47ನೇ ವಯಸ್ಸಿನಲ್ಲಿ ಮದುವೆಯಾಗಲು ರೆಡಿಯಾದ ತಮಿಳು ನಟ ವಿಶಾಲ್, ಹುಡುಗಿ ಯಾರು ?
ಪ್ರೀತಿ ಎನ್ನುವುದು ಮಾಯೆ. ಈ ಮಾಯೆ ಇಲ್ಲದೆ ಬದುಕಿಲ್ಲ. ಬದುಕು ಸುಂದರವಾಗಿರಬೇಕು ಅಂದರೆ ಪ್ರೀತಿ ನಮ್ಮನ್ನು ಸುತ್ತುತ್ತಿರಬೇಕು. ಇಂತಹ ಪ್ರೀತಿ ಪ್ರೇಮಕ್ಕೆ ವಯಸ್ಸಿನ ನಿರ್ಬಂಧ ಇಲ್ಲ. ಅದು ಯಾರ ಮೇಲೆ ಯಾವಾಗಲಾದರೂ ಕೂಡ ಹುಟ್ಟಬಹುದು. ಇದಕ್ಕೆ ವಿಶಾಲ್ ವ್ಯೆಯಕ್ತಿಕ ಬದುಕು ಸದ್ಯದ ಉದಾಹರಣೆ. ಹೌದು, ವಿಶಾಲ್.. ಕಾಲಿವುಡ್‌ನ ಸೂಪರ್ ಸ್ಟಾರ್. ವಯಸ್ಸು 47 ಆದರೂ ಕೂಡ ವಿಶಾಲ್ ಇವತ್ತು ಕೂಡ ಬ್ಯಾಚುಲರ್ ಜೀವನ ನಡೆಸುತ್ತಿದ್ದಾರೆ.
ನಿಜಾ.. ಆಗಾಗ ವಿಶಾಲ್‌ಗೆ ಕೆಲ ನಾಯಕಿರ ಮೇಲೆ ಮನಸಾಗಿತ್ತು. ವರಲಕ್ಷ್ಮೀ ಶರತ್ ಕುಮಾರ್.. ಕೀರ್ತಿ ಸುರೇಶ್.. ಮೊನ್ನೆ ಮೊನ್ನೆಯಷ್ಟೇ ಮದುವೆಯಾದ ಅಭಿನಯ ಜೊತೆ ವಿಶಾಲ್ ಹೆಸರು ತಳುಕು ಹಾಕಿಕೊಂಡಿತ್ತು. ಇಷ್ಟೆಲ್ಲ ಯಾಕೆ, 2019ರಲ್ಲಿ ಹೈದರಾಬಾದ್ ಮೂಲದ ಅನಿಶಾ ಅಲ್ಲಾ ರೆಡ್ಡಿ ಜೊತೆ ವಿಶಾಲ್ ನಿಶ್ಚಿತಾರ್ಥ ಸಮಾರಂಭ ಕೂಡ ನಡೆದಿತ್ತು. ಎರಡು ಮನೆಯ ಗುರು ಹಿರಿಯರು ಮತ್ತು ಇಬ್ಬರ ಆಪ್ತ ಸ್ನೇಹಿತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.

ಇನ್ನು ಸಂದರ್ಶನದಲ್ಲಿ ಆಗ ತಮ್ಮ ಮದುವೆಯ ಕುರಿತು ಮಾತನಾಡಿದ್ದ ವಿಶಾಲ್ ನನ್ನ ಮತ್ತು ಅನಿಶಾ ಅವರದ್ದು ಅರೆಂಜ್ ಮ್ಯಾರೇಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್ ಪೋಷಕರನ್ನು ಒಪ್ಪಿಸಿಯೇ ನಾವು ಮದುವೆ ಆಗುತ್ತಿದ್ದೇವೆ ಎಂದು ಹೇಳಿದ್ದರು.
ಆದರೆ, ದುರಾದೃಷ್ಟವಶಾತ್ ಇನ್ನೇನು ಇಬ್ಬರು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಸಂಬಂಧ ಮುರಿದು ಬಿತ್ತು. ಇಂಥಾ ವಿಶಾಲ್ ಸದ್ಯ ತಮ್ಮ ಚಿತ್ರಗಳಿಗಿಂತ ಅನಾರೋಗ್ಯದ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ವಿಶಾಲ್ ಆರೋಗ್ಯದ ವಿಚಾರದಲ್ಲಿ ಅಭಿಮಾನಿಗಳು ಕೂಡ ಆತಂಕಕ್ಕೀಡಾಗಿದ್ದಾರೆ.
ಹೀಗಿರುವಾಗ ಇದೀಗ ವಿಶಾಲ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.ನಾನೊಂದು ಹುಡುಗಿಯನ್ನು ಮನಸಾರೆ ಪ್ರೀತಿಸುತ್ತಿದ್ದೇನೆ ಶೀಘ್ರದಲ್ಲಿಯೇ ಮದುವೆಯಾಗುತ್ತೇನೆ ಎಂದು ಹೇಳಿದ್ದಾರೆ.
ಹೌದು, ಅಸಲಿಗೆ ಮೊನ್ನೆಯಷ್ಟೇ ವೇದಿಕೆ ಮೇಲೆ ಕುಸಿದು ಬಿದ್ದಿದ್ದ ವಿಶಾಲ್ ಸದ್ಯ ಚೇತರಿಸಿಕೊಂಡಿದ್ದಾರೆ. ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ.
ಇದೇ ಸಮಯದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ವಿಶಾಲ್ ಚೆಂಗಲ್ಪಟ್ಟು ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಮಾರ್ ಅವರ ಮದುವೆಗೆ ಮಧುರೈಗೆ ಬಂದಿದ್ದೆ, ಮಧುರೈಗೆ ಬಂದು ಮೀನಾಕ್ಷಿ ಅಮ್ಮನ ದರ್ಶನ ಪಡೆಯದೇ ಮರಳಿ ಊರಿಗೆ ಹೋಗಲು ಹೇಗೆ ಸಾಧ್ಯ ? ನಮ್ಮಮ್ಮ ಮನೆಯೊಳಗೆ ಬಿಡುವುದಿಲ್ಲ ಹೀಗಾಗಿ ನನ್ನ ಅಮ್ಮನಿಂದ ಸೀರೆ ತಂದಿದ್ದೆ, ಮೀನಾಕ್ಷಿ ಅಮ್ಮನಿಗೆ ಆ ಸೀರೆ ಅರ್ಪಿಸಿ ದರ್ಶನ ಪಡೆದೆ ಎಂದು ಹೇಳಿದ್ಧಾರೆ.
2006ರಲ್ಲಿ ತಿಮಿರು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಇಲ್ಲಿಗೆ ಬಂದಿದ್ದೆ ಈಗ 19 ವರ್ಷಗಳ ನಂತರ ಬಂದಿದ್ದೇನೆ, ಮನಸಾರೆ ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದ್ಧಾರೆ.
ಹೀಗೆ ಮಾತನಾಡುತ್ತಾ ತಮ್ಮ ಮದುವೆ ಕುರಿತು ಕೂಡ ಮಾತನಾಡಿರುವ ವಿಶಾಲ್ ಒಂದು ತಿಂಗಳಿಂದ ನಾನೊಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ ಶೀಘ್ರದಲ್ಲಿಯೇ ಮದುವೆಯ ದಿನಾಂಕ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಆದರೆ ಅದಕ್ಕೂ ಮೊದಲು ದಕ್ಷಿಣ ಭಾರತೀಯ ಕಲಾವಿದರ ಸಂಘದ ಕಟ್ಟಡ {ನಾಡಿಗರ್ ಸಂಗಮ್} ಯೋಜನೆಯನ್ನು ಪೂರ್ಣಗೊಳ್ಳಬೇಕಿದೆ, ಪೂರ್ಣಗೊಳ್ಳುವ ಹಂತದಲ್ಲಿದೆ, ಈ ಕಟ್ಟದ ಉದ್ಘಾಟನೆಯ ನಂತರವಷ್ಟೇ ನನ್ನ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ. ಎರಡು ಕುಟುಂಬದ ನಡುವೆ ಮದುವೆಯ ಕುರಿತು ಮಾತುಕತೆ ನಡೆದಿದೆ ಎಲ್ಲವನ್ನು ಶೀಘ್ರದಲ್ಲಿಯೇ ಹೇಳುತ್ತೇನೆ ಎಂದು ಕೂಡ ವಿಶಾಲ್ ಹೇಳಿದ್ದಾರೆ.
ಸದ್ಯ ವಿಶಾಲ್ ಮದುವೆಯಾಗುತ್ತಿರುವುದಾಗಿ ಹೇಳಿದ್ಧಾರೆ. ಆದರೆ ಹುಡುಗಿ ಯಾರು ಎನ್ನುವುದನ್ನು ಹೇಳಿಲ್ಲ. ಹೀಗಾಗಿ ವಿಶಾಲ್ ಹೃದಯ ಗೆದ್ದ ಆ ಚೆಲುವೆ ಯಾರಿರಬಹುದು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಇನ್ನು ಅಗಸ್ಟ್ 29ಕ್ಕೆ ವಿಶಾಲ್ 48ನೇ ವಯಸ್ಸಿಗೆ ಕಾಲಿಡಲಿದ್ದಾರೆ. ಅವತ್ತೇ ಮದುವೆಯಾಗುವ ಹುಡುಗಿಯನ್ನು ವಿಶಾಲ್ ಪರಿಚಯಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್‌ನಲ್ಲಿ ಮದುವೆ ನಡೆಯಲಿದೆ ಎನ್ನುವ ಮಾತು ಸದ್ಯ ಚೆನ್ನೈನಲ್ಲಿ ಕೇಳಿ ಬರುತ್ತಿದೆ.


Click it and Unblock the Notifications











