Ajith kumar: ತಮಿಳು ಸ್ಟಾರ್ ಅಜಿತ್ ಮನೆ ಗೋಡೆ ಕೆಡವಿದ ಅಧಿಕಾರಿಗಳು: ಕಾರಣ ಇಲ್ಲಿದೆ
ಜನಪ್ರಿಯ ತಮಿಳು ನಟ ಅಜಿತ್ ಕುಮಾರ್ ಅವರ ಚೆನ್ನೈನ ಮನೆ ಪ್ರಸ್ತುತ ಸಮಸ್ಯೆಗಳನ್ನು ಎದುರಿಸುತ್ತಿದೆ. ತಿರುವನ್ಮಿಯೂರ್‌ನಿಂದ ಸ್ಥಳಾಂತರಗೊಂಡು ಪ್ರಸ್ತುತ ಚೆನ್ನೈನ ಇಂಜಂಬಾಕ್ಕಂನಲ್ಲಿ ವಾಸಿಸುತ್ತಿರುವ ಅವರ ಮನೆಯ ಗೋಡೆಯನ್ನು ಕೆಡವಲು ಕಾರಣವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇಂಜಂಬಾಕ್ಕಂನಲ್ಲಿ ಅವರಿರುವ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಮತ್ತು ಮಳೆನೀರು ಚರಂಡಿ ಕಾಮಗಾರಿ ನಡೆಯುತ್ತಿದ್ದು, ಅವರ ಮನೆಯ ಗೋಡೆಯನ್ನು ಕೆಡವಲಾಗಿದೆ. ನಟ ಅಜಿತ್ ಮನೆ ಅಷ್ಟೆ ಅಲ್ಲದೆ, ಪ್ರದೇಶದ ಹಲವು ಮನೆಗಳ ಸುತ್ತಲಿನ ಗೋಡೆಗಳು ನೆಲಸಮವಾಗಿವೆ. ಇದರಿಂದಾಗಿ ಅಜಿತ್ ಮನೆಯವರಿಗೆ ಮನೆಯಿಂದ ನೇರವಾಗಿ ಬೀಚ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ನಟ ಅಜಿತ್ 2017 ರಲ್ಲಿ ತಮ್ಮ ನಿವಾಸಕ್ಕೆ ಕೆಲವು ಮಾಡ್ರನ್ ಟಚ್ ನೀಡಲು ತಮ್ಮ ಮನೆಯನ್ನು ನವೀಕರಿಸಿದ್ದರು. ಆದ್ದರಿಂದ, ಅವರು ತಮ್ಮ ಕುಟುಂಬದೊಂದಿಗೆ ಬೇರೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯ ಎಲ್ಲಾ ವ್ಯವಸ್ಥೆಗಳನ್ನೂ ರಿಮೋಟ್‌ನಲ್ಲಿ ನಿರ್ವಹಿಸುವ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅವರು ತಮ್ಮ ಮನೆಯನ್ನು ಸಜ್ಜುಗೊಳಿಸಿದರು. ಮನೆಯನ್ನು ವಿನ್ಯಾಸಗೊಳಿಸಲು ಇಂಟೀರಿಯರ್ ಡಿಸೈನರ್ ಸಹಾಯ ಪಡೆದಿದ್ದರು. ತಮ್ಮ ಮಗನಿಗೆ ಆಟವಾಡಲು ವಿಶೇಷ ಕೊಠಡಿಗಳು, ನೃತ್ಯ ಮತ್ತು ಬೇರೆ ಬೇರೆ ಚಟುವಟಿಕೆಗಳನ್ನು ಕಲಿಯಲು ಪ್ರತ್ಯೇಕ ಸ್ಥಳವನ್ನು ನಿಯೋಜಿಸಿದ್ದರು.
ಅಜಿತ್ ಅವರ ಕೆಲಸದ ವಿಷಯಕ್ಕೆ ಬರುವುದಾದರೆ, ಜನವರಿಯಲ್ಲಿ ಅಜಿತ್ ಅವರ ತುನಿವು ಸಿನಿಮಾ ಬಿಡುಗಡೆಯಾಗಿತ್ತು. ನಟ ವರ್ಷಕ್ಕೆ ಒಂದು ಚಿತ್ರದಲ್ಲಿ ಮಾತ್ರ ನಟಿಸಲು ಬದ್ಧರಾಗಿದ್ದಾರೆ. ಈ ಕಾರಣದಿಂದ ಈ ವರ್ಷದಲ್ಲಿ ಅವರ ಮತ್ತೊಂದು ಸಿನಿಮಾ ಬರುವುದಿಲ್ಲ. ತುನಿವು ಬಳಿಕ ಬಿಡುವು ಮಾಡಿಕೊಂಡು ಬೈಕ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದರು.
ತುನಿವು ನಂತರ, ಅವರ ಮುಂದಿನ ಚಿತ್ರ ವಿದುತಲೈ ಅನ್ನು ಮಾಗಿಜ್ ತಿರುಮೇನಿ ನಿರ್ದೇಶಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡುತ್ತಿದೆ. ವಿದುತಲೈ ಚಿತ್ರದ ಚಿತ್ರೀಕರಣ ಅಜರ್ ಬೈಜಾನ್‌ನಲ್ಲಿ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಚಿತ್ರಕ್ಕಾಗಿ ಅಜಿತ್ ತಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಂಡಿದ್ದು, ಅವರ ಫೋಟೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಅಜಿತ್ ಅವರ ತಂದೆ ಪಿ ಸುಬ್ರಮಣ್ಯಂ ಮಣಿ ಈ ವರ್ಷದ ಆರಂಭದಲ್ಲಿ ನಿಧನರಾದರು. ಅವರು ಬಹಳ ದಿನಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಕುಟುಂಬದವರ ಹೇಳಿಕೆ ದೃಢಪಡಿಸಿದೆ. "ನಮ್ಮ ತಂದೆ ಪಿ.ಎಸ್. ಮಣಿ ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ನಿದ್ರೆಯಲ್ಲಿಯೇ ನಿಧನರಾದರು. ಅವರು 85 ವರ್ಷ ವಯಸ್ಸಿನವರಾಗಿದ್ದರು. ವಿಶೇಷವಾಗಿ ನಾಲ್ಕು ವರ್ಷಗಳ ಹಿಂದೆ ಅವರಿಗೆ ಪಾರ್ಶ್ವವಾಯುವಾಗಿದ್ದು, ಹಲವಾರು ವೈದ್ಯಕೀಯ ವೃತ್ತಿಪರರು ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಸಹಾಯ ಮತ್ತು ಬೆಂಬಲ ನೀಡಿದ್ದಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ" ಎಂದು ಹೇಳಿಕೆ ಬಿಡುಗಡೆ ಮಾಡಿದ್ದರು.


Click it and Unblock the Notifications











