ ಸಂಗೀತಾ ಸೋರ್ನಲಿಂಗಂ ಅವರನ್ನು ಮದುವೆಯಾಗುತ್ತಾರೆ.
ವಿಜಯ್ ಮತ್ತು ಸಂಗೀತಾ ಅವರದ್ದು ಸಾಮಾನ್ಯವಾದ ಪ್ರೇಮ ಕಥೆಯಲ್ಲ. ಪ್ರೀತಿ ಮತ್ತು ಹಣೆ ಬರಹವನ್ನು ನಂಬುವಂತೆ ಮಾಡುವ ಕಥೆಯಾಗಿದೆ. ನಟ ವಿಜಯ್, ಸಂಗೀತಾ ಅವರ ಪ್ರೀತಿಯಲ್ಲಿ ಬಿದ್ದಿದ್ದು ಹೇಗೆ? ಯುಕೆ ನಲ್ಲಿ ನೆಲೆಸಿದ್ದ ಸಂಗೀತಾ ಚೆನ್ನೈನಲ್ಲಿದ್ದ ವಿಜಯ್ ಅವರ ಪರಿಚಯವಾಗಿದ್ದು ಹೇಗೆ? ಮುಂದೆ ಓದಿ..

1996ರಲ್ಲಿ ಇಬ್ಬರ ಪರಿಚಯ
1996ರಲ್ಲಿ ನಟ ವಿಜಯ್ ಗೆ ಪತ್ನಿ ಸಂಗೀತಾ ಅವರ ಪರಿಚಯವಾಗಿದೆ. ಸಂಗೀತಾ, ವಿಜಯ್ ಅವರ ದೊಡ್ಡ ಅಭಿಮಾನಿ. ವಿಜಯ್ ನೋಡಲು, ಭೇಟಿಯಾಗಲು ಸಂಗೀತಾ ಲಂಡನ್ ನಿಂದ ಚೆನ್ನೈಗೆ ಬರುತ್ತಿದ್ದರು. ಒಂದು ದಿನ ಚೆನ್ನೈನಲ್ಲಿ ಶೂಟಿಂಗ್ ನಲ್ಲಿದ್ದ ವಿಜಯ್ ನೋಡಲು ದೂರದ ಯುಕೆಯಿಂದ ಸಂಗೀತಾ ಬರುತ್ತಾರೆ. ಯು ಕೆ ಯಿಂದ ಬಂದ ಅಭಿಮಾನಿಯನ್ನು ವಿಜಯ್ ಪ್ರೀತಿಯಿಂದ ಸ್ವಾಗತಿಸಿ ಕೆಲವು ಸಮಯ ಅವರ ಜೊತೆ ಮಾತನಾಡಿದ್ದಾರೆ.

ವಿಜಯ್ ಕುಟುಂಬದವರನ್ನು ಭೇಟಿಯಾದ ಸಂಗೀತಾ
ಆಗಲೇ ವಿಜಯ್ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದರು. ಅಲ್ಲದೆ ಸಾಲು ಸಾಲು ಸಿನಿಮಾಗಳಲ್ಲಿ ವಿಜಯ್ ಬ್ಯುಸಿ ಇದ್ದರು. ಆ ಸಮಯದಲ್ಲಿ ಸಂಗೀತಾ, ವಿಜಯ್ ನೋಡಲು, ಮಾತನಾಡಿಸಲು ಹರಸಾಹಸ ಪಡುತ್ತಿದ್ದರು. ಸಂಗೀತಾ ಅವರ ಅಭಿಮಾನಕ್ಕೆ ಮನಸೋತ ವಿಜಯ್ ಗೆ ಸಂಗೀತಾ ಜೊತೆ ಸ್ನೇಹ ಬೆಳೆಯುತ್ತೆ. ಇಬ್ಬರು ಪರಿಚಯವಾಗುತ್ತಿದ್ದಂತೆ ವಿಜಯ್ ಕುಟುಂಬದವರನ್ನೆಲ್ಲ ಪರಿಚಯ ಮಾಡಿಕೊಡುವುದಾಗಿ ಸಂಗೀತಾಗೆ ಹೇಳುತ್ತಾರೆ. ವಿಜಯ್ ಮಾತಿನಿಂದ ಸಂತೋಷಗೊಂಡ ಸಂಗೀತಾ, ವಿಜಯ್ ಫ್ಯಾಮಿಲಿಯವರನ್ನು ಭೇಟಿಯಾಗುತ್ತಾರೆ. ವಿಜಯ್ ಕುಟುಂಬದವರಿಗೆ ಸಂಗೀತಾ ತುಂಬಾ ಇಷ್ಟವಾಗುತ್ತಾರೆ. ಸಂಗೀತಾನೆ ಮನೆಯ ಸೊಸೆ ಎಂದು ನಿರ್ಧರಿಸಿಬಿಡುತ್ತಾರೆ.

ಸಂಗೀತಾ ಮುಂದೆ ವಿಜಯ್ ಕುಟುಂಬದವರ ಮದುವೆ ಪ್ರಸ್ತಾಪ
ಅಷ್ಟರಲ್ಲೇ ವಿಜಯ್, ಸಂಗೀತಾ ಅವರನ್ನು ಇಷ್ಟಪಡಲು ಪ್ರಾರಂಭಿಸಿದ್ದರು. ಕೆಲವು ದಿನಗಳ ಬಳಿಕ ವಿಜಯ್ ಕುಟುಂಬದವರು ಸಂಗೀತಾ ಬಳಿ ಮದುವೆ ಪ್ರಸ್ತಾಪ ಮಾಡುತ್ತಾರೆ. ವಿಜಯ್ ಮದುವೆ ಆಗಲು ಇಷ್ಟವಿಲ್ಲ ಎಂದು ಹೇಳಲು ಸಂಗೀತಾಗೆ ಕಾರಣನೇ ಇರಲಿಲ್ಲ. ಸಂಗೀತಾ ಪೋಷಕರು ಲಂಡನ್ ನಲ್ಲಿ ನೆಲೆಸಿದ್ದರು. ಇಬ್ಬರ ಕುಟುಂಬ ಲಂಡನ್ ನಲ್ಲಿ ಭೇಟಿಯಾಗಿ ಮದುವೆ ಮಾತುಕತೆ ಮಾಡುತ್ತಾರೆ.

ಆಗಸ್ಟ್ 25ರಂದು ಮದುವೆ
1999 ಆಗಸ್ಟ್ 25ರಂದು ವಿಜಯ್ ಮತ್ತು ಸಂಗೀತಾ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಬ್ಬರ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ನಡೆಯುತ್ತೆ. ಮದುವೆಯಾಗಿ ಒಂದು ವರ್ಷದ ಬಳಿಕ ಸಂಗೀತಾ ಮೊದಲ ಮಗುವಿಗೆ ಜನ್ಮ ನೀಡುತ್ತಾರೆ. ಜಾಸನ್ ಸಂಜಯ್ ಎಂದು ಮಗನಿಗೆ ನಾಮಕರಣ ಮಾಡಿದ್ದಾರೆ. 2005ರಲ್ಲಿ ಎರಡನೇ ಮಗು ದಿವ್ಯಾ ಸಾಶಾ ಜನಿಸುತ್ತಾರೆ. ವಿಜಯ್ ಸಂಗೀತಾ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.


Click it and Unblock the Notifications











