ಸ್ನೇಹಿತನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು
ಚಿತ್ರರಂಗದಲ್ಲಿ ವಿವಾದಗಳು ಹೊಸದೇನು ಅಲ್ಲ. ಆರೋಪ ಪ್ರತ್ಯಾರೋಪಗಳು ಸಹಜ. ಬಹಳ ಆತ್ಮೀಯ ಸ್ನೇಹಿತರಾಗಿದ್ದವರೇ ಬಹಳಿ ಶತ್ರುಗಳಾದ ಬದಲಾದ ಉದಾಹರಣೆಗಳು ಸಾಕಷ್ಟು ಇವೆ. ತಮಿಳು ಹಾಸ್ಯ ನಟ ವಡಿವೇಲು ಸಿನಿರಸಿಕರಿಗೆ ಚಿರಪರಿಚಿತ ಹೆಸರು.
ಇತ್ತೀಚಿನ ವರ್ಷಗಳಲ್ಲಿ ಹಾಸ್ಯನಟ ವಡಿವೇಲು ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಆಗೊಮ್ಮೆ ಈಗೊಮ್ಮೆ ಬಣ್ಣ ಹಚ್ಚುತ್ತಾರೆ. ನೂರಾರು ಸಿನಿಮಾಗಳಲ್ಲಿ ಹಾಸ್ಯನಟನಾಗಿ ಮಿಂಚಿರುವ ಅವರು ಕಳೆದ ವರ್ಷ 'ಮಾಮನನ್' ಚಿತ್ರದಲ್ಲಿ ಗಂಭೀರ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು. ಇತ್ತೀಚೆಗೆ ಅವರು ನಟಿಸುವುದು ಕಮ್ಮಿ ಆಗಿದ್ದರು ಅವರ ಫೋಟೊ, ವೀಡಿಯೋ ಮೀಮ್ಸ್ ರೂಪದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.

ವಿವಾದಗಳಿಂದಲೂ ವಡಿವೇಲು ಆಗಾಗ್ಗೆ ಸುದ್ದಿ ಆಗುತ್ತಿರುತ್ತಾರೆ. ಸದ್ಯ ತಮ್ಮ ಸಹನಟನ ವಿರುದ್ಧವೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಮತ್ತೊಬ್ಬ ತಮಿಳು ಹಾಸ್ಯನಟ ಕೆ. ಆರ್ ಸಿಂಗಮುತ್ತು ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಯೂಟ್ಯೂಬ್ ಸಂದರ್ಶನಗಳಲ್ಲಿ ತಮ್ಮ ಮೇಲೆ ಮಾಡಿದ ಆರೋಪಗಳಿಗೆ ಪ್ರತಿಯಾಗಿ ಮಾನಹಾನಿಗೆ 5 ಕೋಟಿ ರೂ. ಭರಿಸುವಂತೆ ಕೇಳಿದ್ದಾರೆ.
ಹಾಸ್ಯನಟ ವಡಿವೇಲು ಸಲ್ಲಿಸಿದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ಎಂ.ಟಿ. ಟಿಕಾ ರಾಮನ್ ಅವರು ಅಂಗೀಕರಿಸಿದ್ದಾರೆ. ಇನ್ನು ವಡಿವೇಲು ತಮ್ಮ ಅರ್ಜಿಯಲ್ಲಿ, ಸಿಂಗಮುತ್ತು ಅವರ ವಿರುದ್ಧ ಯಾವುದೇ ಸುಳ್ಳು ಅಥವಾ ಮಾನಹಾನಿಕರ ಹೇಳಿಕೆಗಳನ್ನು ನೀಡದಂತೆ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.
ಅರ್ಜಿಯನ್ನು ಅಂಗೀಕರಿಸಿರುವ ಕೋರ್ಟ್ ಪ್ರತಿಕ್ರಿಯೆ ನೀಡುವಂತೆ ಸಿಂಗಮುತ್ತು ಅವರಿಗೆ ಸೂಚಿಸಿದೆ. ಸಿಂಗಮುತ್ತು ಜನವರಿ 16 ಹಾಗೂ ಫೆಬ್ರವರಿ 11ರಂದು ಯೂಟ್ಯೂಬ್ ಚಾನಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ನನ್ನ ವೈಯಕ್ತಿಕ ಹಾಗೂ ವೃತ್ತಿಪರ ಜೀವನದ ಬಗ್ಗೆ ಸುಳ್ಳು ಹಾಗೂ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ವಡಿವೇಲು ತಿಳಿಸಿದ್ದಾರೆ.

ತಮ್ಮ ಮೇಲಿನ ಆರೋಪಗಳ ಬಗ್ಗೆ ಮಾರ್ಚ್ 19 ರಂದು ಸಿಂಗಮುತ್ತು ಮತ್ತು ಯೂಟ್ಯೂಬ್ ಚಾನೆಲ್‌ಗಳಿಗೆ ವಡಿವೇಲು ಲೀಗಲ್ ನೋಟಿಸ್ ನೀಡಿದರು. ಕ್ಷಮೆಯಾಚಿಸುವಂತೆ ಹಾಗೂ ಹೇಳಿಕೆ ಹಿಂಪಡೆಯುವಂತೆ ಒತ್ತಾಯಿಸಿದರು. ಆದರೆ ಸಿಂಗಮುತ್ತು ಇದು ತಮ್ಮ ವಾಕ್ ಸ್ವಾತಂತ್ರ್ಯದ ಹಕ್ಕು ಎಂದು ಪ್ರತಿಪಾದಿಸಿದ್ದರು. ಬಳಿಕ ವಡಿವೇಲು ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದಾರೆ.
ಕಳೆದ 25 ವರ್ಷಗಳಿಂದ ನಾನು, ಸಿಂಗಮುತ್ತು ಜೊತೆ ಸಿನಿಮಾಗಳಲ್ಲಿ ನಟಿಸಿದ್ದೇನೆ. ನಮ್ಮಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ 2015ರಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಶುರುವಾಯಿತು. ಆ ಬಳಿಕ ತಮ್ಮ ವಿರುದ್ಧ ಸಿಂಗಮುತ್ತು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ವಡಿವೇಲು ತಿಳಿಸಿದ್ದಾರೆ.
1988ರಲ್ಲಿ 'ಎನ್ ತಂಗೈ ಕಲ್ಯಾಣಿ' ಎನ್ನುವ ಚಿತ್ರದ ಸಣ್ಣ ಪಾತ್ರದಲ್ಲಿ ವಡಿವೇಲು ನಟಿಸುವ ಮೂಲಕ ಚಿತ್ರರಂಗಕ್ಕೆ ಬಂದಿದ್ದರು. ತಮ್ಮ ಒಣಕಲು ದೇಹ, ವಿಭಿನ್ನ ಮ್ಯಾನರಿಸಂನಿಂದ ತಮಿಳು ಪ್ರೇಕ್ಷಕರ ಮನಗೆದ್ದರು. ನೋಡ ನೋಡುತ್ತಾ ಸಾಲು ಸಾಲು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ತಮಿಳಿನ ಬಹುಬೇಡಿಕೆಯ ನಟನಾಗಿ ಬೆಳೆದರು.
20 ವರ್ಷಗಳ ಹಿಂದೆ ತಮಿಳು ಚಿತ್ರರಂಗದಲ್ಲಿ ವಡಿವೇಲು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. ಅದ್ಯಾವ ಮಟ್ಟಿಗೆ ಅಂದ್ರೆ ತಮ್ಮ ಜೊತೆ ನಟಿಸಲು ಮೊದಲು ಹೋಗಿ ವಡಿವೇಲು ಕಾಲ್‌ಶೀಟ್ ತಗೊಂಡುಬನ್ನಿ ಎಂದು ರಜನಿಕಾಂತ್ ನಿರ್ಮಾಪಕರಿಗೆ ಹೇಳುತ್ತಿದ್ದರಂತೆ. ಅಂದರೆ ವಡಿವೇಲು ಕಾಲ್‌ಶೀಟ್ ಸಿಗುವುದು ಅಷ್ಟು ಕಷ್ಟವಾಗಿತ್ತು.


Click it and Unblock the Notifications











