ತಮಿಳು ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ವಿವಾದ; ನಟ ವಿಶಾಲ್ ಏನಂದ್ರು?
ಸಿನಿಮಾ ನಟ, ನಟಿಯರು ನೋಡಲು ಸುಂದರವಾಗಿ ಇರಬೇಕು ಎನ್ನುವ ಅಲಿಖಿತ ನಿಯಮವೊಂದಿದೆ. ಇನ್ನು ಇದಕ್ಕಾಗಿ ಕಲಾವಿದರು ಮಾಡುವ ಕಸರತ್ತು ಅಷ್ಟಿಷ್ಟಲ್ಲ. ನಾಯಕ ನಟರು ಜಿಮ್, ವರ್ಕೌಟ್ ಮಾಡಿ ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸುವುದು ಇದೆ. ಸದ್ಯ ಇದೇ ವಿಚಾರ ಕಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.
ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್, ಹೃತಿಕ್ ರೋಷನ್, ಶಾರುಖ್ ಖಾನ್, ಆಮೀರ್ ಖಾನ್, ತೆಲುಗಿನಲ್ಲಿ ಅಲ್ಲು ಅರ್ಜುನ್, ರಾಮ್‌ಚರಣ್, ತಾರಕ್, ತಮಿಳಿನಲ್ಲಿ ಸೂರ್ಯ, ವಿಶಾಲ್ ಇನ್ನು ಕನ್ನಡದಲ್ಲಿ ದುನಿಯಾ ವಿಜಯ್, ಸುದೀಪ್, ಪುನೀತ್ ರಾಜ್‌ಕುಮಾರ್ ಹೀಗೆ ಸಾಕಷ್ಟು ಸ್ಟಾರ್ ಕಲಾವಿದರು ದೇಹ ದಂಡಿಸಿ ತೆರೆಮೇಲೆ ಶರ್ಟ್‌ಲೆಸ್ ಆಗಿ ಸಿಕ್ಸ್‌ಪ್ಯಾಕ್ ಪ್ರದರ್ಶಿಸಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಮೊದಲು ಸಿಕ್ಸ್‌ಪ್ಯಾಕ್ ಮಾಡಿ ತೆರೆಮೇಲೆ ಕಾಣಿಸಿಕೊಂಡಿದ್ದು ಯಾರು? ಎನ್ನುವ ಚರ್ಚೆ ಇದೀಗ ಶುರುವಾಗಿದೆ. ಅದಕ್ಕೆ ಕಾರಣ ನಟ ಸೂರ್ಯ ಅವರ ತಂದೆ ಶಿವಕುಮಾರ್ ನೀಡಿದ ಹೇಳಿಕೆ. 'ರೆಟ್ರೋ' ಚಿತ್ರದ ಪ್ರಚಾರದ ವೇಳೆ ವೇದಿಕೆಯಲ್ಲಿ ಮಗನ ಶ್ರಮದ ಬಗ್ಗೆ ಮಾತನಾಡುತ್ತಾ ಶಿವಕುಮಾರ್ ಈ ವಿಷಯ ಪ್ರಸ್ತಾಪಿಸಿದ್ದಾರೆ. ಸೂರ್ಯಗೂ ಮುನ್ನ ತಮಿಳು ಚಿತ್ರರಂಗದಲ್ಲಿ ಸಿಕ್ಸ್‌ಪ್ಯಾಕ್ ಮಾಡಿದ್ದ ಹೀರೊ ಯಾರಿದ್ದಾರೆ ಹೇಳಿ? ಎಂದು ಅವರು ಕೇಳಿದ್ದರು.
ಸೂರ್ಯ ತಂದೆ ಶಿವಕುಮಾರ್ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬೇರೆ ನಟರ ಅಭಿಮಾನಿಗಳು ಈ ಬಗ್ಗೆ ಚಕಾರ ಎತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಳೆದೊಂದು ವಾರದಿಂದ ಈ ವಿಚಾರ ಭಾರೀ ಚರ್ಚೆ ಆಗುತ್ತಿದೆ. ಇಷ್ಟು ದಿನ ಇದು ಬರೀ ಅಭಿಮಾನಿಗಳ ನಡುವಿನ ಚರ್ಚೆ ಮಾತ್ರ ಆಗಿತ್ತು. ಆದರೆ ದಿಢೀರನೆ ನಟ ವಿಶಾಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹಾಗಾಗಿ ಈ ವಿವಾದ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.
ತಮಿಳು ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ಟ್ರೆಂಡ್ ಹುಟ್ಟುಹಾಕಿದ್ದು ಸೂರ್ಯ ಎನ್ನುವುದು ಅವರ ಅಭಿಮಾನಿಗಳ ವಾದ. 2008ರಲ್ಲಿ ಬಂದಿದ್ದ 'ವರಣಂ ಆಯಿರಂ' ಚಿತ್ರದಲ್ಲಿ ಸೂರ್ಯ ಮೊದಲ ಬಾರಿಗೆ ಸಿಕ್ಸ್ ಪ್ಯಾಕ್ ಪ್ರದರ್ಶಿಸಿ ಗಮನ ಸೆಳೆದಿದ್ದರು. ಆದರೆ ಅದಕ್ಕೂ ಮುನ್ನ ವಿಶಾಲ್ 'ಸತ್ಯಂ' ಚಿತ್ರದಲ್ಲಿ ಸಿಕ್ಸ್ ಪ್ಯಾಕ್ಸ್ ಆಬ್ಸ್ ತೋರಿಸಿದ್ದರು ಎನ್ನುವುದು ಮತ್ತೆ ಕೆಲವರ ವಾದ.

ಸದ್ಯ ಸಂದರ್ಶನವೊಂದರಲ್ಲಿ ವಿಶಾಲ್ ಅವರಿಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಉತ್ತರಿಸಿರುವ ವಿಶಾಲ್, "ನನಗೂ, ಸೂರ್ಯಗೂ ಮುನ್ನ ಧನುಷ್ ಮೊದಲ ಬಾರಿ ಸಿಕ್ಸ್ ಪ್ಯಾಕ್ ಆಬ್ಸ್ ಮಾಡಿ ತೋರಿಸಿದ್ದರು. 2007ರಲ್ಲಿ ಬಂದಿದ್ದ 'ಪೊಲ್ಲಾದವನ್' ಚಿತ್ರದಲ್ಲಿ ನಾವು ಅದನ್ನು ನೋಡಬಹುದು. ಆ ಬಳಿಕ 2008ರಲ್ಲಿ ನಾನು ಸಿಕ್ಸ್‌ಪ್ಯಾಕ್ ಮಾಡಿದ್ದೆ. ಬಳಿಕ 2012ರಲ್ಲಿ ಬಂದ 'ಮದಗಜ' ಚಿತ್ರದಲ್ಲೂ ಅದನ್ನು ಮಾಡಿದ್ದೆ" ಎಂದು ವಿಶಾಲ್ ಪ್ರತಿಕ್ರಿಯಿಸಿದ್ದಾರೆ.
ಧನುಷ್, ವಿಶಾಲ್ ಹಾಗೂ ಸೂರ್ಯ ಬಳಿಕ ಸಿಂಬು, ಅರುಣ್ ವಿಜಯ್, ವಿಕ್ರಂ, ಮಾಧವನ್, ಸೂರಿ, ಭರತ್, ನಕುಲ್ ಜಯದೇವ್, ಆರ್ಯ, ಅಥರ್ವ ಹೀಗೆ ಸಾಕಷ್ಟ ಕಲಾವಿದರು ಸಿಕ್ಸ್ ಪ್ಯಾಕ್ ಆಬ್ಸ್ ಪ್ರದರ್ಶಿಸಿ ಮೋಡಿ ಮಾಡಿದ್ದರು. ಸದ್ಯ ಸೂರ್ಯ ನಟನೆಯ 'ರೆಟ್ರೋ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 'ರೆಟ್ರೋ' ಚಿತ್ರದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಮುಂದಿನ ವಾರ ಸಿನಿಮಾ ತೆರೆಗೆ ಬರಲಿದೆ. ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಟೈಟಲ್‌ಗೆ ತಕ್ಕಂತೆ ಚಿತ್ರದಲ್ಲಿ 89, 90ರ ದಶಕದ ಕಥೆಯನ್ನು ಹೇಳಲಾಗ್ತಿದೆ. ಭಿನ್ನ ವಿಭಿನ್ನ ಗೆಟಪ್‌ಗಳಲ್ಲಿ ಸೂರ್ಯ ನಟಿಸಿದ್ದಾರೆ.


Click it and Unblock the Notifications











