ಸ್ಟಾರ್ ನಟರೆಲ್ಲಾ ಯಶ್ ನೋಡಿ ಕಲಿಬೇಕು ಎಂದಿದ್ದ ತಮಿಳು ನಿರ್ಮಾಪಕ; ವೀಡಿಯೋ ವೈರಲ್
ತಮಿಳು ಚಿತ್ರರಂಗದಲ್ಲಿ ಹೊಸ ಬೆಳವಣಿಗೆ ಶುರುವಾಗಿದೆ. ಸ್ಟಾರ್ ನಟರ ಸಂಭಾವನೆ ವಿಚಾರದಲ್ಲಿ ಕಾಲಿವುಡ್ ನಿರ್ಮಾಪಕರು ಬೇಸತ್ತಿದ್ದಾರೆ. ಸಿನಿಮಾ ಬಜೆಟ್ಟಿನಲ್ಲಿ ಅರ್ಧದಷ್ಟು ಹೀರೊಗೆ ಸಂಭಾವನೆಯಾಗಿ ಕೊಟ್ಟು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹಾಗಾಗಿ ಹೊಸ ಬೇಡಿಕೆಯನ್ನು ಸ್ಟಾರ್ ನಟರ ಮುಂದಿಡಲು ನಿರ್ಧರಿಸಿದ್ದಾರೆ.
ನೂರಾರು ಕೋಟಿ ಬಂಡವಾಳ ಹೂಡಿ ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಿನಿಮಾ ಸೋತಿದೆ ಎಂದು ಹೇಳಲು ಅವಮಾನ, ಗೆದ್ದಿದೆ ಎಂದು ಹೇಳಿ ನಷ್ಟದಿಂದ ಬೇಸತ್ತಿದ್ದಾರೆ. ಸಂಭಾವನೆ ವಿಚಾರದಲ್ಲಿ ಕನ್ನಡ ನಟ ಯಶ್ ನಡೆಯನ್ನು ಎರಡು ವರ್ಷಗಳ ಹಿಂದೆ ತಮಿಳು ನಿರ್ಮಾಪಕ, ನಿರ್ದೇಶಕ ಕೆ. ರಾಜನ್ ಕೊಂಡಾಡಿದ್ದರು. ತಮಿಳು ನಿರ್ಮಾಪಕರ ಸಂಘದ ಹೊಸ ಬೇಡಿಕೆ ಹಿನ್ನೆಲೆಯಲ್ಲಿ ಆ ವೀಡಿಯೋ ವೈರಲ್ ಆಗ್ತಿದೆ.

ಸ್ಟಾರ್ ನಟರಿಗೆ ಸಂಭಾವನೆಯನ್ನು ಸಂಪೂರ್ಣವಾಗಿ ಕೊಡುವ ಬದಲು ಆದಾಯದಲ್ಲಿ ಪಾಲು ಪಡೆಯುವಂತೆ ಮನವೊಲಿಸಲು ತಮಿಳು ನಿರ್ಮಾಪಕರ ಮಂಡಳಿ ತೀರ್ಮಾನಿಸಿದೆ. ಅಂದರೆ ಸಂಭಾವನೆ ಒಂದು ಭಾಗವನ್ನು ಕೊಟ್ಟು ಇನ್ನುಳಿದ ಹಣವನ್ನು ಶೇಕಡಾವಾರು ಪಾಲು ಪಡೆಯುವಂತೆ ಮನವಿ ಮಾಡಲು ತೀರ್ಮಾನಿಸಿದ್ದಾರೆ. ಒಂದು ವೇಳೆ ಸಿನಿಮಾ ಸೋತರೆ ನಿರ್ಮಾಪಕರಿಗೆ ನಷ್ಟ ಕಮ್ಮಿ ಆಗುತ್ತದೆ. ನಷ್ಟದಲ್ಲಿ ಕಲಾವಿದರ ಪಾಲು ಇರುವಂತಾಗುತ್ತದೆ.
ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ವಿಜಯ್, ಅಜಿತ್, ಧನುಷ್ ರೀತಿಯ ಸ್ಟಾರ್ ನಟರ ಸಂಭಾವನೆ 50 ಕೋಟಿ ರೂ. ದಾಟಿದೆ. ಕೆಲವರ ಸಂಭಾವನೆ 100 ಕೋಟಿ ರೂ. ಗಡಿ ಮೀರಿದೆ. ಅಷ್ಟು ದೊಡ್ಡ ಮೊತ್ತ ಕೊಟ್ಟ ಸಿನಿಮಾ ಸೋತಾಗ ನಟರು ಸೈಲೆಂಟ್ ಆಗಿಬಿಡುತ್ತಾರೆ. ಇದು ತಮಿಳು ನಿರ್ಮಾಪಕರ ಸಂಕಷ್ಟಕ್ಕೆ ಕಾರಣವಾಗಿದೆ. 'ವೆಟ್ಟೆಯಾನ್', 'ವಿಡಾಮುಯರ್ಚಿ', 'ಕಂಗುವ', 'ರೆಟ್ರೋ' ರೀತಿಯ ಭಾರೀ ಬಜೆಟ್ ಚಿತ್ರಗಳು ಸೋತಿದ್ದು ಗೊತ್ತೇಯಿದೆ. ಸೋಲು ಎಂದು ನಿರ್ಮಾಪಕರು ಒಪ್ಪಿಕೊಳ್ಳಲಿಲ್ಲ. ಹಾಗಾಗಿ ನಷ್ಟ ಭರಿಸುವಂತಾಯಿತು.
ನಟ ಯಶ್ ಸೇರಿದಂತೆ ಕೆಲ ಕಲಾವಿದರು ಈಗಾಗಲೇ ಶೇರ್ ಪಡೆಯುವ ಲೆಕ್ಕಾಚಾರ ಶುರು ಮಾಡಿದ್ದಾರೆ. ಇದರಿಂದ ನಿರ್ಮಾಪಕರಿಗೂ ಹೊರೆ ಕಮ್ಮಿ ಆಗಲಿದೆ. ಇದೇ ವಿಚಾರದ ಬಗ್ಗೆ ನಿರ್ಮಾಪಕ, ನಿರ್ದೇಶಕ ಕೆ. ರಾಜನ್ ಅಂದು ಮಾತನಾಡಿದ್ದರು. "KGF-2 ಚಿತ್ರಕ್ಕೆ ಸಂಭಾವನೆ ಬೇಡ ಎಂದಿದ್ದ ಯಶ್ ನಿಜಕ್ಕೂ ಗ್ರೇಟ್.. ನಾನು ಆತನ ಕಾಲಿಗೆ ಬೀಳ್ತೀನಿ" ಎಂದಿದ್ದರು.
"ತಮಿಳಿನಲ್ಲಿ ಸಿನಿಮಾ ಬಜೆಟ್ಟಿನ ಶೇ. 60ರಷ್ಟು ಭಾಗ ನಟರ ಸಂಭಾವನೆಯಾಗಿ ಹೋಗುತ್ತದೆ. ಇನ್ನುಳಿದ ಹಣದಲ್ಲಿ ಸಿನಿಮಾ ಮಾಡಿದರೆ ಕೆಟ್ಟದಾಗಿರುತ್ತದೆ. 'KGF-2' ಸಿನಿಮಾ ಮಾಡುವಾಗ ನಿರ್ಮಾಪಕರು ಸಂಭಾವನೆ ಎಷ್ಟು ಬೇಕು ಅಂದಾಗ ಯಶ್ ಸಂಭಾವನೆ ಬೇಡ, KGF ಸಿನಿಮಾ ಹಿಟ್ ಆಗಿದೆ. ನನ್ನ ಸಂಭಾವನೆಯ ಹಣ ಹಾಕಿ ಚೆನ್ನಾಗಿ ಸಿನಿಮಾ ಮಾಡಿ. ಗೆದ್ದಮೇಲೆ ನನಗೆ ಪಾಲು ಕೊಡಿ ಎಂದಿದ್ದರಂತೆ. ಎಂತಹ ಇಂಡಸ್ಟ್ರಿ ಅದು, ಎಂತಹ ಹೀರೊ ಕಣ್ರೀ ಅವ್ರು. ಆ ಹುಡುಗ ವಯಸ್ಸಿನಲ್ಲಿ ಚಿಕ್ಕವನು. ಆದರೂ ಆತನ ಕಾಲಿಗೆ ಬೀಳಬೇಕು ಅಂತ ಅನಿಸುತ್ತದೆ. ಯಾಕಂದರೆ ಯಶ್, ಒಬ್ಬ ನಿರ್ಮಾಪಕರು ಉಳಿಯಬೇಕು ಎಂದು ಬಯಸಿದ್ದಾರೆ" ಎಂದು ಕೆ. ರಾಜನ್ ಹೇಳಿದ್ದರು.
ಸದ್ಯ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳಲ್ಲಿ ಯಶ್ ನಟಿಸುತ್ತಿದ್ದಾರೆ. ಎರಡೂ ಚಿತ್ರಗಳ ನಿರ್ಮಾಣಕ್ಕೆ ಕೂಡ ಕೈ ಜೋಡಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ ಮೇಕಿಂಗ್ ಎಲ್ಲದರಲ್ಲಿ ತಮ್ಮನ್ನು ತೊಡಗಿಸಿಕೊಂಡು ಒಳ್ಳೆ ಸಿನಿಮಾ ಮಾಡಬೇಕು ಎನ್ನುವ ಪಣ ತೊಟ್ಟಿದ್ದಾರೆ. ಮುಂದೆ 'ಕೆಜಿಎಫ್- 3' ಸೇರಿ ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೂ ಕೈ ಜೋಡಿಸುವ ಸಾಧ್ಯತೆಯಿದೆ.


Click it and Unblock the Notifications











