ತಿರುಪತಿ ಲಡ್ಡು ಬಳಿಕ ಪಳನಿ ದೇವಾಲಯ ಪ್ರಸಾದದ ಸುತ್ತ ವಿವಾದ, ತಮಿಳು ನಿರ್ದೇಶನಕನ ಬಂಧನ..!
ತಿರುಪತಿ ಲಡ್ಡು ವಿವಾದ ಭುಗಿಲೆದ್ದಿದೆ. ಆಂಧ್ರಪ್ರದೇಶದಲ್ಲಿ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಪ್ರಕಾಶ್ ರಾಜ್ ನಡುವೆ ವಾಕ್ಸಮರ ಶುರುವಾಗಿದೆ. ಕಾಲಿವುಡ್ ಸ್ಟಾರ್ ಕಾರ್ತಿಗೆ ಪವನ್ ಕಲ್ಯಾಣ್ ಎಚ್ಚರಿಕೆಯನ್ನು ನೀಡಿಯಾಗಿದೆ. ಕಾರ್ತಿ ವಿನಯಪೂರ್ವಕವಾಗಿ ಕ್ಷಮೆಯನ್ನು ಕೇಳಿಯಾಗಿದೆ. ಇದರ ನಡುವೆ ತಮಿಳು ನಿರ್ದೇಶಕ ಮೋಹನ್ ಅವರನ್ನು ಬಂಧಿಸಲಾಗಿದೆ.
ಹೌದು, ಪಜ್ಯ ವನ್ನರಪೆಟ್ಟೈ, ರುದ್ರ ತಾಂಡವಂ, ಬಕಾಸುರನ್, ದ್ರೌಪದಿ, ಸೇರಿ ಕೆಲ ಚಿತ್ರಗಳನ್ನು ನಿರ್ದೇಶಿಸಿರುವ ಮೋಹನ್ ಯೂಟ್ಯೂಬ್ ಚಾನೆಲ್‌ಗೆ ಸಂದರ್ಶನವನ್ನು ನೀಡಿದ್ದರು. ಈ ಸಂದರ್ಶನದಲ್ಲಿ ಮಾತನಾಡಿದ್ದ ಮೋಹನ್ ತಿರುಪತಿ ಮಾತ್ರವಲ್ಲ ಇನ್ನೂ ಅನೇಕ ಕಡೆ ಪ್ರಸಾದ್ ದಲ್ಲಿ ಕಲಬೆರಕೆ ಮಾಡಲಾಗುತ್ತೆ ಎಂದು ಹೇಳಿದ್ದರು. ಪಳನಿ ದೇವಸ್ಥಾನದ ಉದಾಹರಣೆಯನ್ನು ನೀಡಿ ಪಳನಿ ದೇವಾಲಯದಲ್ಲಿ ನೀಡಲಾಗುವ ಪಂಚಾಮೃತ ಪ್ರಸಾದದಲ್ಲಿ ಮಕ್ಕಳಾಗದಂತೆ ಪುರುಷರಲ್ಲಿ ದುರ್ಬಲತೆಯನ್ನು ಉಂಟು ಮಾಡುವ ಮಾತ್ರೆಗಳನ್ನು ಬೆರಸಲಾಗುತ್ತೆ ಎಂದು ಆರೋಪ ಮಾಡಿದ್ದರು.

ಅಲ್ಲಿ ಕೆಲಸ ಮಾಡುವವರು, ನನಗೆ ಗೊತ್ತಿರುವರೇ ನನಗೆ ಈ ವಿಚಾರವನ್ನು ಹೇಳಿದ್ದರು ಎಂದು ಹೇಳಿದ್ದರು. ದೇವಾಲಯವಾಗಲಿ, ಸರ್ಕಾರವಾಗಲಿ ಈ ಕುರಿತು ಸ್ಪಷ್ಟೀಕರಣ ನೀಡುವುದಿಲ್ಲ ಆದರೆ ಅಲ್ಲಿ ಕೆಲಸ ಮಾಡುತ್ತಿದ್ದವರು ನನ್ನೆದುರು ಹೇಳಿಕೊಂಡ ವಿಚಾರ ಇದು ಎಂದು ಬಾಂಬ್ ಸಿಡಿಸಿದ್ದರು. ಮುಂದುವರೆದು ನಮ್ಮ ಹತ್ತಿರ ಸಾಕ್ಷಿಗಳಿರದ ಕಾರಣ ನಾವೇನು ಮಾಡಲು ಸಾಧ್ಯವಾಗುವುದಿಲ್ಲ ಎಂದು ಕೂಡ ಮೋಹನ್ ಹೇಳಿದ್ದರು.
ಮೋಹನ್ ನೀಡಿದ್ದ ಈ ಹೇಳಿಕೆಯನ್ನು ಆಧರಿಸಿ ಈಗ ತಿರುಚ್ಚಿ ಸೈಬರ್ ಪೊಲೀಸರು, ಮೋಹನ್ ಅವರನ್ನು ಬಂಧಿಸಿದ್ದಾರೆ. ಚೆನ್ನೈನಲ್ಲಿ ಮೋಹನ್ ಅವರನ್ನು ಅರೆಸ್ಟ್ ಮಾಡಲಾಗಿದ್ದು ಅವರನ್ನು ತಿರುಚ್ಚಿಗೆ ಕರೆತರಲಾಗುತ್ತಿದೆ ಎಂದು ತಿರುಚ್ಚಿ ಜಿಲ್ಲಾ ಎಸ್ಪಿ ವರುಣ್ ಕುಮಾರ್ ಹೇಳಿದ್ದಾರೆ. ಇನ್ನೂ ಮೋಹನ್ ಕುಮಾರ್ ಅವರ ಈ ಹೇಳಿಕೆಗೆ ಕಿಡಿಯನ್ನು ಕಾರಿರುವ ಹಿಂದೂ ಧಾರ್ಮಿಕ ಮತ್ತು ಧರ್ಮ ದತ್ತಿ ಸಚಿವ ಸೇಕರ್ ಬಾಬು, ಪಳನಿ ದೇವಸ್ಥಾನದ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

ಇನ್ನೂ ಮೋಹನ್ ನೀಡಿದ ಈ ಹೇಳಿಕೆಯ ಬೆನ್ನಲ್ಲೇ ಈ ವಿವಾದ ರಾಜಕೀಯದ ಸ್ವರೂಪ ಪಡೆದಿದೆ. ಮೋಹನ್ ಜಿ ಅವರ ಬಂಧನವನ್ನು ಖಂಡಿಸಿರುವ ಬಿಜೆಪಿ ನಾಯಕ ಅಶ್ವಥಾಮನ್, ಇದು ಅಸಂವಿಧಾನಿಕ ಎಂದು ಹೇಳಿದ್ದಾರೆ. ಬಂಧನಕ್ಕೆ ನಿಜವಾದ ಕಾರಣವೇನು ಎನ್ನುವುದನ್ನು ನಿರ್ದೇಶಕರ ಕುಟುಂಬಕ್ಕೂ ತಿಳಿಸಲಾಗಿಲ್ಲ ಎಂದು ಹೇಳಿದ್ದಾರೆ. ಬಂಧನಕ್ಕೆ ಕಾರಣ ಏನು ಮತ್ತು ಇಡೀ ಪ್ರಕರಣ ಏನು ಅನ್ನುವುದು ಅವರ ಕುಟುಂಬಕ್ಕೆ ಮಾಹಿತಿಯನ್ನು ನೀಡಬೇಕು ಆದರೆ ಯಾವ ಮಾಹಿತಿಯನ್ನು ನೀಡಲಾಗಿಲ್ಲ. ಇದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಅಶ್ವಥಾಮನ್ ಅಲ್ಲಿಮುತ್ತು ಟ್ವೀಟ್ ಮಾಡಿದ್ದಾರೆ.
ಅಂದ್ಹಾಗೇ ಮೋಹನ್ ತಮ್ಮ ಹಿಂದೂಪರ ಹೇಳಿಕೆಗಳಿಂದ ಹಿಂದೆಯೆಲ್ಲ ಸುದ್ದಿಯಾಗಿದ್ದರು. ಇವರ ನಿರ್ದೇಶನದಲ್ಲಿ ಬಂದಿದ್ದ ದ್ರೌಪದಿ ಮರ್ಯಾದಾ ಹತ್ಯೆಯನ್ನು ಬೆಂಬಲಿಸುತ್ತೆ ಎಂದು ವಿವಾದಕ್ಕೀಡಾಗಿತ್ತು. ವಿವಾದದ ನಡುವೆ ಚಿತ್ರ ಭರ್ಜರಿ ಪ್ರದರ್ಶನವನ್ನು ಕಂಡಿತ್ತು. ಇನ್ನೂ.. ಮೋಹನ್ ಅವರ ಈ ಹೇಳಿಕೆಯ ಬೆನ್ನಲ್ಲಿಯೇ ಪಳನಿ ದೇವಾಲಯದ ಪ್ರಸಾದವನ್ನು ಸಹ ಪರೀಕ್ಷೆಗೆ ಒಳಪಡಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ. ಇದಕ್ಕೆ ದೇವಸ್ಥಾನದ ಮಂಡಳಿ ಒಪ್ಪುತ್ತಾ, ಸರ್ಕಾರ ಆದೇಶ ನೀಡುತ್ತಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











