"ಇಷ್ಟು ದಿನ ಹೋಗಲಿ ಅಂತ ಸೈಲೆಂಟ್ ಆಗಿದ್ದೆ.. ಯಾಕೋ ಅತಿಯಾಯಿತು"; ನಟಿ ಸಿಮ್ರಾನ್ ಗರಂ
ಬಹುಭಾಷಾ ನಟಿ ಸಿಮ್ರಾನ್ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ಆಕೆಯ ಸಹೋದರಿ ಕೂಡ ಕನ್ನಡ ಚಿತ್ರಕ್ಕೆ ಬಣ್ಣ ಹಚ್ಚಿದ್ದರು. ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಸಿಮ್ರಾನ್ ಮೋಡಿ ಮಾಡಿದ್ದರು. ಕೆಲವೊಮ್ಮೆ ಗ್ಲಾಮರ್ ಬೊಂಬೆಯಾಗಿಯೂ ತೆರೆಗೆ ಮಿಂಚಿದ್ದರು.
ವಯಸ್ಸಾಗುತ್ತಿದ್ದಂತೆ ಸಿಮ್ರಾನ್ ನಾಯಕಿ ಪಾತ್ರಗಳನ್ನು ಬಿಟ್ಟು ಪೋಷಕ ಪಾತ್ರಗಳತ್ತ ಮುಖ ಮಾಡಿದರು. ಈಗ ಕೂಡ ನಾಲ್ಕೈದು ಸಿನಿಮಾಗಳಲ್ಲಿ ಆಕೆ ನಟಿಸುತ್ತಿದ್ದಾರೆ. ಆದರೆ ಕಾರಣಾಂತರಗಳಿಂದ ಅವೆಲ್ಲಾ ತಡವಾಗುತ್ತಿದೆ. ಇಂತಹ ಸಮಯದಲ್ಲೇ ಆಕೆಯ ಮುಂದಿನ ಸಿನಿಮಾಗಳ ಬಗ್ಗೆ ಒಂದಷ್ಟು ಊಹಾಪೋಹ, ವದಂತಿಗಳು ಹರಿದಾಡುತ್ತಿತ್ತು. ಆ ಸ್ಟಾರ್ ನಟನ ಜೊತೆ ನಟಿಸ್ತಾರೆ, ಈ ಚಿತ್ರಕ್ಕೆ ನಾಯಕಿ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿತ್ತು.

ಅಧಿಕೃತ ಮಾಹಿತಿ ಇಲ್ಲದೇ ಸುಳ್ಳು ಸುದ್ದಿ ಹರಡುವವರ ವಿರುದ್ಧ ನಟಿ ಸಿಮ್ರಾನ್ ಕೆಂಡಾ ಮಂಡಲವಾಗಿದ್ದಾರೆ. ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. "ಯಾರೋ ಹೇಳುವುದನ್ನು ನನ್ನ ಸ್ನೇಹಿತರು ನಂಬುವುದು ನೋಡಿ ನನಗೆ ನೋವಾಗುತ್ತಿದೆ. ಇಲ್ಲಿವರೆಗೆ ನಾನು ಸೈಲೆಂಟ್ ಆಗಿ ಇದ್ದೆ. ಆದರೆ ಈ ಹೇಳ್ತಿದ್ದೀನಿ. ಯಾವ ದೊಡ್ಡ ಹೀರೊ ಜೊತೆ ನಟಿಸೋ ಆಸೆ ನನಗಿಲ್ಲ. ಈಗಾಗಲೇ ಅವರೊಟ್ಟಿಗೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೀನಿ. ಈಗ ನನ್ನ ಲಕ್ಷ್ಯ ಬೇರೆ" ಎಂದು ಸಿಮ್ರಾನ್ ಬರೆದುಕೊಂಡಿದ್ದಾರೆ.
"ವರ್ಷಗಳಿಂದ ನನ್ನ ಹೆಸರನ್ನು ಯಾರ್ಯಾರ ಜೊತೆಗೆ ಲಿಂಕ್ ಮಾಡಿ ಪೋಸ್ಟ್ ಮಾಡುತ್ತಿದ್ದಾಗ ನಾನು ಮೌನವಾಗಿದ್ದೆ. ಆದರೆ ಸ್ವಾಭಿಮಾನ ಇದೆ. ಅದಕ್ಕೆ ಹೇಳುತ್ತಿದ್ದೇನೆ ಇನ್ನಾದರೂ ನಿಲ್ಲಿಸಿ. ಈ ವದಂತಿ ನಿಲ್ಲಿಸಲು ಯಾರು ಪ್ರಯತ್ನಿಸಲಿಲ್ಲ. ಕ್ಲಾರಿಟಿ ತೆಗೆದುಕೊಳ್ಳಲಿಲ್ಲ. ನನ್ನ ಭಾವನೆಗಳ ಬಗ್ಗೆ ಯಾರೂ ಕಾಳಜಿ ವಹಿಸಲಿಲ್ಲ"
"ನನ್ನ ಹೆಸರಿನ ಲಾಭವನ್ನು ನಾನು ಎಂದಿಗೂ ತೆಗೆದುಕೊಂಡಿಲ್ಲ; ನಾನು ಯಾವಾಗಲೂ ಸರಿಯಾದದ್ದಕ್ಕಾಗಿ ದೃಢವಾಗಿ ನಿಂತಿದ್ದೇನೆ. ಇಂಡಸ್ಟ್ರಿಯವರಿಂದ ನಾನು ಅದನ್ನೇ ನಿರೀಕ್ಷಿಸುತ್ತಿದ್ದೇನೆ. ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸುವವರು ನನಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕು" ಎಂದು ನಟಿ ಸಿಮ್ರಾನ್ ಆಗ್ರಹಿಸಿದ್ದಾರೆ.
ದಳಪತಿ69 ಚಿತ್ರದಲ್ಲಿ ಸಿಮ್ರಾನ್ ನಟಿಸುತ್ತಾರೆ ಎಂದು ಇತ್ತೀಚೆಗೆ ಗುಲ್ಲಾಗಿತ್ತು. ಇದು ನಟ ವಿಜಯ್ ಅಭಿನಯದ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದೆ. ಸದ್ಯ 'ತಮಿಳಗ ವೆಟ್ರಿ ಕಳಗಂ' ಎನ್ನುವ ಪಕ್ಷ ಕಟ್ಟಿ ದಳಪತಿ ರಾಜಕೀಯರಂಗಕ್ಕೆ ಧುಮುಕುತ್ತಿದ್ದಾರೆ. ಹಾಗಾಗಿ ದಳಪತಿ69 ಅವರ ಕೊನೆ ಸಿನಿಮಾ ಎಂದು ಹೇಳಲಾಗುತ್ತಿದೆ.
ಹೆಚ್. ವಿನೋದ್ ನಿರ್ದೇಶನದ ಪೊಲಿಟಿಕಲ್ ಥ್ರಿಲ್ಲರ್ ದಳಪತಿ69 ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಚಿತ್ರದ ಸ್ಟಾರ್‌ಕಾಸ್ಟ್ ಹಾಗೂ ಟೆಕ್ನಿಕಲ್ ಟೀಂ ಬಗ್ಗೆ ಭಾರೀ ಚರ್ಚೆ ನಡೀತಿದೆ. ಚಿತ್ರದಲ್ಲಿ ಮೋಹನ್ ಲಾಲ್ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿತ್ತು. ಇದರಲ್ಲಿ ನಟಿ ಸಿಮ್ರಾನ್ ಹೆಸರು ಕೇಳಿಬಂದಿತ್ತು. ಚಿತ್ರದ ಪ್ರಮುಖ ಪಾತ್ರದಲ್ಲಿ ಆಕೆ ನಟಿಸುತ್ತಾರೆ ಎಂದು ವರದಿ ಆಗಿತ್ತು. ಇದೇ ಕಾರಣಕ್ಕೆ ಸಿಮ್ರಾನ್ ಈಗ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.
'ಯೂತ್', 'ತುಲ್ಲದ ಮನಮುಂ ತುಳ್ಳಂ', 'ಪ್ರಿಯಮಾನವಳೇ', 'ನೇರುಕ್ಕು ನೇರ್', 'ಉದಯ' ಹೀಗೆ ಕೆಲ ಸಿನಿಮಾಗಳಲ್ಲಿ ದಳಪತಿ ವಿಜಯ್ ಜೊತೆ ಸಿಮ್ರಾನ್ ನಟಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಹಾಗಾಗಿ ಆಕೆ ವಿಜಯ್ ಚಿತ್ರದಲ್ಲಿ ನಟಿಸುವುದು ದೊಡ್ಡ ವಿಷಯವೇನಲ್ಲ. ಅದೇ ಕಾರಣಕ್ಕೆ ಯಾವುದೇ ಆಧಾರವಿಲ್ಲದೇ ಹರಡುತ್ತಿರುವ ವದಂತಿಗಳ ಬಗ್ಗೆ ಸಿಮ್ರಾನ್ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











