ಇನ್ಮುಂದೆ ಚಿತ್ರಮಂದಿರಗಳಲ್ಲಿ ಯೂಟ್ಯೂಬರ್‌ಗಳು ಬ್ಯಾನ್..!
ದೊಡ್ಡ ದೊಡ್ಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತಿವೆ. ಮೊದಲ ಶೋನಿಂದಲೇ ನೆಗೆಟಿವ್ ಕಾಮೆಂಟ್ಸ್ ಬರ್ತಿದ್ದು ಇದರಿಂದ ಸಹಜವಾಗಿಯೇ ಸಿನಿಮಾ ನೋಡಲು ಪ್ರೇಕ್ಷಕರು ಹಿಂದೇಟು ಹಾಕುತ್ತಿದ್ದಾರೆ. ಇದೇ ಈಗ ಚಿತ್ರ ನಿರ್ಮಾಪಕರ ಆಕ್ರೋಶಕ್ಕೆ ಕಾರಣವಾಗಿದೆ.
ಫಸ್ಟ್ ಡೇ ಫಸ್ಟ್ ಶೋ ರಿವ್ಯೂ, ಪಬ್ಲಿಕ್ ಟಾಕ್ ಎಂದು ಕೆಲ ಯೂಟ್ಯೂಬ್ ಚಾನಲ್‌ಗಳಲ್ಲಿ ವೀಡಿಯೋಗಳು ಪೋಸ್ಟ್ ಆಗುತ್ತಿದೆ. ಅದನ್ನು ಕೂಡ ಕೆಲವೊಮ್ಮೆ ತಿರುಚುವ ಪ್ರಯತ್ನ ನಡೀತಿದೆ. ಯಾವುದೋ ಚಿತ್ರದ ಬಗ್ಗೆ ಜನ ಮಾತನಾಡಿದ ವೀಡಿಯೋವನ್ನು ಮತ್ತೊಂದು ಸಿನಿಮಾ ಬಿಡುಗಡೆ ಸಮಯದಲ್ಲಿ ರಿಲೀಸ್ ಮಾಡಿ ವೀವ್ಸ್, ಲೈಕ್ಸ್ ಗಿಟ್ಟಿಸುವ ಕೆಟ್ಟ ಚಾಳಿ ಕೂಡ ಶುರುವಾಗಿದೆ.

ಇತ್ತೀಚೆಗೆ ತಮಿಳಿನ 'ಇಂಡಿಯನ್-2', 'ವೆಟ್ಟೆಯಾನ್' ಹಾಗೂ 'ಕಂಗುವ' ಚಿತ್ರಗಳಿಗೆ ಭಾರೀ ನಿರಾಸೆ ಎದುರಾಗಿತ್ತು. ಸಿನಿಮಾ ಶುರುವಾದ ಬೆನ್ನಲ್ಲೇ ಯೂಟ್ಯೂಬ್, ಫೇಸ್‌ಬುಕ್ ಸೇರಿದಂತೆ ಕೆಲವೆಡೆ ಚಿತ್ರದ ಆಡಿಯನ್ಸ್ ರಿವ್ಯೂ ವೀಡಿಯೋಗಳು ವೈರಲ್ ಆಗಿತ್ತು. ಇದೇ ಚಿತ್ರಗಳ ಸೋಲಿಗೆ ಕಾರಣ ಎಂದು ತಮಿಳು ಸಿನಿಮಾ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ. ಚಿತ್ರಮಂದಿರಗಳಲ್ಲಿ ಯೂಟ್ಯೂಬರ್‌ಗಳ ಪ್ರವೇಶಕ್ಕೆ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ.
ಕೆಲ ವರ್ಷಗಳ ಹಿಂದೆ ಯಾವುದೇ ಸಿನಿಮಾ ಬಿಡುಗಡೆ ಆದರೂ 3 ದಿನಗಳ ಬಳಿಕ ಪತ್ರಿಕೆಗಳಲ್ಲಿ ವಿಮರ್ಶೆ ಬರುತ್ತಿತ್ತು. ಅದನ್ನು ನೋಡಿ ಜನ ಸಿನಿಮಾ ನೋಡಬೇಕೋ? ಬೇಡವೋ? ಎಂದು ನಿರ್ಧರಿಸುತ್ತಿದ್ದರು. ಆದರೆ ಆಧುನಿಕ ಪ್ರಪಂಚದಲ್ಲಿ ಎಲ್ಲವೂ ಬಹಳ ವೇಗವಾಗಿ ನಡೆಯುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ವಿಮರ್ಶೆ ಮಾಡುವಂತಾಗಿದೆ. ಅದಕ್ಕೆ ಯೂಟ್ಯೂಬ್ ರಿವ್ಯೂ ವೀಡಿಯೋಗಳು ಸಾಥ್ ಕೊಡುತ್ತಿವೆ.

ಈ ರಿವ್ಯೂ ವೀಡಿಯೋಗಳೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಬೇಕೋ? ಬೇಡವೋ? ಎಂದು ನಿರ್ಧರಿಸುವ ಮಟ್ಟಕ್ಕೆ ಹೋಗುತ್ತಿದೆ. ಅದರಲ್ಲಿ ಕೆಲ ಫೇಕ್ ವೀಡಿಯೋಗಳ ಆರ್ಭಟವೂ ಇದೆ. ಬರೀ ಮೊಬೈಲ್ ಹಿಡಿದು ಥಿಯೇಟರ್‌ಗಳ ಮುಂದೆ ಸಾಕಷ್ಟು ಜನ ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರ ಅಭಿಪ್ರಾಯ ಕೇಳುತ್ತಿದ್ದಾರೆ. ಇಂತಹ ವೀಡಿಯೋಗಳು ಸಿನಿಮಾ ಬಗ್ಗೆ ಒಂದು ಒಪಿನಿಯನ್ ಕ್ರಿಯೇಟ್ ಮಾಡುತ್ತಿವೆ. ಅದೇ ಸಿನಿಮಾಗಳ ಸೋಲು, ಗೆಲುವನ್ನು ನಿರ್ಧರಿಸುತ್ತಿದೆ ಎನ್ನುವುದು ತಮಿಳು ಸಿನಿಮಾ ನಿರ್ಮಾಪಕರ ಅಭಿಪ್ರಾಯ.
ಓಟಿಟಿ ಬಂದಮೇಲೆ ಜನ ಥಿಯೇಟರ್‌ಗೆ ಬರುವುದು ಕಮ್ಮಿ ಆಗಿದೆ. ದೊಡ್ಡ ಸಿನಿಮಾಗಳನ್ನು ಮಾತ್ರ ನೋಡಲು ಉತ್ಸುಕರಾಗಿದ್ದಾರೆ. ಟಿಕೆಟ್ ದರವೂ ಹೆಚ್ಚಾಗಿರುವುದರಿಂದ ಜನ ಅಷ್ಟು ಸುಲಭವಾಗಿ ಚಿತ್ರಮಂದಿರಕ್ಕೆ ಬರಲ್ಲ. ಅಂತಹ ಸಮಯದಲ್ಲಿ ಈ ಯೂಟ್ಯೂಬ್ ರಿವ್ಯೂ ವೀಡಿಯೋಗಳು ಕೂಡ ಜನರನ್ನು ಬರದಂತೆ ತಡೆಯುತ್ತವೆ ಎನ್ನುವುದು ತಮಿಳು ನಿರ್ಮಾಪಕರ ಅಸಮಾಧಾನಕ್ಕೆ ಕಾರಣವಾಗಿದೆ.
ಕಾಲಿವುಡ್, ಟಾಲಿವುಡ್‌ನಲ್ಲಿ ಯೂಟ್ಯೂಬರ್‌ಗಳ ಹಾವಳಿ ಜಾಸ್ತಿಯಿದೆ. ಇದು ನಿಧಾನವಾಗಿ ಸ್ಯಾಂಡಲ್‌ವುಡ್‌ಗೂ ಪರಿಚಯವಾಗುತ್ತಿದೆ. ಮೊದಲ ದಿನ ಪ್ರೇಕ್ಷಕರ ಅಭಿಪ್ರಾಯ ಪಡೆಯಲು ಚಿತ್ರಮಂದಿರಕ್ಕೆ ಬರುವ ಯೂಟ್ಯೂಬರ್‌ಗಳನ್ನು ತಡೆಯಬೇಕು ಎಂದು ತಮಿಳು ಚಿತ್ರ ನಿರ್ಮಾಪಕರು ಆಗ್ರಹಿಸಿದ್ದಾರೆ. ಇದಕ್ಕೆ ಚಿತ್ರಮಂದಿರದ ಮಾಲೀಕರು ಒಪ್ಪುತ್ತಾರಾ? ಮುಂದೇನು ಆಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಯೂಟ್ಯೂಬ್ ರಿವ್ಯೂಗಳು ದೊಡ್ಡ ಚಿತ್ರಗಳಿಗೆ ವರವಾಗಿದ್ದು ಇದೆ, ಶಾಪವಾಗಿದ್ದು ಇದೆ. ಇನ್ನು ತಮಿಳು ನಿರ್ಮಾಪಕರ ಆಕ್ರೋಶದ ಬಗ್ಗೆ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೊದಲು ನೀವು ಒಳ್ಳೆ ಸಿನಿಮಾ ಮಾಡಿ, ಬಳಿಕ ಯೂಟ್ಯೂಬರ್‌ಗಳನ್ನು ಬ್ಯಾನ್ ಮಾಡುವ ಬಗ್ಗೆ ಆಲೋಚಿಸಿ, ಒಳ್ಳೆ ಸಿನಿಮಾ ಮಾಡಿದರೆ ಗೆಲುವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.
ಕೆಲವರು ಮಾತ್ರ ನಿರ್ಮಾಪಕರ ಮನವಿ ಸರಿ ಎಂದು ವಾದಿಸುತ್ತಿದ್ದಾರೆ. ಯಾವುದೇ ಸಿನಿಮಾ ಆಗಿದ್ದರೂ ಅದು ಚೆನ್ನಾಗಿದೆ, ಚೆನ್ನಾಗಿಲ್ಲ ಎನ್ನುವುದನ್ನು ಪ್ರೇಕ್ಷಕರು ನಿರ್ಧರಿಸಬೇಕು. ಯಾರೋ ನಾಲ್ಕು ಜನ ಹೇಳಿದ್ದೆ ಸಿನಿಮಾ ವಿಮರ್ಶೆ ಅಲ್ಲ ಎನ್ನುವವರು ಇದ್ದಾರೆ.


Click it and Unblock the Notifications











