ಮತ್ತೆ ಸಾರ್ವಜನಿಕವಾಗಿ ಕಾಣಿಸಿಕೊಂಡ ತಮಿಳು ನಟ ವಿಶಾಲ್; ಈಗ ಹೇಗಿದೆ ಆರೋಗ್ಯ?
ಇತ್ತೀಚೆಗೆ ತಮಿಳು ನಟ ವಿಶಾಲ್ ಆರೋಗ್ಯ ಸಮಸ್ಯೆ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಡೆಂಗ್ಯು ಜ್ವರದಿಂದ ಬಳಲಿದ್ದ ನಟ ಕೊಂಚ ಚೇತರಿಸಿಕೊಂಡಿದ್ದಾರೆ. ಕಳೆದ ಭಾನುವಾರ 'ಮದಗಜರಾಜ' ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ವಿಶಾಲ್ ಅವರನ್ನು ನೋಡಿದವರು ಶಾಕ್ ಆಗಿದ್ದರು.
ಜ್ವರದಿಂದ ಬಹಳ ಬಳಲಿದ್ದ ನಟ ವಿಶಾಲ್ ನಿಲ್ಲಲು ಕೂರಲು ಕಷ್ಟಪಟ್ಟಿದ್ದರು. ಮೈ ನಡುಗುತ್ತಿತ್ತು, ನಾಲಿಗೆ ತೊದಲುತ್ತಿತ್ತು. ಮೈಕ್ ಹಿಡಿದು ಮಾತನಾಡಲು ಕಷ್ಟಪಟ್ಟಿದ್ದರು. ಖಡಕ್ ನಟನಿಗೆ ಏನಾಯ್ತು ಎಂದು ಅಭಿಮಾನಿಗಳು, ಆಪ್ತರು ಆತಂಕಗೊಂಡಿದ್ದರು. ಕಾರ್ಯಕ್ರಮ ಮುಗಿದ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿತ್ತು. ವಿಶ್ರಾಂತಿ ಪಡೆದು ಇದೀಗ ವಿಶಾಲ್ ಚೇತರಿಸಿಕೊಂಡಿದ್ದಾರೆ.

ಅಂದು ಕಾರ್ಯಕ್ರಮದಲ್ಲಿ ವಿಶಾಲ್ ಜ್ವರ, ಚಳಿಯಿಂದ ಪ್ರಾಯಾಸಪಟ್ಟಿದ್ದ ವೀಡಿಯೋಗಳು ವೈರಲ್ ಆಗಿತ್ತು. ಇನ್ನು ವಿಶಾಲ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರೂ ಗಾಯಕಿ ಸುಚಿತ್ರಾ ವಂಗ್ಯವಾಡಿದ್ದರು. ತಂದೆ ಜಿಕೆ ರೆಡ್ಡಿ ಫಿಲ್ಮಿಬೀಟ್ ಜೊತೆ ಮಾತನಾಡಿ ಮಗನ ಆರೋಗ್ಯ ಪರಿಸ್ಥಿತಿ ಬಗ್ಗೆ ತಿಳಿಸಿದ್ದರು. ಆಪ್ತರು ಕೂಡ ಈ ಕುರಿತು ಮಾತನಾಡಿದ್ದರು.
12 ವರ್ಷಗಳ ಬಳಿಕ ವಿಶಾಲ್ ನಟಿಸಿದ 'ಮದಗಜರಾಜ' ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ತಾವೇ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. ಹಾಗಾಗಿ ಅಂದು ಜ್ವರದ ನಡುವೆಯೂ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಸದ್ಯ ಸಿನಿಮಾ ಬಿಡುಗಡೆ ಆಗಿದೆ. ಚಿತ್ರದ ಸ್ಕ್ರೀನಿಂಗ್ ವೇಳೆ ವಿಶಾಲ್ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಬಳಿಕ ಮಾತನಾಡಿದ್ದಾರೆ. ಈ ವೇಳೆ ತಮ್ಮ ಆರೋಗ್ಯದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.
"ನನ್ನ ಬಗ್ಗೆ ಸಾಕಷ್ಟು ಚರ್ಚೆ ನಡೀತು. ಆದರೆ ಅದೆಲ್ಲಾ ಸುಳ್ಳಾಗಿದೆ. ಯಾರ್ಯಾರೋ ಏನೋನೊ ಮಾತನಾಡಿದರು. 3 ತಿಂಗಳ ಕಾಲ ಚಿತ್ರೀಕರಣಕ್ಕೆ ಹೋಗೋಕೆ ಆಗೊಲ್ಲ ಎಂದರು, ನನ್ನ ಕೈ ನಡುಗುತ್ತಿದೆ ಅಂತೆಲ್ಲಾ ವಿಡಿಯೋ ವೈರಲ್ ಮಾಡಿದ್ದರು, ಈಗ ನೋಡಿ ಚೆನ್ನಾಗಿಯೇ ಇದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ" ಎಂದು ವಿಶಾಲ್ ತಿಳಿಸಿದ್ದಾರೆ.
ಅಂದು ಪ್ರೀ ರಿಲೀಸ್ ಈವೆಂಟ್ ಬಳಿಕ ನಟ ವಿಶಾಲ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಬಳಿಕ ಸಿನಿಮಾ ರಿಲೀಸ್ ವೇಳೆ ಕ್ಯಾಮರಾ ಮುಂದೆ ಬಂದಿದ್ದಾರೆ. ನಟಿ ಖುಷ್ಬು ಮಾತನಾಡಿ ವಿಶಾಲ್ ಡೆಂಗಿ ಜ್ವರದಿಂದ ಬಳಲುತ್ತಿದ್ದರು. 103 ಡಿಗ್ರಿ ಜ್ವರ ಇತ್ತು. ಡ್ರಿಪ್ಸ್ ಹಾಕಿಸಿದ್ವಿ ಎಂದು ತಿಳಿಸಿದ್ದರು.
'ಮದಗಜರಾಜ' ಚಿತ್ರಕ್ಕೆ ಸುಂದರ್ .ಸಿ ಆಕ್ಷನ್ ಕಟ್ ಹೇಳಿದ್ದಾರೆ. ಅಂಜಲಿ ಹಾಗೂ ವರಲಕ್ಷ್ಮಿ ಶರತ್ ಕುಮಾರ್ ನಾಯಕಿಯರಾಗಿ ಮಿಂಚಿದ್ದಾರೆ. ಕಾನೂನು ಹಾಗೂ ಆರ್ಥಿಕ ಸಮಸ್ಯೆಯಿಂದ ಸಿನಿಮಾ 12 ವರ್ಷ ತಡವಾಗಿ ಪ್ರೇಕ್ಷಕರ ಮುಂದೆ ಬಂದಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಗೆಲ್ಲುತ್ತಾ ಕಾದು ನೋಡಬೇಕಿದೆ.
ಆಕ್ಷನ್ ಹೀರೊ ಆಗಿ ಕಾಲಿವುಡ್ ಅಂಗಳದಲ್ಲಿ ವಿಶಾಲ್ ಮನೆ ಮಾತಾಗಿದ್ದಾರೆ. ರಿಸ್ಕಿ ಸ್ಟಂಟ್ಸ್ ಮೂಲಕ ಗಮನ ಸೆಳೆದಿದ್ದಾರೆ. ಚಿತ್ರದ ಆಕ್ಷನ್ ಸನ್ನಿವೇಶಗಳ ಚಿತ್ರೀಕರಣದ ವೇಳೆ ಅವರು ಗಾಯಗೊಂಡಿರುವುದು ಇದೆ. ಒಟ್ಟಾರೆ ತಮ್ಮ ನೆಚ್ಚಿನ ನಟ ಚೇತರಿಸಿಕೊಂಡಿರುವುದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ನಟ ವಿಶಾಲ್ 47 ವರ್ಷ ವಯಸ್ಸಾದರೂ ಇನ್ನು ಮದುವೆ ಆಗಿಲ್ಲ. ಈ ಹಿಂದೆ ಅನಿಶಾ ಅಲ್ಲ ಎಂಬಾಕೆಯನ್ನು ಪ್ರೀತಿಸಿ ಮದುವೆ ಆಗಲು ಬಯಸಿದ್ದರು. ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಬಳಿಕ ಅದು ಮುರಿದು ಬಿದ್ದಿತ್ತು. ಇತ್ತೀಚೆಗೆ ವಿಶಾಲ್ ಪರಿಸ್ಥಿತಿ ಬಗ್ಗೆ ಸ್ನೇಹಿತ ನಟ ಜಯಂ ರವಿ ಮಾತನಾಡಿದ್ದರು. ಇದು ವಿಶಾಲ್‌ಗೆ ಕೆಟ್ಟ ಸಮಯ, ಅದನ್ನೆಲ್ಲಾ ಮೀರಿ ಹೊರ ಬರುವ ನಿರೀಕ್ಷೆಯಿದೆ ಎಂದಿದ್ದರು.


Click it and Unblock the Notifications











