ಸೆ* ಕ್ರಿಮಿನಲ್ ಪ್ರಜ್ವಲ್ ರೇವಣ್ಣ; ಬಿಜೆಪಿಗೆ ನಾಚಿಕೆಯಾಗಬೇಕು; ನಟಿ ಕಸ್ತೂರಿ ಆಕ್ರೋಶ
ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಆರೋಪ ಭಾರೀ ಕೋಲಹಲಕ್ಕೆ ಕಾರಣವಾಗಿದೆ. ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಯೂ ಆಗಿರುವ ಪ್ರಜ್ವಲ್ ರೇವಣ್ಣನವರ ಹಗರಣ ದೇಶಾದ್ಯಂತ ಸುದ್ದಿ ಆಗುತ್ತಿದೆ. ಈಗಾಗಲೇ ಜೆಡಿಎಸ್ ಪಕ್ಷದಿಂದಲೂ ಪ್ರಜ್ವಲ್ ರೇವಣ್ಣ ಉಚ್ಛಾಟನೆಯಾಗಿದೆ.
ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಸರ್ಕಾರ ಎಸ್‌ಐಟಿ ತಂಡ ರಚಿಸಿದೆ. ವೀಡಿಯೋ ಲೀಕ್ ಆಗುತ್ತಿದ್ದಂತೆ ಸಂಸದ ಪ್ರಜ್ವಲ್ ವಿದೇಶಕ್ಕೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ರೇವಣ್ಣಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಸಲು ಎಸ್‌ಐಟಿ ಮುಂದಾಗಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗದಿದ್ದರೆ ಲುಕ್ಔಟ್ ನೋಟಿಸ್ ನೀಡಿ ಬಂಧಿಸುವ ಸಾಧ್ಯತೆಯಿದೆ.

ಭಾರೀ ಚರ್ಚೆಗೆ ಗ್ರಾಸವಾಗಿರುವ ಪ್ರಜ್ವಲ್ ರೇವಣ್ಣ ರಾಸಲೀಲೆ ಆರೋಪ ಪ್ರಕರಣದ ಬಗ್ಗೆ ಈಗಾಗಲೇ ನಟ ಪ್ರಕಾಶ್ ರಾಜ್ ಮಾತನಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿ ಕಾರಿದ್ದಾರೆ. ಇದೀಗ ತಮಿಳು ನಟಿ ಕಸ್ತೂರಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಟ್ವೀಟ್ ಮಾಡಿ ಕುಟುಕಿದ್ದಾರೆ. ಬಿಜೆಪಿ ಇದನ್ನು ಖಂಡಿಸಿ ಮೈತ್ರಿ ಬಿಟ್ಟು ಹೊರ ಬರದಿದ್ದರೆ ಮೇ 7ರ ಚುನಾವಣೆ ಅವರ ವಿರುದ್ಧವಾಗಿರುತ್ತದೆ ಎಂದಿದ್ದಾರೆ.
"ಇದು ಜೆಡಿ(ಎಸ್) ಅಗ್ರಶ್ರೇಣಿ. ಮಾಜಿ ಪ್ರಧಾನಿ ದೇವೇಗೌಡರು ಕರ್ನಾಟಕದಲ್ಲಿ ಮೊದಲ ಬಿಜೆಪಿ ಸರ್ಕಾರವನ್ನು ಉರುಳಿಸಿದರು. ಅವರ ಪುತ್ರ ಕುಮಾರಸ್ವಾಮಿ ತನ್ನ ಮಗನ ವಯಸ್ಸಿಗಿಂತ ಚಿಕ್ಕ ನಟಿಯನ್ನು 2ನೇ ಮದುವೆ ಆಗಿದ್ದರು. ಈಗ ಪ್ರಜ್ವಲ್ ರೇವಣ್ಣ ಸರದಿ. ಸೆ* ಕ್ರಿಮಿನಲ್. ಸಂಸ್ತ್ರಸ್ತೆಯರ ಸಾವಿರಾರು ವಿಡಿಯೋಗಳು ಸಿಕ್ಕಿವೆ"
"ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಬಲಪಡಿಸುವ ಪ್ರಯತ್ನದಲ್ಲಿ ಇಂತಹವರೊಟ್ಟಿಗೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಬಿಜೆಪಿಗೆ ನಾಚಿಕೆಯಾಗಬೇಕು. ಇಂತಹವರ ಪಕ್ಕದಲ್ಲಿ ನಿಂತು ಮೋದಿ ತಮ್ಮ ಬ್ರ್ಯಾಂಡ್ ಅನ್ನು ನಾಶಪಡಿಸಿಕೊಳ್ಳುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಅಪರಾಧಗಳ ಬಗ್ಗೆ ಜೆಡಿಎಸ್‌ಗೆ ಗೊತ್ತಿತ್ತು ಎನ್ನಲಾಗ್ತಿದೆ. ಬಿಜೆಪಿ ಅವರನ್ನು ಖಂಡಿಸಿ ಈ ಮೈತ್ರಿಯಿಂದ ಹೊರಬರದ ಹೊರತು, ಮೇ 7ರ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ" ಎಂದು ನಟಿ ಕಸ್ತೂರಿ ಟ್ವೀಟ್ ಮಾಡಿದ್ದಾರೆ.
ತಮಿಳು ನಟಿ ಕಸ್ತೂರಿ ಶಂಕರ್ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ನಟನೆಯ 'ಜಾಣ' ಸಿನಿಮಾ ಮೂಲಕ ಆಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ಹಬ್ಬ', 'ಒನ್‌ಮ್ಯಾನ್ ಆರ್ಮಿ', 'ತುತ್ತಾ ಮುತ್ತಾ', 'ಪ್ರೇಮಕ್ಕೆ ಸೈ' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತಮ್ಮ ಬೋಲ್ಡ್ ಕಾಮೆಂಟ್‌ಗಳಿಗೆ ಆಕೆ ಸದಾ ಸುದ್ದಿಯಲ್ಲಿ ಇರುತ್ತಾರೆ.
ಈ ಹಿಂದೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲೂ ತಮಿಳುನಾಡನ್ನು ಬೆಂಬಲಿಸಿ ನಟಿ ಕಸ್ತೂರಿ ಕರ್ನಾಟಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.


Click it and Unblock the Notifications










