ವಿಜಯ್ ಅಭಿನಯದ ಲಿಯೋ ವಿಶೇಷ ಪ್ರದರ್ಶನಕ್ಕೆ ತಮಿಳುನಾಡು ಸರ್ಕಾರ ಅನುಮತಿ
ನಟ ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಲಿಯೋ' ತೆರೆಗೆ ಬರಲು ಸಿದ್ದವಾಗಿದೆ. ಅಕ್ಟೋಬರ್ 19 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್‌ಗೆ ಸಿದ್ಧವಾಗಿದ್ದು, ವಿಶೇಷ ಪ್ರದರ್ಶನಗಳನ್ನು ಕೂಡ ಆಯೋಜಿಸಲಾಗಿದೆ. ತಮಿಳುನಾಡಿನಲ್ಲಿ ಈ ಶೋಗಳಿಗೆ ಅನುಮತಿ ನೀಡುವಂತೆ ಚಿತ್ರತಂಡ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿತ್ತು.
ಲಿಯೋ ಸಿನಿಮಾ ನಿರ್ಮಾಪಕರಾದ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮುಂಜಾನೆ ಪ್ರದರ್ಶನಗಳನ್ನು ನಡೆಸಲು ಅನುಮತಿ ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಚರ್ಚೆ ನಡೆಸಿದ ನಂತರ, ಮೊದಲ ವಾರದಲ್ಲಿ ಒಂದು ವಿಶೇಷ ಪ್ರದರ್ಶನವನ್ನು ನಡೆಸಲು ಸರ್ಕಾರವು ಚಿತ್ರಮಂದಿರಗಳಿಗೆ ಅನುಮತಿ ನೀಡಿದೆ. ಹೇಳಿಕೆಯ ಪ್ರಕಾರ ಚಿತ್ರಮಂದಿರಗಳು ದಿನಕ್ಕೆ ಐದು ಪ್ರದರ್ಶನಗಳನ್ನು ನಡೆಸಬಹುದು.

'ಲಿಯೋ' ವಿಶೇಷ ಪ್ರದರ್ಶನಗಳನ್ನು ಅನುಮತಿಸಿದ ತಮಿಳುನಾಡು ಸರ್ಕಾರ
ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರವು ಅಕ್ಟೋಬರ್ 19 ರಂದು ಬಹು ಭಾಷೆಗಳಲ್ಲಿ ಥಿಯೇಟರ್‌ಗೆ ಬರಲಿದೆ. ಈ ಚಿತ್ರವು 2023 ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಮನವಿ ಮೇರೆಗೆ ಮೊದಲ ವಾರ ವಿಶೇಷ ಬೆಳಗ್ಗೆ 4 ಮತ್ತು ಬೆಳಗ್ಗೆ 7 ಗಂಟೆಗೆ ವಿಶೇಷ ಪ್ರದರ್ಶನಗಳನ್ನು ನಡೆಸಲು ತಮಿಳುನಾಡು ಸರ್ಕಾರ ಚಿತ್ರಮಂದಿರಗಳಿಗೆ ಅವಕಾಶ ನೀಡಿದೆ.
ಸ್ಪೆಷಲ್ ಶೂಗಳಿಗೆ ಅನುಮತಿ ನೀಡುವ ಜೊತೆಗೆ "ಯಾವುದೇ ಆರೋಗ್ಯ ವ್ಯತ್ಯಯ ಮತ್ತು ಥಿಯೇಟರ್‌ಗಳಲ್ಲಿ ಜನದಟ್ಟಣೆ ಉಂಟಾಗದಂತೆ ಪೊಲೀಸ್ ಇಲಾಖೆಯ ಸಹಕಾರ ಮತ್ತು ಭದ್ರತೆಯೊಂದಿಗೆ ಸಮರ್ಪಕ ವ್ಯವಸ್ಥೆ ಮಾಡಬೇಕು" ಎಂದು ತಮಿಳುನಾಡು ಸರಕಾರ ಚಿತ್ರತಂಡಕ್ಕೆ ಸೂಚಿಸಿದೆ.
ಜನವರಿಯಿಂದ ತಮಿಳುನಾಡಿನಲ್ಲಿ ವಿಶೇಷ ಪ್ರದರ್ಶನ ರದ್ದು ಮಾಡಿದ್ದ ಸರ್ಕಾರ
ರಾಜಧಾನಿ ಚೆನ್ನೈನ ಥಿಯೇಟರ್‌ನ ಹೊರಗೆ ಅಭಿಮಾನಿಯೊಬ್ಬರು ಲಾರಿಯಿಂದ ಬಿದ್ದು ಸಾವನ್ನಪ್ಪಿದ ನಂತರ ತಮಿಳುನಾಡಿನಲ್ಲಿ ಜನವರಿ 2023 ರಿಂದ ವಿಶೇಷ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಅಂದಿನಿಂದ, ತಮಿಳುನಾಡಿನಲ್ಲಿ ವಿಶೇಷ ಪ್ರದರ್ಶನಗಳು / ಮುಂಜಾನೆ ಪ್ರದರ್ಶನಗಳನ್ನು ನಡೆಸಲು ಸರ್ಕಾರವು ಚಿತ್ರಮಂದಿರಗಳಿಗೆ ಅವಕಾಶ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಲಿಯೋ ನಿರ್ಮಾಪಕರಾದ ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಸರ್ಕಾರ ಅನುಮತಿ ಕೋರಿ ಮನವಿ ಸಲ್ಲಿಸಿತ್ತು.

'ಕೈತಿ', 'ಮಾಸ್ಟರ್', 'ವಿಕ್ರಂ' ರೀತಿಯ ಸಿನಿಮಾಗಳನ್ನು ಕೊಟ್ಟ ಲೋಕೇಶ್ ಕನಕರಾಜ್ ಎರಡನೇ ಬಾರಿ ವಿಜಯ್ ಜೊತೆ ಕೈ ಜೋಡಿಸಿದ್ದಾರೆ. ಹೀಗಾಗಿಯೇ ಲಿಯೋ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷಿಯಿದೆ. ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಸಿನಿಮಾ 2 ಗಂಟೆ 44 ನಿಮಿಷ ಇದೆ. ಇತ್ತೀಚೆಗೆ ಸಂಗೀತ ನಿರ್ದೇಶಕ ಅನಿರುದ್ಧ್ ಲಿಯೋ ಸಿನಿಮಾದ ಫಸ್ಟ್ ರಿವ್ಯೂ ಕೊಟ್ಟಿದ್ದರು. ಇದರಿಂದ ಲಿಯೋ ಸಕತ್ ಆಗಿದೆ ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ವಿಜಯ್ ಅಭಿನಯದ 'ಲಿಯೋ'
'ಲಿಯೋ' ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ. ರತ್ನ ಕುಮಾರ್ ಮತ್ತು ದೀರಜ್ ವೈದಿ ಚಿತ್ರಕಥೆಯನ್ನು ಬರೆದಿದ್ದಾರೆ. ಈ ಚಿತ್ರದಲ್ಲಿ ದಳಪತಿ ವಿಜಯ್ ಜೊತೆಗೆ ಸಂಜಯ್ ದತ್, ಅರ್ಜುನ್ ಸರ್ಜಾ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೌತಮ್ ಮೆನನ್, ಮನ್ಸೂರ್ ಅಲಿ ಖಾನ್, ಮಿಸ್ಕಿನ್, ಪ್ರಿಯಾ ಆನಂದ್ ಮತ್ತು ಹಲವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಸ್ ಎಸ್ ಲಲಿತ್ ಕುಮಾರ್ ಮತ್ತು ಜಗದೀಶ್ ಪಳನಿಸಾಮಿ ನಿರ್ಮಾಣದ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.


Click it and Unblock the Notifications











