ಮಾರುಕಟ್ಟೆಗೆ ಬಂತು ತಮಿಳುನಾಡು ಸಿಎಂ ವಿಜಯ್ ಲುಕ್ ಕಾಂಬೊ ಡ್ರೆಸ್; ದರ ಎಷ್ಟು ಗೊತ್ತಾ?
ತಮಿಳುನಾಡಿನಲ್ಲಿ ನಟ ವಿಜಯ್ ಹೊಸ ಇತಿಹಾಸ ಬರೆದಿದ್ದಾರೆ. ಸ್ವಂತ ಪಕ್ಷ ಕಟ್ಟಿ ಎರಡು ವರ್ಷದಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದಾರೆ. ನಾನು ಬೇರೆ ರಾಜಕಾರಣಿಗಳ ರೀತಿ ಅಲ್ಲ, ನಾನೇ ಬೇರೆ, ನನ್ನ ಸ್ಟೈಲೇ ಬೇರೆ ಎಂದು ನಿರೂಪಿಸಲು ಹೊರಟಿದ್ದಾರೆ. ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ವಿಜಯ್ ವೇಷಭೂಷಣ ಬದಲಾಗಿದೆ. ಹೊಸ ಟ್ರೆಂಡ್ ಹುಟ್ಟಾಕ್ಕಿದೆ.
ಸಾಮಾನ್ಯವಾಗಿ ರಾಜಕಾರಣಿಗಳು ಬಿಳಿ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ವಿಜಯ್ ಬ್ಲಾಕ್ ಅಂಡ್ ವೈಟ್ ಸೂಟ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದೇ ಅವತಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ವಿಜಯ್ ಸದನದಲ್ಲಿ ಕೂಡ ಅದನ್ನೇ ಮುಂದುವರೆಸಿದ್ದಾರೆ. ಸದ್ಯ ಈಗ ವಿಜಯ್ ಹೊಸ ಸ್ಟೈಲ್ ವೈರಲ್ ಆಗ್ತಿದ್ದು ಅದೇ ಶೈಲಿಯ ಕಾಸ್ಟ್ಯೂಮ್ ಮಾರುಕಟ್ಟೆಗೆ ಬಂದಿದೆ. ತಮಿಳಿನಾಡು ಸಿಎಂ ವಿಜಯ್ ಈಗ ಮಾರ್ಕೆಟಿಂಗ್ ಇನ್‌ಫ್ಲುಯೆನ್ಸರ್ ಆಗಿಬಿಟ್ಟಿದ್ದಾರೆ. ತಮಿಳುನಾಡು ಜವಳಿ ಕ್ಷೇತ್ರದಲ್ಲಿ ಈಗ ವಿಜಯ್ ಲುಕ್ ಕಾಸ್ಟ್ಯೂಮ್ ಮಾರಾಟ ಮಾಡಲಾಗುತ್ತಿದೆ.

ಸೂಟ್ ಧರಿಸಿ ಅಧಿಕಾರ ಸ್ವೀಕರಿಸಿದ ಮೊದಲ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಎನಿಸಿಕೊಂಡಿದ್ದರು. ಆ ಬಳಿಕ ಕೂಡ ಅವರ ಲುಕ್ ಬದಲಾಗಲಿಲ್ಲ. ಸದ್ಯಕ್ಕೆ ಇದೇ ಸ್ಟೈಲ್ ಮುಂದುವೆರೆಸುವ ಸುಳಿವು ಸಿಕ್ಕಿದೆ. ಇದರ ಲಾಭ ಪಡೆಯಲು ಪ್ರಮುಖ ರಿಟೈಲ್ ಸಂಸ್ಥೆಗಳು ಮುಂದಾಗಿವೆ. ಚೆನ್ನೈ ಸಿಲ್ಕ್ಸ್, ದೀಪಂ ಸಿಲ್ಕ್ಸ್ ಸಂಸ್ಥೆಗಳು ಸಿಎಂ ವಿಜಯ್ ಲುಕ್ ಹೆಸರಿನಲ್ಲಿ ಸ್ಪೆಷಲ್ ಕಾಂಬೋ ಡ್ರೆಸ್ ಪರಿಚಯಿಸಿದ್ದಾರೆ. ದಳಪತಿ ಅಭಿಮಾನಿಗಳಿಗಾಗಿಯೇ ಈ ಪ್ರಯತ್ನ ಮಾಡಲಾಗಿದೆ.
ಚೆನ್ನೈ ಸಿಲ್ಕ್ಸ್‌ನಲ್ಲಿ ಸಿಎಂ ವಿಜಯ್ ಲುಕ್ ಕಾಂಬೋ ಉಡುಪಿನ ಬೆಲೆ 3999 ರೂ. ನಿಗದಿಪಡಿಸಲಾಗಿದೆ. ಬ್ಲ್ಯಾಕ್ ಸೂಟ್ ಜಾಕೆಟ್, ವೈಟ್ ಶರ್ಟ್, ಬ್ಲ್ಯಾಕ್ ಸೂಟ್ ಪ್ಯಾಂಟ್, ಬ್ಲ್ಯಾಕ್ ಲೆದರ್ ಬೆಲ್ಟ್ ಹಾಗೂ ಬ್ಲ್ಯಾಕ್ ಕಲರ್ ಶೂ ಈ ಕಾಂಬೋದಲ್ಲಿದೆ. ಸಿನಿಮಾ ಕಲಾವಿದರು, ರಾಜಕೀಯ ಮುಖಂಡರ ವೇಷ ಭೂಷಣವನ್ನು ಅಭಿಮಾನಿಗಳು ಫಾಲೋ ಮಾಡುವುದು ಹೊಸದಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಸಿಎಂ ವಿಜಯ್ ಲುಕ್ ಕಾಂಬೋ ಡ್ರೆಸ್ ಟ್ರೆಂಡ್ ಸೃಷ್ಟಿಸುವ ನಿರೀಕ್ಷೆಯಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ.
ದ್ರಾವಿಡ ರಾಜಕೀಯಕ್ಕೆ ಬ್ರೇಕ್ ಹಾಕಿ ವಿಜಯ್ ತಮಿಳುನಾಡಿನಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಅದರ ಮೊದಲ ಭಾಗವಾಗಿ ತಮಿಳುನಾಡು ಪಾಲಿಟಿಕ್ಸ್ ಯೂನಿಫಾರ್ಮ್ ಬದಲಿಸಿದ್ದಾರೆ. ಅಲ್ಲಿನ ರಾಜಕಾರಣಿಗಳು ಸದಾ ಬಿಳಿ ಪಂಚೆ, ಬಿಳಿ ಶರ್ಟ್ ಧರಿಸುತ್ತಿದ್ದರು. ಆದರೆ ವಿಜಯ್ ಸೂಟು ಬೂಟು ಧರಿಸಿ ಮಿಂಚುತ್ತಿದ್ದಾರೆ. ಕಪ್ಪು ಬಣ್ಣ ಅಶುಭ ಎನ್ನುವ ಭಾವನೆ ಬಹುತೇಕರಲ್ಲಿದೆ. ವಿಜಯ್ ಕ್ರಿಶ್ಚಿಯನ್ ಧರ್ಮ ಅನುಸರಿಸುತ್ತಾರೆ. ಕ್ರೈಸ್ತರಲ್ಲಿ ಕೂಡ ಇದು ಅಶುಭ ಎನ್ನುವ ನಂಬಿಕೆಯಿದೆ. ವಿಜಯ್ ಪೆರಿಯಾರ್ ಅನುಯಾಯಿ. ಅವರ ಆದರ್ಶಗಳನ್ನು ಪಾಲಿಸಲು ವಿಜಯ್ ಹೀಗೆ ಕಪ್ಪು ಬಣ್ಣದ ಉಡುಗೆ ಧರಿಸಿದ್ದಾರೆ ಎಂದು ಚರ್ಚೆ ನಡೀತಿದೆ.
ಅಸಮಾನತೆ ಹಾಗೂ ಮೌಢ್ಯದ ವಿರುದ್ಧ ಕಪ್ಪು ಬಣ್ಣದ ಉಡುಪಿನಲ್ಲಿ ಪ್ರತಿಭಟನೆಗೆ ಪೆರಿಯಾರ್ ಕರೆ ನೀಡಿದ್ದರು. ಸಾಕಷ್ಟು ಜನ ಇದನ್ನು ಅನುಸರಿಸಿದ್ದರು. ಪೆರಿಯಾರ್ ವಾದದ ಪ್ರತಿಪಾದಕ ಎಂದು ಸೂಚಿಸಲು ವಿಜಯ್ ಕಪ್ಪು ಬಣ್ಣ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಸೂಟು ಬೂಟು ಧರಿಸುವ ಮೂಲಕ ವಿಜಯ್ ಬಡವರು, ಮಧ್ಯಮ ವರ್ಗದ ಜನರೊಟ್ಟಿಗೆ ಭಾವನಾತ್ಮಕ ಸಂಬಂಧ ಕಡಿದುಕೊಂಡಿದ್ದಾರಾ? ಸೂಟು ಕಾರ್ಪೋರೆಟ್ ಸಂಸ್ಕೃತಿ, ಹಾಗಾಗಿ ರಾಜ್ಯವನ್ನು ಕಾರ್ಪೋರೇಟ್ ಮಾದರಿಯಲ್ಲಿ ಬದಲಿಸುತ್ತಾರಾ? ಎನ್ನುವ ಚರ್ಚೆ ಕೂಡ ಜೋರಾಗಿದೆ. ಅದೆಲ್ಲ ಏನೇ ಇದ್ದರೂ ಸಿಎಂ ಆಗುತ್ತಿದ್ದಂತೆ ವಿಜಯ್ ಕೈಗೊಂಡ ಕೆಲ ನಿರ್ಧಾರಗಳು ಗಮನ ಸೆಳೆದಿದೆ.


Click it and Unblock the Notifications