ರಜನಿಕಾಂತ್, ಅಜಿತ್, ಧನುಷ್, ಕಮಲ್, ಸೂರ್ಯ ಸಂಭಾವನೆ ಮೇಲೆ ಬಿತ್ತು ನಿರ್ಮಾಪಕರ ಕಣ್ಣು!
ಒಂದ್ಕಾಲದಲ್ಲಿ ಸಾವಿರಗಳಲ್ಲಿ ಸಿನಿಮಾ ನಿರ್ಮಾಣ ಆಗುತ್ತಿತ್ತು. ಬಳಿಕ ಲಕ್ಷಗಳಲ್ಲಿ, ನಂತರ ಕೋಟಿಗಳಲ್ಲಿ, ಈಗ ನೂರಾರು ಕೋಟಿ ವ್ಯಯಿಸಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಕಲೆಕ್ಷನ್, ಓಟಿಟಿ, ಸ್ಯಾಟಲೈಟ್ ರೈಟ್ಸ್ ಅಂತೆಲ್ಲಾ ಭಾರೀ ಆದಾಯ ಮೂಲಗಳು ನಿರ್ಮಾಣವಾಗಿದೆ. ಅದೇ ಸಮಯದಲ್ಲಿ ಸ್ಟಾರ್ ನಟರ ಸಂಭಾವನೆ ಹೆಚ್ಚಾಗಿದೆ.
ಸ್ಟಾರ್ ನಟನನ್ನು ನೋಡೋಕೆ ಅಭಿಮಾನಿಗಳು ಮುಗಿಬೀಳ್ತಾರೆ. ಹಾಗಾಗಿ ನಟನ ಮುಖ ನೋಡಿ ಸಿನಿಮಾ ನಿರ್ಮಾಣ ಮಾಡುವವರೇ ಹೆಚ್ಚು. ಡಿಮ್ಯಾಂಡ್ ಹೆಚ್ಚಾದಂತೆ ಸ್ಟಾರ್ ನಟರು ಕೂಡ ಸಂಭಾವನೆ ಹೆಚ್ಚಿಸಿಕೊಂಡುಬಿಟ್ಟಿದ್ದಾರೆ. ಈಗ ನಿರ್ಮಾಪಕರು ಅಷ್ಟು ಸಂಭಾವನೆ ಕೊಟ್ಟು ಆತಂಕಕ್ಕೀಡಾಗುತ್ತಿದ್ದಾರೆ. ಸ್ಟಾರ್ ನಟರು ಸಂಭಾವನೆ ತೆಗೆದುಕೊಂಡು ಸಿನಿಮಾದಲ್ಲಿ ನಟಿಸಿ ಸುಮ್ಮನಾಗಿಬಿಡುತ್ತಾರೆ. ಲಾಭ, ನಷ್ಟದ ಅದೃಷ್ಟದ ಆಟ ನಿರ್ಮಾಪಕನಿಗೆ ಬಿಟ್ಟುಬಿಡ್ತಾರೆ.

ನಾಯಕ ನಟನಿಗೆ ನೂರಾರು ಕೋಟಿ ಸಂಭಾವನೆ ಕೊಟ್ಟು ನಿರ್ಮಾಪಕರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಇದೇ ಕಾರಣಕ್ಕೆ ತಮಿಳು ಸಿನಿಮಾ ನಿರ್ಮಾಪಕರ ಮಂಡಳಿ ಹೊಸ ಬೇಡಿಕೆಯನ್ನು ಸ್ಟಾರ್ ನಟರ ಮುಂದಿಡುವ ಆಲೋಚನೆಯಲ್ಲಿದೆ. ದೊಡ್ಡ ದೊಡ್ಡ ಸಿನಿಮಾಗಳೇ ಸೋತು ನಿರ್ಮಾಪಕರನ್ನು ನಷ್ಟದ ಕೂಪಕ್ಕೆ ದೂಡುತ್ತಿವೆ. ನಷ್ಟ ಆಯ್ತು ಎಂದು ಹೇಳಿಕೊಂಡರೆ ಅವಮಾನ, ಹೇಳದಿದ್ದರೆ ಕಷ್ಟ ಎನ್ನುವಂತಾಗಿದೆ.
ಕಮಲ್ ಹಾಸನ್ ನಟನೆಯ 'ಥಗ್‌ಲೈಫ್', ರಜನಿಕಾಂತ್ ನಟಿಸಿದ 'ಕೂಲಿ' ಹಾಗೂ 'ವೆಟ್ಟೆಯಾನ್', ಸೂರ್ಯ ನಟಿಸಿದ 'ಕಂಗುವ', 'ರೆಟ್ರೊ', ಅಜಿತ್ ಮಿಂಚಿದ್ದ 'ವಿಡಾಮುಯರ್ಚಿ' ಹೀಗೆ ಭಾರೀ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಹೀಗೆ ಪದೇ ನಿರ್ಮಾಪಕರಿಗೆ ಸಮಸ್ಯೆ ಆಗ್ತಿದೆ. ಇದರಿಂದ ಹೇಗಾದರೂ ಹೊರಗೆ ಬರಬೇಕು ಎಂದು ತಮಿಳು ನಿರ್ಮಾಪಕರು ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿದ್ದಾರೆ.

ಸ್ಟಾರ್ ನಟರಿಗೆ ಸಂಭಾವನೆ ರೂಪದಲ್ಲೇ ಎಲ್ಲಾ ಹಣವನ್ನು ಕೊಡುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ನಟರಿಗೆ ಸಂಭಾವನೆ ರೂಪದಲ್ಲಿ ಒಂದಷ್ಟು ಹಣ ಕೊಡುವುದು, ಸಿನಿಮಾದಿಂದ ಬಂದ ಲಾಭದಲ್ಲಿ ಇನ್ನುಳಿದ ಹಣ ಕೊಡಲು ಚರ್ಚಿಸಿದ್ದಾರೆ. ಇದರಿಂದ ಲಾಭ, ನಷ್ಟ ಎರಡರಲ್ಲಿ ಕೂಡ ನಟರಿಗೆ ಪಾಲು ಇರುತ್ತದೆ. ಸಿನಿಮಾ ಗೆದ್ದರೆ ಹೀರೊಗೆ ಹಣ ಬರುತ್ತದೆ, ಸೋತರೆ ನಷ್ಟದಲ್ಲೂ ಪಾಲು ಸಿಕ್ಕಂತಾಗುತ್ತದೆ.
ಸಂಭಾವನೆ ರೂಪದಲ್ಲೇ ಭಾರೀ ಮೊತ್ತದ ಹಣವನ್ನು ನಿರ್ಮಾಪಕರು ಮೊದಲಿಗೆ ಕೊಟ್ಟುಬಿಟ್ಟರೆ ಸಿನಿಮಾ ನಿರ್ಮಾಣಕ್ಕೆ ಹಣ ಇಲ್ಲದಂತಾಗುತ್ತದೆ. 200-300 ಕೋಟಿ ರೂ. ಬಜೆಟ್ ಸಿನಿಮಾ ನಿರ್ಮಾಣ ಮಾಡುವಾಗ ಇದು ನಿಜಕ್ಕೂ ಕಷ್ಟವಾಗುತ್ತದೆ. ಅರ್ಧದಷ್ಟು ಸಂಭಾವನೆ ಕೊಟ್ಟು ಉಳಿದಿದ್ದನ್ನು ಶೇರ್ ರೂಪದಲ್ಲಿ ಮಾತನಾಡಿಕೊಳ್ಳೋಣ ಎಂದು ತೀರ್ಮಾನಿಸಿದ್ದಾರೆ.
ರಜನಿಕಾಂತ್ ಒಂದು ಚಿತ್ರಕ್ಕೆ 150 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. 'ಕೂಲಿ' ಚಿತ್ರ ನಿರ್ದೇಶನ ಮಾಡಲು ನಿರ್ದೇಶಕ ಲೋಕೇಶ್ ಕನಕರಾಜ್ 50 ಕೋಟಿ ರೂ. ಸಂಭಾವನೆ ಪಡೆದಿದ್ದಾಗಿ ಹೇಳಿಕೊಂಡಿದ್ದರು. ದಳಪತಿ ವಿಜಯ್ ಚಿತ್ರವೊಂದಕ್ಕೆ 200 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಸದ್ಯ ರಾಜಕೀಯರಂಗದತ್ತ ಮುಖ ಮಾಡಿರುವ ದಳಪತಿ ಸಿನಿಮಾಗಳಿಂದ ದೂರಾಗುತ್ತಿದ್ದಾರೆ. ಹಾಗಾಗಿ ವಿಜಯ್ ಬಿಟ್ಟು ಇನ್ನುಳಿದ ನಟರ ಬಳಿ ಈ ಶೇರಿಂಗ್ ಬಗ್ಗೆ ಮನವಿ ಮಾಡಲು ನಿರ್ಮಾಪಕರ ಮಂಡಳಿ ಮನಸ್ಸು ಮಾಡಿದೆ.
ಈಗಾಗಲೇ ಕೆಲ ನಟರು ಹೀಗೆ ಶೇರಿಂಗ್ ಲೆಕ್ಕದಲ್ಲಿ ಸಂಭಾವನೆ ಪಡೆಯಲು ಆರಂಭಿಸಿದ್ದಾರೆ. ಸಿನಿಮಾ ಗೆಲ್ಲುತ್ತದೆ ಎಂದು ನಂಬಿಕೆ ಇರುವವರು ಲಾಭ ಬಂದರೆ ಹೆಚ್ಚು ಬರುತ್ತದೆ ಎಂದು ಧೈರ್ಯ ಮಾಡುತ್ತಿದ್ದಾರೆ. ಆದರೆ ಎಲ್ಲಾ ನಟರು ಇದನ್ನು ಒಪ್ಪಿಕೊಳ್ಳುವುದು ಅನುಮಾನ. ಅಂತಹ ಸಮಯದಲ್ಲಿ ಯಾರು ಸಂಭಾವನೆಯನ್ನು ಸಂಪೂರ್ಣವಾಗಿ ಕೊಡ್ತಾರೋ ಅಂತಹವರಿಗೆ ನಟರು ಕಾಲ್‌ಶೀಟ್ ಕೊಡುವ ಸಾಧ್ಯತೆ ಇರುತ್ತದೆ.


Click it and Unblock the Notifications











