ಗುರು ಭಾರತಿರಾಜ ಹಿಂದೆಯೇ ಎದ್ದು ನಡೆದ ಶಿಷ್ಯ ; ತಮಿಳಿನ ಖ್ಯಾತ ನಿರ್ದೇಶಕ ಕೆ. ಭಾಗ್ಯರಾಜ್ ನಿಧನ
ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಆದ ಸೇವೆಯನ್ನು ಸಲ್ಲಿಸಿದ ಅನೇಕ ತಾರೆಯರು ಒಬ್ಬರಾದ ಮೇಲೊಬ್ಬರಂತೆ ನಮ್ಮನ್ನು ಅಗಲುತ್ತಿದ್ದಾರೆ. ಧರ್ಮೇಂದ್ರ.. ಬಿ.ಸರೋಜಾ ದೇವಿ.. ಕೋಟಾ ಶ್ರೀನಿವಾಸ್ ರಾವ್.. ಧೀರಜ್ ಕುಮಾರ್.. ಮುಖುಲ್ ದೇವ್.. ಫಿಶ್ ವೆಂಕಟ್.. ದಿನೇಶ್ ಮಂಗಳೂರು.. ಯಶವಂತ ಸರದೇಶಪಾಂಡೆ.. ರಾಜು ತಾಳಿಕೋಟೆ.. ಪಂಕಜ್ ಧೀರ್.. ಸತೀಶ್ ಶಾ.. ಗೋವರ್ಧನ್ ಅಸ್ರಾನಿ.. ಅಭಿನಯ್.. ಝರೀನ್ ಖಾನ್..ಕಾಮಿನಿ ಕೌಶಾಲ್.. ಆಶಾ ಭೋಸ್ಲೆ.. ಭರತ್ ಕಪೂರ್.. ಭರತ್ ಕಾಂತ್.. ಕೆ.ರಾಜನ್.. ದಿಲೀಪ್ ರಾಜ್.. ರಮಾಕಾಂತ್ ದಯಾಮ.. ಅನಿಕ್ ದತ್ತಾ.. ಸುಮನ್ ಕಲ್ಯಾಣ್‌ಪುರ್.. ಭಾರತಿರಾಜಾ..
ಹೀಗೆ ಭಾರತೀಯ ಚಿತ್ರರಂಗಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ ತಾರೆಯರನ್ನು ಒಬ್ಬರಾದ ಮೇಲೊಬ್ಬರಂತೆ ಚಿತ್ರರಂಗ ಕಳೆದ ಒಂದೂವರೆ ಎರಡು ವರ್ಷಗಳಲ್ಲಿ ಕಳೆದುಕೊಂಡಿದೆ. ಹೀಗಿರುವಾಗ ಇಂದು (ಜೂನ್ 27) ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಬರ ಸಿಡಿಲು ಬಡಿದಿದ್ದು, ತಮಿಳಿನ ಖ್ಯಾತ ಹಿರಿಯ ನಿರ್ದೇಶಕ ಮತ್ತು ನಟ ಕೆ.ಭಾಗ್ಯರಾಜ್ (73) ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆ.ಭಾಗ್ಯರಾಜ್ ಅವರ ಪೂರ್ಣ ಹೆಸರು ಕೃಷ್ಣಸ್ವಾಮಿ ಭಾಗ್ಯರಾಜ್. ತಮ್ಮ ಅಪೂರ್ವ ಕಥೆ ಹೇಳುವ ಶೈಲಿಯಿಂದಲೇ ಮನೆಮಾತಾಗಿದ್ದವರು ಇವರು. ತಮ್ಮ ಜೀವಿತಾವಧಿಯಲ್ಲಿ 25ಕ್ಕೂ ಅಧಿಕ ಚಿತ್ರಗಳನ್ನು ನಿರ್ದೇಶಿಸಿದ್ದ ಭಾಗ್ಯರಾಜ್ ತಮ್ಮ ಬತ್ತಳಿಕೆಯಿಂದ ''ಮುಂದಾನೈ ಮುಡಿಚ್ಚು'' ಅಂತಹ ಬ್ಲಾಕ್ ಬಸ್ಟರ್ ಚಿತ್ರವನ್ನು ನೀಡಿದ್ದರು. ''ಅಂದ 7 ನಾಟ್ಕಳ್''.. ''ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್''.. ''ಒರು ಕೈ ಓಸೈ'' ಇವರ ಕೆಲ ಖ್ಯಾತ ಚಿತ್ರಗಳು.
ಇನ್ನು ಈಗ ಆದರೆ ಒಂದು ಚಿತ್ರ ಮಾಡಿ ಎದೆಯುಬ್ಬಿಸಿಕೊಂಡು ಹಲವರು ನಡೆಯುತ್ತಾರೆ. ಹಿಂದಿ ಚಿತ್ರರಂಗಕ್ಕೆ ಅಪ್ಪಿ ತಪ್ಪಿ ಹೋದರೆ ಜಗ ಗೆದ್ದಂತೆ ವರ್ತಿಸುತ್ತಾರೆ. ಆದರೆ, ಕೆ.ಭಾಗ್ಯರಾಜ್ ಗೆದ್ದ ಮೇಲೆಯೂ ನೆಲದ ಮೇಲೆಯೇ ನಿಂತಿದ್ದವರು. ಆ ಕಾಲದಲ್ಲಿಯೇ ಕಲೆಗೆ ಭಾಷೆಯ ಗಡಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದ ಭಾಗ್ಯರಾಜ್ ಹಿಂದಿಯಲ್ಲಿ ''ಆಖಿರೀ ರಾಸ್ತಾ'' ಚಿತ್ರ ನಿರ್ದೇಶಿಸಿದ್ದರು. ಅಮಿತಾಬ್ ಬಚ್ಚನ್ ಈ ಚಿತ್ರದಲ್ಲಿ ದ್ವಿಪಾತ್ರವನ್ನು ನಿರ್ವಹಿಸಿದ್ದರು. ಜಯಪ್ರಧಾ ಮತ್ತು ಶ್ರೀದೇವಿ ನಾಯಕಿಯರಾಗಿದ್ದರು.
ಗುರುವಿನ ಹಿಂದೆ ಎದ್ದು ನಡೆದ ಶಿಷ್ಯ
ಕೆಲ ದಿನಗಳ ಹಿಂದೆಯಷ್ಟೇ ಭಾರತದ ಖ್ಯಾತ ನಿರ್ದೇಶಕ ಕೆ.ಭಾರತಿ ರಾಜ ನಿಧನರಾಗಿದ್ದರು. ಭಾಗ್ಯರಾಜ್ ನಿರ್ದೇಶನದ ಪಟ್ಟುಗಳನ್ನು ಇವರಿಂದಲೇ ಕಲಿತಿದ್ದರು. 1970-80ರ ದಶಕದಲ್ಲಿ ತಮಿಳು ಚಿತ್ರರಂಗ ದಿಕ್ಕು ಬದಲಿಸುವಲ್ಲಿ ಇವರ ಇಬ್ಬರ ಪಾತ್ರ ಮಹತ್ವದ್ದಾಗಿತ್ತು. ಭಾರತಿರಾಜ್ ನಿಧನರಾಗಿ ಇನ್ನೂ ಮೂರು ವಾರವೂ ಆಗಿಲ್ಲ. ಅಷ್ಟರಲ್ಲಿ ಗುರುವನ್ನು ಹಿಂಬಾಲಿಸಿಕೊಂಡು ಶಿಷ್ಯ ಭಾಗ್ಯರಾಜ್ ಕೂಡ ಎದ್ದು ನಡೆದಿದ್ದಾರೆ.
ಖುಷ್ಬೂ ಮಗಳ ಮದುವೆಯಲ್ಲಿ ಭಾಗಿಯಾಗಿದ್ದ ಭಾಗ್ಯರಾಜ್
ಎರಡು ದಿನಗಳ ಹಿಂದೆಯಷ್ಟೇ ಗೋವಾದಲ್ಲಿ ನಡೆದ ಖುಷ್ಭೂ ಮಗಳ ಮದುವೆ ಸಮಾರಂಭದಲ್ಲಿ ಕೆ.ಭಾಗ್ಯರಾಜ್ ಭಾಗವಹಿಸಿದ್ದರು. ಲವಲವಿಕೆಯಿಂದ ಇದ್ದರು. ಆರೋಗ್ಯವಂತರಾಗಿಯೇ ಇದ್ದರು. ಆದರೆ ಇಂದು (ಜೂನ್ 27) ಮುಂಜಾನೆ ಬೆಳಗಿನ ವಾಕ್ ಮುಗಿಸಿಕೊಂಡು ಬಂದ ನಂತರ ಹೃದಯಾಘಾತದಿಂದ ಭಾಗ್ಯರಾಜ್ ಕೊನೆಯುಸಿರೆಳೆದರು.
ಕನ್ನಡ ಚಿತ್ರರಂಗದ ಜೊತೆ ನಂಟು
ಕೆ.ಭಾಗ್ಯರಾಜ್ ಕೇವಲ ಅತ್ಯುತ್ತಮ ನಿರ್ದೇಶಕರಾಗಿರಲಿಲ್ಲ. ಬದಲಿಗೆ ನಟ ಕೂಡ ಆಗಿದ್ದರು. 75ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದ ಕೆ.ಭಾಗ್ಯರಾಜ್ ಕನ್ನಡದಲ್ಲಿ 2015ರಲ್ಲಿ ತೆರೆಗೆ ಬಂದ ''ರೆಡ್ ಅಲರ್ಟ್f'' ಎಂಬ ಚಿತ್ರದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದರು. ಧನುಷ್ ಅಭಿನಯದ ''ಕುಬೇರ'' ಇವರ ಅಭಿನಯದ ಕೊನೆಯ ಚಿತ್ರ.
ಎರಡು ಮದುವೆ -ಮಕ್ಕಳು
ಕೆ.ಭಾಗ್ಯರಾಜ್ 1980ರ ದಶಕದಲ್ಲಿ ಪ್ರವೀಣಾ ಅವರನ್ನು ಮದುವೆಯಾಗಿದ್ದರು. ವಿಶೇಷ ಅಂದರೆ ಇವರು ಕೂಡ ನಟಿ. ಆದರೆ ದುರದೃಷ್ಟವಶಾತ್, ಮದುವೆಯಾದ ಕೆಲವೇ ವರ್ಷಗಳಲ್ಲಿ (1983ರಲ್ಲಿ) ಪ್ರವೀಣಾ ಕಾಮಾಲೆ ಕಾಯಿಲೆಯಿಂದಾಗಿ ನಿಧನರಾದರು. ಪ್ರವೀಣಾ ಅಗಲಿಕೆಯ ನಂತರ 1984ರಲ್ಲಿ ಭಾಗ್ಯರಾಜ್ ಖ್ಯಾತ ನಟಿ ಪೂರ್ಣಿಮಾ ಜಯರಾಮ್ ಅವರ ಜೊತೆ ಮದುವೆಯಾದರು. ಈ ದಂಪತಿಗೆ ಶಂತನು ಮತ್ತು ಶರಣ್ಯ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರಿಬ್ಬರು ತಂದೆ ತಾಯಿಯಂತೆ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಭಾಗ್ಯರಾಜ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಹಿರಿಯ ನಟಿ ಸುಹಾಸಿನಿ ಅವರನ್ನೊಳಗೊಂಡು ಹಲವು ತಮಿಳು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕ ಮತ್ತು ನಿರ್ದೇಶಕರು ಕೆ.ಭಾಗ್ಯರಾಜ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ಇವರ ಅಗಲಿಕೆಯಿಂದ ದಕ್ಷಿಣ ಭಾರತದ ಸಿನೆಮಾದ ಒಂದು ಸುವರ್ಣ ಯುಗ ಅಂತ್ಯಗೊಂಡಂತಾಗಿದೆ.


Click it and Unblock the Notifications