"ನೀನು ಶೂಟಿಂಗ್‌ಗೆ ಬರಲೇ ಬೇಡ": ಲೇಡಿ ಸೂಪರ್ ಸ್ಟಾರ್ ಮೇಲೆ ಗರಂ ಆಗಿದ್ದ ನಿರ್ದೇಶಕ ಯಾರು?
ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿರುವ ನಟಿ ನಯನತರಾ. ಇದೀಗ ನಯನ್ ಬಾಲಿವುಡ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಶಾರೂಕ್ ಖಾನ್ ಜೊತೆ 'ಜವಾನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಹುಬೇಡಿಕೆಯ ನಟಿಯಾಗಿ ಮೆರೆಯುತ್ತಿರುವ ನಯನತಾರಾ ಒಂದ್ಕಾಲದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಒಮ್ಮೆ ಸ್ಟಾರ್ ನಿರ್ದೇಶಕರೊಬ್ಬರು ನೀನು ಶೂಟಿಂಗ್‌ಗೆ ಬರಲೇಬೇಡ ಬಿಡು ಎಂದಿದ್ದರು.
ವಯಸ್ಸಾದರೂ, ಮದುವೆ ಆಗಿದ್ದರೂ ನಯನತಾರ ಬೇಡಿಕೆ ಉಳಿಸಿಕೊಂಡಿದ್ದಾರೆ. ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವಳಿ ಮಕ್ಕಳ ಪೋಷಣೆಯ ಜೊತೆ ಜೊತೆಗೆ ಚಿತ್ರರಂಗದಲ್ಲಿ ಮೆರೆಯುತ್ತಿದ್ದಾರೆ. ಆದರೆ ಹೀರೊಯಿನ್ ಆಗಿ ಸಕ್ಸಸ್ ಆಗುವುದಕ್ಕೂ ಮುನ್ನ, ಲೇಡಿ ಸೂಪರ್ ಸ್ಟಾರ್ ಆಗಿ ಬೆಳೆಯುವುದಕ್ಕೂ ಮುನ್ನ ಆಕೆಗೆ ಕಹಿ ಅನುಭವವಾಗಿತ್ತು. ಕಾರಣಾಂತರಗಳಿಂದ ಶೂಟಿಂಗ್‌ಗೆ ಬರೋದು ತಡವಾಗಿದ್ದಕ್ಕೆ ನಿರ್ದೇಶಕರು ನೀನು ಬರಲೇಬೇಡ ಎಂದು ಹೇಳಿದ್ದರು. ಇದನ್ನು ಸ್ವತಃ ಆ ನಿರ್ದೇಶಕರೇ ಬಹಿರಂಗಪಡಿಸಿದ್ದಾರೆ.

ತಮಿಳು ನಿರ್ದೇಶಕ ಪಾರ್ತಿಬನ್ ತಮಿಳಿನಲ್ಲಿ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ನಟನಾಗಿಯೂ ಸಕ್ಸಸ್ ಕಂಡಿದ್ದಾರೆ. 'ದಾದಾ ಈಸ್ ಬ್ಯಾಕ್' ಎನ್ನುವ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ. ಅದೃಷ್ಟ ಇದ್ದರೆ ಚಿತ್ರರಂಗದಲ್ಲಿ ಸಕ್ಸಸ್ ಸಿಗುತ್ತದೆ. ಎಷ್ಟೇ ಪ್ರತಿಭೆ ಇದ್ದರೂ ಕೆಲವೊಮ್ಮೆ ಅದೃಷ್ಟ ಇಲ್ಲದೇ ಎಲೆಮರೆಯ ಕಾಯಿಯಂತೆಯೇ ಇದ್ದುಬಿಡುತ್ತಾರೆ. ಕೆಲವರು ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಮಾತನಾಡುತ್ತಾ ಪಾರ್ತಿಬನ್ ಅಂದು ನಡೆದ ಘಟನೆ ನೆನಪಿಸಿಕೊಂಡಿದ್ದಾರೆ.

ಚಿತ್ರರಂಗದಲ್ಲಿ ಗೆಲ್ಲುವವರೆಗೂ ಬೆಲೆ ಇರುವುದಿಲ್ಲ, ಮರ್ಯಾದೆ ಇರುವುದಿಲ್ಲ ಎಂದು ಈ ಹಿಂದೆ ನಟ ಧನಂಜಯ್ ಸಹ ಹೇಳಿದ್ದರು. ಇವತ್ತು ನಯನತಾರ ಟಾಲಿವುಡ್, ಕಾಲಿವುಡ್‌ನ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ. ಆದರೆ ಒಂದ್ಕಾಲದಲ್ಲಿ ಆಕೆ ಕೂಡ ನಿರ್ದೇಶಕ, ನಿರ್ಮಾಪಕರ ಆಕ್ರೋಶ ಎದುರಿಸಬೇಕಾಗಿತ್ತು. ಅವಕಾಶಗಳಿಂದ ವಂಚಿತರಾಗಬೇಕಾಯಿತು.
ನಿರ್ದೇಶಕ ಪಾರ್ತಿಬನ್ ಮಾತನಾಡುತ್ತಾ "ಇವತ್ತು ನಯನತಾರಾ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಆದರೆ ಅವತ್ತು ಆಕೆಯ ಫೋಟೊವನ್ನು ನಾನೇ ಮೊದಲ ಬಾರಿ ನೋಡಿದ್ದೆ. 'ಕುಡೈಕುಲ್ ಮಝೈ' ಚಿತ್ರಕ್ಕಾಗಿ ಬರೋಕೆ ಹೇಳಿದೆ. ಮರುದಿನ ಬೆಳಗ್ಗೆ 8 ಗಂಟೆಗೆ ಆಕೆ ಬರಬೇಕಿತ್ತು. ಆದರೆ ಬರಲಿಲ್ಲ. ಆಕೆಯ ಮೊದಲ ಹೆಸರಯ ಡಯಾನ. ಆಕೆ ಬಸ್ ಹಿಡಿದು ಬರಬೇಕಿತ್ತು. ಆಕೆ ಬೆಳಗ್ಗೆ ಫೋನ್ ಮಾಡಿ, ಸರ್ ನಾನು ಬಸ್ ಹತ್ತಲಿಲ್ಲ. ಇವತ್ತು ಬೇಕಾದರೆ ಬಸ್ ಹಿಡಿದು ಬರ್ತೀನಿ ಅಂದ್ರು"
"ಬೇಡ, ನೀವು ಬರಬೇಡಿ ಎಂದು ನಾನು ಹೇಳಿದ್ದೆ. ನನಗೆ ಸಮಯ ಬಹಳ ಮುಖ್ಯ. ನಾನು ಹೇಳುವುದು ಏನಂದ್ರೆ, ನೀವು 8 ಗಂಟೆಗೆ ಬರ್ತೀರಾ ಅಂದ್ರೆ ನಾನು 7.30ಕ್ಕೆ ಆಫೀಸ್ ಬಾಗಿಲು ತೆರೆದು ಕಾಯುತ್ತಿರುತ್ತೇನೆ. ನೀವು ನಿನ್ನೆಯೇ ಫೋನ್ ಮಾಡಿ ಹೇಳಬೇಕಿತ್ತು. ನಾನು ಈ ವಿಚಾರ ಯಾಕೆ ಹೇಳುತ್ತೇನೆ ಅಂದ್ರೆ, ನಯನತಾರಾ ಅಂದ್ರೆ ಈ ಫೋಟೊದಲ್ಲಿ ಇರುವ ಹುಡುಗಿ ಮುಂದೆ ಸ್ಟಾರ್ ನಟಿ ಆಗುತ್ತಾರೆ ಅನ್ನೋದನ್ನು ಮೊದಲು ಊಹಿಸಲು ಸಾಧ್ಯವಿಲ್ಲ"
"ಒಂದು ವೇಳೆ ನಯನತಾರಾ ಈ ರೀತಿ ಸ್ಟಾರ್ ನಟಿಯಾಗುತ್ತಾರೆ ಎಂದು ಗೊತ್ತಾಗಿದ್ದರೆ ಪರವಾಗಿಲ್ಲ ನೀವು ನಾಳೆ ಬೇಕಾದರೂ ಬನ್ನಿ ಎಂದು ಹೇಳುತ್ತಿದ್ದೆ. 4 ಸಿನಿಮಾಗಳಿಗೆ ಅಡ್ವಾನ್ಸ್ ಕೊಡುತ್ತಿದ್ದೆ. ನಾವು ಯಾವುದನ್ನು ಊಹಿಸಲು ಸಾಧ್ಯವಿಲ್ಲ. ಎಲ್ಲಾ ಕೂಡಿ ಬಂದರೆ ಸಕ್ಸಸ್ ಸಿಗುತ್ತದೆ. ನಾನು ಅಂದು ಆಕೆಗೆ ಅವಕಾಶ ಕೊಡದಿದ್ದರೂ ಆಕೆ ಸ್ಟಾರ್ ನಟಿ ಆದರು. ಅದನ್ನು ಯಾರು ತಡೆಯಲು ಸಾಧ್ಯವಿಲ್ಲ" ಎಂದು ಪಾರ್ತಿಬನ್ ಹೇಳಿಕೊಂಡಿದ್ದಾರೆ.


Click it and Unblock the Notifications











