ಅಜಿತನ ಹುಚ್ಚು ಸಾಹಸ ; ಬೈಕು ಎತ್ತಿಕೊಂಡು ಸುಯ್ಯ್ ಅಂತ ಹೋಗಿದ್ದೆಲ್ಲಿ ತಲಾ..?
ಒಬ್ಬ ಸೂಪರ್ ಸ್ಟಾರ್ ಹೀಗೆ ಇರಬೇಕು, ಹೀಗೆ ನಡೆದುಕೊಳ್ಳಬೇಕು, ಅಭಿಮಾನಿಗಳ ಜೊತೆ ಹೀಗೆ ಬೆರೆಯಬೇಕು ಎಂಬ ಅಲಿಖಿತ ನಿಯಮಗಳನ್ನ ಗಾಳಿಗೆ ತೂರಿದವರು ಅಜಿತ್. ಯಾರೊಂದಿಗೂ ಬೆರೆಯದ, ಯಾವ ಅಭಿಮಾನಿ ಸಂಘಗಳೂ ಸೃಷ್ಟಿಯಾಗದಂತೆ ನೋಡಿಕೊಂಡಿರುವ ತಲಾ ಎನ್ನುವ ಬಿರುದಿನಿಂದಲೇ ಫೇಮಸ್ಸಾಗಿರುವ ಅಜಿತ್, ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹಾಗೂ ವಿಚಿತ್ರ ನಟ ಅಂದರೆ ಅದು ತಪ್ಪಲ್ಲ.
ತಾನು ಒಪ್ಪಿಕೊಂಡ ಸಿನಿಮಾದ ಕೆಲಸಗಳೆಲ್ಲ ಮುಗಿದ ಮೇಲೆ, ಆ ಕಡೆ ತಿರುಗಿಯೂ ನೋಡದ ಅಜಿತ್ ಸಿನಿಮಾಗಳಲ್ಲಿ ನಟಿಸುವುದರ ಜೊತೆಗೆ ಕಾರ್ ರೇಸಿಂಗ್ ನಲ್ಲಿ ಪಾಲ್ಗೊಳ್ಳುವುದು, ಶೂಟಿಂಗ್ ಚಾಂಪಿಯನ್ ಶಿಪ್ಪಿನಲ್ಲಿ ಭಾಗವಹಿಸುವುದು ಹೀಗೆ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಬದುಕುವ ಶೈಲಿಯನ್ನ ರೂಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲ ನಟನೆಯ ಜೊತೆ ಬೈಕ್ ರೇಸರ್ ಕೂಡಾ ಆಗಿರುವ ತಲಾ ಅಜಿತ್ ತಮಗೆ ಇಷ್ಟ ಬಂದಾಗ ತಮ್ಮ ಪಾಡಿಗೆ ತಾವು ಬೈಕ್ ಏರಿ ಸುಯ್ಯ್ ಅಂತ ಹೊರಟು ಬಿಡುತ್ತಾರೆ. ಇದಕ್ಕೆ ಇನ್ನೊಂದು ಸಾಕ್ಷಿ ಅನ್ನುವಂತೆ ಸದ್ಯಕ್ಕೆ ಅಜಿತ್ ಬೈಕ್ ಎತ್ತಿಕೊಂಡು ಮಧ್ಯ ಪ್ರದೇಶಕ್ಕೆ ತೆರಳಿದ್ದಾರೆ.

ಹೌದು, ಹೇಗಾದರೂ ಇರಲಿ ವರ್ಷಕ್ಕೊಂದು ಸಿನಿಮಾ ಮಾಡಲಿ ಎಂದು ಇವರ ಅಭಿಮಾನಿಗಳು 'ವಿದಾ ಮುಯರಾಚಿ' ಚಿತ್ರಕ್ಕೆ ಇಲ್ಲಿ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದರೆ ಅಜಿತ್ ಮಾತ್ರ ಪಾಡಿಗೆ ತಾವು ಮಧ್ಯ ಪ್ರದೇಶದ ಭವ್ಯ ಪಾರಂಪರಿಕ ಕಟ್ಟಡಗಳು, ರಾಜ ಮಹಲ್‌ಗಳನ್ನ ಕಣ್ತುಂಬಿಕೊಳ್ಳುತ್ತಾ ಹಾಯಾಗಿದ್ದಾರೆ. ಸದ್ಯಕ್ಕೆ ಅಜಿತ್ ಅವರ ಈ ನಡೆ ಅಭಿಮಾನಿಗಳನ್ನಷ್ಟೇ ಅಲ್ಲ, ತಮಿಳು ಚಿತ್ರರಂಗದವರನ್ನ ಇನ್ನೊಮ್ಮೆ ಅಚ್ಚರಿಗೊಳಿಸಿದೆ. ಕೊನೆ ಪಕ್ಷ ಒಪ್ಪಿಕೊಂಡಿರುವ ವಿದಾ ಮುಯರಾಚಿ ಸಿನಿಮಾದ ಚಿತ್ರೀಕರಣವನ್ನ ಮುಗಿಸಿಯಾದರೂ ಹೋಗಬಾರದಾ ಎಂಬ ಮಾತು ಪಕ್ಕದ ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ.
ದುಬಾರಿ ಕಾರು ಹಾಗೂ ಬೈಕುಗಳ ಒಡೆಯ ..!
ಮೋಟೋ ರೇಸಿಂಗ್‌ನಲ್ಲಿ ವಿಪರೀತ ಆಸಕ್ತಿ ಹೊಂದಿರೋ ಅಜಿತ್ ಅವರ ಬಳಿ ದುಬಾರಿ ರೇಸಿಂಗ್ ವೆಹಿಕಲ್ಲುಗಳದ್ದೊಂದು ದೊಡ್ಡ ಸಂಗ್ರಹವೇ ಇದೆ. ವಿಶ್ವದೆಲ್ಲೆಡೆ ಜನಪ್ರಿಯವಾಗಿರೋ ಜಪಾನಿನ ಅತ್ಯಂತ ದುಬಾರಿ ಹೋಂಡಾ ಅಕಾಲರ್ಡ್ ವಿ6, ಬೆನ್ಜ್ ಸೀರೀಸ್ 740 ಎಲ್ ಐ ಮುಂತಾದ ಲೆಕ್ಕವಿರದಷ್ಟು ಕಾರುಗಳ ಜೊತೆಗೆ, ಎಪ್ರಿಲಿಯಾ ಪಾಫೋನಾರ್ಕ್, ಬಿಎಂಡಬ್ಲು 51000 ಆರ್ ಆರ್, ಬಿಎಂಡಬ್ಲ್ಯು 13005, ಕವಾಸಾಕಿ ನಿಂಜಾ ಝಡೆಕ್ಸ್ ೧೪ ಆರ್ ಸೇರಿದಂತೆ ಕನಸಿನಂಥಾ ದುಬಾರಿ ಬೈಕುಗಳೂ ಇವೆ
ಆಸ್ಪತ್ರೆಗೆ ದಾಖಲಾಗಿದ್ದ ನಟ..!
ತೀರಾ ಇತ್ತೀಚೆಗೆ ಅಜಿತ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರವನ್ನ ತಿಳಿದ ಅಭಿಮಾನಿಗಳು ಆತಂಕಗೊಂಡಿದ್ದರು. ಇವರ ಆರೋಗ್ಯಕ್ಕಾಗಿ ಪ್ರಾರ್ಥನೆಯನ್ನೂ ಮಾಡಿದ್ದರು. ಆದರೆ ಅಜಿತ್ ಮಾತ್ರ ತಮ್ಮ ಪಾಡಿಗೆ ತಾವು ಆಸ್ಪತ್ರೆಯಿಂದ ಎದ್ದು ಹೊರ ನಡೆದಿದ್ದರು. ತಮ್ಮ ಮಗನ ಶಾಲೆಯ ಆವರಣದಲ್ಲಿ ಪ್ರತ್ಯಕ್ಷರಾಗಿದ್ದರು. ಈಗ ನೋಡಿದರೆ ಸೀದಾ ಮಧ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾರೆ ಅಜಿತ್

ಒಟ್ಟಿನಲ್ಲಿ ಯಶಸ್ಸೆಂಬುದು ಶಿಖರವೇರಿಸಿ ಕೂರಿಸಿದರೂ ಅಲ್ಲಿಂದ ಇಳಿದು ಬಂದು ಬೇರ‍್ಯಾವುದೋ ಮಾಯೆಯ ತೆಕ್ಕೆಯಲ್ಲಿ ಕಳೆದು ಹೋಗೋ ಮನಸ್ಥಿತಿ ಅಜಿತ್ ಅವರದ್ದಾಗಿರಬೇಕು. ಹೀಗಾಗಿಯೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದರೂ ಸಣ್ಣ ಸಣ್ಣ ಖುಷಿಗಳನ್ನು ಕಳೆದುಕೊಳ್ಳಬಾರದು ಎಂದೇ ಹೀಗೆ ಅಜ್ಞಾತವಾಸಕ್ಕೆ ಅಜಿತ್ ತೆರಳುತ್ತಾರೋ ಏನೋ.


Click it and Unblock the Notifications











